ನನ್ನ, ವಿಷ್ಣುವರ್ಧನ್ ಮುನಿಸು ಅಷ್ಟು ದೀರ್ಘಾವಧಿಯದ್ದು. ಅದರಿಂದ ಎಷ್ಟು ನಷ್ಟವಾಯಿತು ಎಂದು ಯೋಚಿಸಿದರೆ ನೋವಾಗುತ್ತದೆ. ದಿಲೀಪ್ ಕುಮಾರ್, ಮಧುಬಾಲ ನಡುವೆ ಇಂಥದ್ದೇ ಮುನಿಸು ಇದ್ದುದರಿಂದ ಆಮೇಲೆ ಅವರಿಬ್ಬರೂ ಸಿನಿಮಾಗಳನ್ನೇ ಮಾಡಲಿಲ್ಲ. ‘ನಾಗರಹಾವು’ ಸಿನಿಮಾ ಬಂದಮೇಲೆ ಪುಟ್ಟಣ್ಣ ಕಣಗಾಲ್ ಹಾಗೂ ವಿಷ್ಣು ಮತ್ತೊಂದು ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಸಣ್ಣ ಸ್ವಪ್ರತಿಷ್ಠೆಯಷ್ಟೆ ಕಾರಣ. ಸಿದ್ಧಲಿಂಗಯ್ಯ- ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಇನ್ನಷ್ಟು ಸಿನಿಮಾಗಳು ಬರದೇಹೋಗಲೂ ಸ್ವಪ್ರತಿಷ್ಠೆಯೇ ಕಾರಣ ಎನ್ನುವುದನ್ನು ನಾನು ಬಲ್ಲೆ. ನನ್ನ, ವಿಷ್ಣುವಿನ ವಿಷಯದಲ್ಲಿಯೂ ಆ ಸ್ವಪ್ರತಿಷ್ಠೆ ಮೆರೆದಿದ್ದರಿಂದಲೇ ಅಷ್ಟು ವರ್ಷ ನಾವು ದೂರ ಉಳಿದದ್ದು.

ನಾನು ಒಂದು ಹೆಜ್ಜೆ ಮುಂದೆ ಹೋಗಿ, ವಿಷ್ಣು ಜೊತೆಗೆ ಮುಕ್ತವಾಗಿ ಮಾತನಾಡಬಹುದಾಗಿತ್ತು. ಅವನು ನಿರ್ದೇಶಕರ ಸಂಘಕ್ಕೆ ಒಂದು ಪ್ರತಿಕ್ರಿಯೆ ಕಳುಹಿಸಿ, ಪರಿಸ್ಥಿತಿ ತಿಳಿಯಾಗುವಂತೆ ಮಾಡಬಹುದಿತ್ತು. ಅವೆರಡೂ ಆಗಲಿಲ್ಲ. ಅವನ ತಾಯಿ ಮೃತಪಟ್ಟ ನಂತರ ನಾನು ನೋಡಲು ಹೋಗಲಿಲ್ಲ ಎನ್ನುವುದು ಅವನ ಮನಸ್ಸಿನಲ್ಲಿ ಉಳಿಯಿತು. ಒಡೆದ ಕನ್ನಡಿಯನ್ನು ಜೋಡಿಸಲು ಆಗದು ಎನ್ನುವ ವಿಷ್ಣು ಮಾತು ನನ್ನನ್ನು ಕಾಡಿತು.

ಎಷ್ಟೋ ಕಥೆಗಳನ್ನು ಯೋಚಿಸುವಾಗ ಮುಖ್ಯಪಾತ್ರ ಅವನು ಮಾಡಿದರಷ್ಟೇ ಚೆನ್ನಾಗಿರುತ್ತದೆ ಎನ್ನಿಸಿ ನಾನು ಖಿನ್ನನಾದದ್ದೂ ಇದೆ. ತೆಲುಗು, ಹಿಂದಿ ಚಿತ್ರರಂಗದಲ್ಲಿ ಕೈಯಾಡಿಸೋಣ ಎಂದುಕೊಂಡು ಹೋದಾಗ, ಅಲ್ಲಿಯೂ ಕೆಲವು ಕಥೆಗಳು ಅವನಿಗೆ ಹೊಂದುತ್ತವೆ ಎಂದು ಎನಿಸುತ್ತಿತ್ತು. ನಮ್ಮ ಸ್ನೇಹಕ್ಕೆ ಹಿಡಿದ ಗ್ರಹಣ ಸುದೀರ್ಘಾವಧಿಯದ್ದು. ನನ್ನ, ವಿಷ್ಣು ಕಾಂಬಿನೇಷನ್ನ ಶೇ 85ರಷ್ಟು ಸಿನಿಮಾಗಳು ಯಶಸ್ವಿಯಾಗಿದ್ದವು. ಹಾಗಾಗಿ ನಮ್ಮ ಮುನಿಸಿನಿಂದ ಚಿತ್ರರಂಗಕ್ಕೆ ಇನ್ನಷ್ಟು ಒಳ್ಳೆಯ ಸಿನಿಮಾಗಳು ಆಗುವ ಸಾಧ್ಯತೆ ತಪ್ಪಿಹೋಯಿತು. ಕನ್ನಡದಲ್ಲಿಯಂತೂ ಕಥೆ ಮಾಡಲು ಕೂತಾಗಲೆಲ್ಲಾ ವಿಷ್ಣು ಮುಖವೇ ನನಗೆ ಹೊಳೆಯುತ್ತಿದ್ದುದು. ಹಾಗಾಗಿಯೇ ನಾನು ಅನ್ಯಭಾಷೆಗಳಿಗೆ ಹೋಗಿ ಸಿನಿಮಾ ಮಾಡಿ ಬಂದೆ. ರಾಮೋಜಿರಾವ್ ಅವರು ಒಂದು ತೆಲುಗು ಸಿನಿಮಾ ಮಾಡುವ ಅವಕಾಶ ಕೊಟ್ಟರು.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಪ್ರತಿವರ್ಷ ವಾರ್ಷಿಕ ಸಮಾರಂಭ ಮಾಡುತ್ತಾ ಬಂದಿತ್ತು. ಪುಟ್ಟಣ್ಣ ಕಣಗಾಲ್ ಅದರ ಅಧ್ಯಕ್ಷರಾಗಿದ್ದ ಕಾಲದಿಂದಲೂ ನಡೆದುಕೊಂಡು ಬಂದ ಪರಂಪರೆ ಅದು. ಎಲ್.ವಿ.ಪ್ರಸಾದ್, ಯಶ್ ಚೋಪ್ರಾ, ಮಣಿರತ್ನಂ, ಭಾರತೀರಾಜ್ ಮೊದಲಾದ ದಿಗ್ಗಜ ನಿರ್ದೇಶಕರು ಬಂದು ಪ್ರಶಸ್ತಿಗಳನ್ನು ಕೊಟ್ಟು ಹೋಗುವ ಸಮಾರಂಭ ಅದಾಗಿತ್ತು. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಕೊಡುತ್ತಿದ್ದೆವು. ವಿಷ್ಣುವಿಗೆ ಹೇಳಿ ಅವನ ತಂದೆ ನಾರಾಯಣ ರಾವ್ ಅವರ ಹೆಸರಿನಲ್ಲಿ ಶ್ರೇಷ್ಠ ಚಿತ್ರಕಥೆಗೆ ಒಂದು ಪ್ರಶಸ್ತಿಯನ್ನು ಪ್ರಾರಂಭಿಸಿದ್ದೆವು. ಅವನೇ ಖುದ್ದು ಬಂದು ಆ ಪ್ರಶಸ್ತಿಯನ್ನು ಪ್ರತಿವರ್ಷವೂ ನೀಡುತ್ತಿದ್ದ. ಆದರೆ, ಆ ವರ್ಷ ನಮ್ಮ ಸಂಘದಿಂದ ಅವನಿಗೆ ಖಾರವಾದ ಪತ್ರ ಹೋದದ್ದರಿಂದ ಕೋಪಗೊಂಡು ಪ್ರಶಸ್ತಿ ಪ್ರದಾನ ಮಾಡಲು ಅವನು ಬರಲೇ ಇಲ್ಲ. ಅವನು ಬಂದು ಪ್ರಶಸ್ತಿ ನೀಡಿದ್ದರೆ ಆಗ ದೊಡ್ಡವನಾಗುತ್ತಿದ್ದ. ಆ ಪ್ರಶಸ್ತಿಯನ್ನು ಬೇರೆ ಯಾರಿಂದಲೋ ಕೊಡಿಸಿದೆವು. ನನಗೂ ನಿರ್ದೇಶಕ ಎಂಬ ಸ್ವಪ್ರತಿಷ್ಠೆ ಜೋರಾಗಿ ಇದ್ದುದರಿಂದ ಅವನ ಅಂಥ ತೀರ್ಮಾನಗಳನ್ನು ಒಪ್ಪಿಕೊಳ್ಳಲು ಆಗಲಿಲ್ಲ.

ನಾವು ಮಾತು ಬಿಟ್ಟಿದ್ದರೂ ಆಗಾಗ ಒಟ್ಟಿಗೆ ಸಿನಿಮಾ ಮಾಡುವ ಸಾಧ್ಯತೆಗಳು ಗೋಚರಿಸಿದ್ದು ಉಂಟು. ‘ದುರ್ಗಾಸ್ತಮಾನ’ ಸಿನಿಮಾ ಚಿತ್ರಕಥೆಗೆ ನಾನು ಎರಡು ವರ್ಷ ವ್ಯಯಿಸಿದ್ದೆ. ಸಿ.ವಿ.ಎಲ್. ಶಾಸ್ತ್ರಿ ಅವರ ಬಳಿ ಅದರ ಹಕ್ಕುಗಳಿದ್ದವು. ಚಿತ್ರದುರ್ಗಕ್ಕೆ ಹೋಗಿ ಆ ಕಾದಂಬರಿಯ ಕಥೆ ನಡೆದಿರಬಹುದಾದ ಪರಿಸರವನ್ನೆಲ್ಲಾ ನೋಡಿಕೊಂಡು ನಾನು ಚಿತ್ರಕಥೆ ರೂಪಿಸಿದ್ದೆ. ಅದರಲ್ಲಿಯೂ ವಿಷ್ಣು ಅಭಿನಯಿಸುವುದು ಸೂಕ್ತ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದರು. ಅವರನ್ನೇ ಕೇಳುವಂತೆ ಹೇಳಿದೆ. ಆದರೆ, ವಿಷ್ಣು ನನ್ನ ನಿರ್ದೇಶನದಲ್ಲಿ ಆ ಸಿನಿಮಾದಲ್ಲಿ ನಟಿಸಲು ಕೂಡ ಒಪ್ಪಲಿಲ್ಲ. ಆಗಲೇ ಹೇಳಿದಂತೆ ‘ಹಗಲುಗನಸು’ ಕೂಡ ಸಿನಿಮಾ ಮಾಡಲು ಆಗಲೇ ಇಲ್ಲ. ವಿಷ್ಣು ಯಾವಾಗಲೂ ಹೇಳುತ್ತಿದ್ದ: ಕಾಮ ಹಾಕಬೇಡ, ಫುಲ್ಸ್ಟಾಪ್ ಇಡುವುದನ್ನು ಕಲಿ. ಅವನ ಆ ಮಾತು ನಮ್ಮ ಸ್ನೇಹದ ವಿಷಯದಲ್ಲಿ ಸಾಕಾರವಾದಂತೆ ಆಗಿಬಿಟ್ಟಿತು. ತ.ರಾ.ಸು. ಅವರ ದುರ್ಗಾಸ್ತಮಾನ ಸಿನಿಮಾದಲ್ಲಿ ನಟಿಸಲು ವಿಷ್ಣು ಒಪ್ಪಿದ್ದಿದ್ದರೆ ಆಗಲೇ ನಮ್ಮ ನಡುವಿನ ಮುನಿಸು ಮರೆಯಾಗುತ್ತಿತ್ತೋ ಏನೋ?

ಹಿಂದಿಯಲ್ಲಿ ದಿಲೀಪ್ ಕುಮಾರ್ ತರಹದ ನಟರಿಗೆ ಕಥೆಗಳನ್ನು ನೀಡಿ ಯಶಸ್ವಿಯಾಗಿದ್ದ ಖಾದರ್ ಖಾನ್, ಸಲೀಂ ಕುಮಾರ್ ಅವರಿಂದ ಕಥೆಗಳನ್ನು ಮಾಡಿಸಿದೆ. ಆಗಲೂ ಕೆಲವು ಕಥೆಗಳ ಮುಖ್ಯಪಾತ್ರಗಳಿಗೆ ವಿಷ್ಣು ಸೂಕ್ತ ನಟ ಎಂದು ಮನಸ್ಸು ಹೇಳುತ್ತಿತ್ತು. ಹಿಂದಿಯ ‘ವಿಧಾತ’ ಸಿನಿಮಾ ಆಧರಿಸಿ ‘ಪಿತಾಮಹ’ ಎಂಬ ಸಿನಿಮಾ ಮಾಡಿದೆ. ರವಿ ಅದನ್ನು ನಿರ್ದೇಶಿಸಿದ್ದರು. ಮೂಲ ಚಿತ್ರದಲ್ಲಿ ದಿಲೀಪ್ ಕುಮಾರ್ ಮಾಡಿದ್ದ ಪಾತ್ರವನ್ನು ತಾನು ಮಾಡಬೇಕು ಎಂಬ ಆಸೆ ಇದೆ ಎಂದು ವಿಷ್ಣು ಒಮ್ಮೆ ನನ್ನಲ್ಲಿ ಹೇಳಿಕೊಂಡಿದ್ದ. ಅದಕ್ಕೇ ನನ್ನ ತಮ್ಮನನ್ನು ವಿಷ್ಣು ಬಳಿ ಕಳುಹಿಸಿ, ಆ ಪಾತ್ರದಲ್ಲಿ ನಟಿಸುತ್ತಾನೆಯೇ ಎಂದು ಕೇಳಿಕೊಂಡು ಬರುವಂತೆ ಹೇಳಿದ್ದೆ. ಆಗಲೂ ವಿಷ್ಣು ನಮ್ಮ ಆಮಂತ್ರಣವನ್ನು ನಿರಾಕರಿಸಿಬಿಟ್ಟ. ಮೂಡ್ ಇಲ್ಲ, ಬಿಡುವಿಲ್ಲ, ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದೆಲ್ಲಾ ಅವನು ಹೇಳುತ್ತಿದ್ದ. ಆಗ ನಮ್ಮ ನಡುವಿನ ಮುನಿಸು ಇನ್ನಷ್ಟು ಗಾಢವಾಯಿತು.

ನನ್ನ ಮಗನನ್ನು ನಾಯಕನನ್ನಾಗಿ ಪರಿಚಯಿಸಲು ‘ಲವ್’ ಸಿನಿಮಾ ಚಿತ್ರಕಥೆ ಬರೆದಾಗಲೂ ನನ್ನ ತಲೆಯಲ್ಲಿ ವಿಷ್ಣುವಿಗಾಗಿಯೇ ಒಂದು ಪಾತ್ರ ಸೃಷ್ಟಿಯಾಯಿತು. ಅದನ್ನು ಬರೆದ ಮೇಲೂ ಅವನೇ ಆ ಪಾತ್ರ ಮಾಡಿದರೆ ಚೆನ್ನ ಎನಿಸಿತು. ಆದರೆ, ನಾವಿಬ್ಬರೂ ಎಷ್ಟು ದೂರವಾಗಿದ್ದೆವು ಎಂದರೆ ಅವನನ್ನು ನಟಿಸುವಂತೆ ಕರೆಯುವ ಉತ್ಸಾಹ ಸಂಪೂರ್ಣ ಬತ್ತಿಹೋಗಿತ್ತು. ಅವನು ನಟಿಸದೇ ಇದ್ದರೇನು, ಬೇರೆ ದಿಗ್ಗಜರನ್ನೇ ಕರೆದುಕೊಂಡು ಬಂದು ಆ ಪಾತ್ರ ಮಾಡಿಸುತ್ತೇನೆ ಎಂಬ ಹಟವೂ ನನ್ನಲ್ಲಿ ಜಾಗೃತವಾಗಿತ್ತು.

‘ಲವ್’ ಸಿನಿಮಾದಲ್ಲಿ ವಿಷ್ಣು ಮಾಡಬೇಕಿದ್ದ ಪಾತ್ರವನ್ನು ಮೋಹನ್ ಲಾಲ್ ಅವರಿಂದ ಮಾಡಿಸಿದೆ. ಅದು ಚಾಲಕನ ಪಾತ್ರವಾದರೂ ತುಂಬಾ ತೂಕದ್ದಾಗಿತ್ತು. ಪ್ರಕಾಶ್ ರೈ ಅವರನ್ನು ಇನ್ನೊಂದು ಪಾತ್ರಕ್ಕೆ ಸಂಪರ್ಕಿಸಿದೆ. ಅವರದ್ದೂ ಡೇಟ್ಸ್ ಸಿಗಲಿಲ್ಲ. ಆ ಪಾತ್ರಕ್ಕೆ ನನಗೆ ಅಮರೀಶ್ ಪುರಿ ಸಿಕ್ಕರು. ಸಿನಿಮಾದಲ್ಲಿ ಆಗುವುದೇ ಹೀಗೆ, ನಾವು ನಿರ್ದಿಷ್ಟ ಪಾತ್ರಕ್ಕೆ ಇಂಥವರೇ ಆಗಬೇಕು ಎಂದು ಯೋಚಿಸಿರುತ್ತೇವೆ. ಆದರೆ, ಕೆಲವೊಮ್ಮೆ ಆಗುವುದೇ ಬೇರೆ. ‘ಯುದ್ಧ’ ಸಿನಿಮಾದ ಚಿತ್ರಕಥೆ ಮಾಡಿಕೊಂಡು, ವಿಷ್ಣು, ಅಂಬರೀಷ್ ಹಾಗೂ ಶಂಕರ್ನಾಗ್ ಅದರಲ್ಲಿ ನಟಿಸುತ್ತಾರೆ ಎಂದು ಪ್ರಕಟಿಸಿಯೂಬಿಟ್ಟಿದ್ದೆ. ಅದಕ್ಕೆ ನಾನು ಎಷ್ಟು ಬದ್ಧನಾಗಿದ್ದೆನೆಂದರೆ, ರಾಜ್ಕುಮಾರ್ ಅವರೇ ಕರೆದು ಆ ಸಿನಿಮಾದಲ್ಲಿ ಅಭಿನಯಿಸುವುದಾಗಿ ಹೇಳಿದರೂ ಕರಗಿರಲಿಲ್ಲ. ಅದನ್ನು ಆಗಲೇ ಘೋಷಿಸಿ ಆಗಿದೆ, ಆ ವಸ್ತುವಿನ ಸಿನಿಮಾ ನಿಮಗೆ ಮಾಡಲು ಸಾಧ್ಯವಿಲ್ಲ ಎಂದು ಅವರನ್ನು ಒಪ್ಪಿಸಿದ್ದೆ. ಆಮೇಲೆ ರಾಜ್ಕುಮಾರ್ ಹಾಗೂ ಶಿವಣ್ಣ ಇಬ್ಬರೂ ಅಭಿನಯಿಸಬೇಕು ಎಂಬ ಉದ್ದೇಶದಿಂದ ಬೇರೆ ಚಿತ್ರಕಥೆಯೊಂದನ್ನು ಮಾಡಿದೆ. ಆ ಚಿತ್ರಕಥೆಯನ್ನು ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ತಿದ್ದಿ ಕೊಟ್ಟಿದ್ದರು. 25 ದಿನಗಳ ಕಾಲ ಅವರಿಂದ ನಾನು ಕೆಲಸ ಮಾಡಿಸಿದ್ದೆ. ಆ ಸಿನಿಮಾದ ಮಾತುಕತೆ ಪ್ರಾರಂಭಿಸಿ, ಚಿತ್ರೀಕರಣಕ್ಕೆ ಇನ್ನೇನು ಸಜ್ಜಾಗಬೇಕು ಎಂದುಕೊಳ್ಳುವಷ್ಟರಲ್ಲಿ ವೀರಪ್ಪನ್, ರಾಜ್ಕುಮಾರ್ ಅವರನ್ನು ಅಪಹರಿಸಿದ. ಆ ಸಿನಿಮಾ ಕೂಡ ನನ್ನ ಪಾಲಿಗೆ ಕನಸಾಗಿಯೇ ಉಳಿಯಿತು.

ನಾನು, ವಿಷ್ಣು ಇಬ್ಬರಲ್ಲಿ ಯಾರಾದರೊಬ್ಬರು ಒಂದೆರಡು ಹೆಜ್ಜೆ ಮುಂದೆ ಬಂದಿದ್ದರೆ ಅನೇಕ ಒಳ್ಳೆಯ ಸಿನಿಮಾಗಳು ಮೂಡಿಬರುತ್ತಿದ್ದುದರಲ್ಲಿ ಅನುಮಾನವೇ ಇಲ್ಲ. ಮುನಿಸನ್ನು ಆಗೀಗ ಬದಿಗೊತ್ತಿ, ವಿಷ್ಣು ಒಂದಾದರೂ ಸಿನಿಮಾದಲ್ಲಿ ಅಭಿನಯಿಸಲಿ ಎಂದು ನನ್ನ ಆಪ್ತೇಷ್ಟರಿಂದ ಓಲೈಸಲು ಸಾಕಷ್ಟು ಯತ್ನಿಸಿದೆ. ಆಗಲೂ ನಮ್ಮಿಬ್ಬರ ಸ್ವಪ್ರತಿಷ್ಠೆಯೇ ಗೋಡೆಗಳಾಗಿ ನಿಲ್ಲುತ್ತಿದ್ದವು. ನಾನೇ ಖುದ್ದು ಹೋಗಿ ಮಾತನಾಡಿಸಬೇಕು ಎಂಬ ಭಾವನೆ ಅವನಿಗೆ ಇತ್ತೋ ಏನೋ?

ಅಂಬರೀಷ್ ಹಾಗೂ ಸುಮಲತಾ ಇಬ್ಬರೂ ತಂತಮ್ಮ ಹುಟ್ಟಿದ ದಿನಗಳ ಪಾರ್ಟಿಗೆ ನನ್ನ ಕುಟುಂಬವನ್ನು ಆಹ್ವಾನಿಸುತ್ತಿದ್ದರು. ಅವರು ಕರೆದಾಗ ನಾನು ತಪ್ಪಿಸಿಕೊಳ್ಳದೇ ಹೋಗುತ್ತಿದ್ದೆ. ಒಮ್ಮೆ ಅಂಬರೀಷನ ಹುಟ್ಟಿದ ದಿನದ ಪಾರ್ಟಿ ಇತ್ತು. ನಾನು, ನನ್ನ ಹೆಂಡತಿ, ಮಗ ಹೋಗಿದ್ದೆವು. ಚಿತ್ರರಂಗದ ಆಯ್ದ ದಿಗ್ಗಜರು ಅವನ ಪಾರ್ಟಿಯಲ್ಲಿ ಇದ್ದರು.

ಸುಮಲತಾ ಅವರಿಗೆ ಹಳೆಯ ಹಿಂದಿ ಸಿನಿಮಾ ಹಾಡುಗಳೆಂದರೆ ತುಂಬ ಇಷ್ಟ. ಯಾರಾದರೂ ಒಳ್ಳೆಯ ಹಾಡುಗಾರರನ್ನು ಕರೆಸಿ, ಅಂಥ ಹಿಂದಿ ಗೀತೆಗಳನ್ನು ಹಾಡಿಸುವುದು ಅವರ ಪಾರ್ಟಿಯ ವಿಶೇಷವಾಗಿತ್ತು. ಹಾಡಿನ ಕಾರ್ಯಕ್ರಮ ಪ್ರಾರಂಭವಾದಾಗ ಬೆಳಕು ಮಂದವಾಗುತ್ತಿತ್ತು. ಆ ದಿನವೂ ಬೆಳಕು ಮಂದವಾಯಿತು. ಎದುರಲ್ಲಿ ಗಾಯಕ ಮಾತ್ರ ಕಾಣುತ್ತಾ ಇದ್ದುದು. ಹಿಂದಿನಿಂದ ನನ್ನನ್ನು ಯಾರೋ ಬಿಗಿಯಾಗಿ ಅಪ್ಪಿದಂತೆ ಆಯಿತು. ಕಿವಿಯಲ್ಲಿ ಸಣ್ಣ ದನಿ ಉಸುರಿದಂತೆ. ಅದು ಗಟ್ಟಿ ದೇಹದ ವ್ಯಕ್ತಿಯ ಬಿಗಿಯಾದ ಪರಿಚಿತ ಅಪ್ಪುಗೆ. ತಿರುಗಿ ನೋಡಿದರೆ ವಿಷ್ಣು. ನನಗೆ ಮಾತೇ ಹೊರಡಲಿಲ್ಲ. ಅವನು ಆಗ ಅಧ್ಯಾತ್ಮದಲ್ಲಿ ಆಸಕ್ತನಾಗಿದ್ದ. ಸಾಯಿಬಾಬಾ ಅವರ ಪರಮ ಭಕ್ತನಾಗಿದ್ದ. ‘ನಾವಿಬ್ಬರೂ ಹೀಗೆ ಬೇರೆ ಬೇರೆ ಇರೋದು ಸಾಯಿಬಾಬಾಗೆ ಇಷ್ಟವಿಲ್ಲ ಕಣೋ’ ಎಂದ. ನನಗೆ ಕಣ್ಣು, ಹೃದಯ ತುಂಬಿಬಂದಿತು. ವಿಷ್ಣು ದೊಡ್ಡಮನುಷ್ಯ ಆಗಿಬಿಟ್ಟ. ನಾನು ಸಣ್ಣವನಾದೆ. ಅವನು ಆ ದಿನ ಮಾಡಿದ ಕೆಲಸವನ್ನು ನಾನು ಎಂದೋ ಮಾಡಬಹುದಾಗಿತ್ತಲ್ಲ ಎನಿಸಿತು.

ಆ ದಿನ ಅಂಬಿ ವೇದಿಕೆಗೆ ಕರೆದು, ನಮ್ಮಿಬ್ಬರ ಸ್ನೇಹ ಮರು ಜೋಡಣೆಯಾದದ್ದನ್ನು ಘೋಷಿಸಿದ. ಎಲ್ಲರಿಂದ ಕರತಾಡನ. ಆ ದಿನ ನಡುರಾತ್ರಿವರೆಗೆ ನನಗೆ ಫೋನ್ಗಳ ಮೇಲೆ ಫೋನ್. ಆ ದಿನದ ಪಾರ್ಟಿಯನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಅಷ್ಟು ಸುದೀರ್ಘ ಸಮಯದವರೆಗೆ ಕವಿದಿದ್ದ ಕಾರ್ಮೋಡ ಚದುರಿದಂತಾಯಿತು.

ಆಮೇಲೆ ಎರಡು ಮೂರು ಚಿತ್ರಕಥೆಗಳನ್ನು ಅವನಿಗೆ ಹೇಳಿದೆ. ‘ಎಲ್ಲಾ ದೊಡ್ಡ ಬಜೆಟ್ನ ಕಥೆಗಳನ್ನೇ ಮಾಡುತ್ತೀಯ. ಒಂದು ಸಣ್ಣ ಬಜೆಟ್ನ ಸಿನಿಮಾ ಮಾಡು’ ಎಂದು ಅವನು ಕಿವಿಮಾತು ಹೇಳಿದ್ದ.

‘ಬೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಸಿನಿಮಾ ಮಾಡಿದಾಗ ಕನ್ನಡದ ಹದಿನಾಲ್ಕು ಪ್ರಮುಖ ನಟರನ್ನು ಸೇರಿಸಿ ಒಂದು ಹಾಡನ್ನು ಚಿತ್ರೀಕರಿಸಿದೆವು. ಹದಿನಾಲ್ಕು ನಿಮಿಷಗಳ ಅವಧಿಯ ದೊಡ್ಡ ಹಾಡು ಅದು. ಅದರಲ್ಲಿ ಅಭಿನಯಿಸಲು ಕರೆದಾಗ, ಎರಡೇ ಸೆಕೆಂಡ್ನಲ್ಲಿ ಅವನು ಒಪ್ಪಿದ.

ತಾನೇ ಉಡುಗೆ ತೊಟ್ಟು ಬಂದ. ಚಿಕ್ಕಾಸಿನ ಸಂಭಾವನೆಯನ್ನೂ ಪಡೆಯಲಿಲ್ಲ. ವಿಷ್ಣು, ಶಿವರಾಜ್ಕುಮಾರ್, ರಮೇಶ್ ಅರವಿಂದ್, ಪುನೀತ್, ದರ್ಶನ್ ಮೊದಲಾದವರೆಲ್ಲಾ ಕುಣಿದಿರುವ ಹಾಡು ಅದು. ವಿಷ್ಣು ಎಂಥ ಹೃದಯವಂತ ಎನ್ನುವುದಕ್ಕೆ ನಮ್ಮ ಸ್ನೇಹ ಮತ್ತೆ ಬೆಸೆದುಕೊಂಡ ಬಗೆ ಹಾಗೂ ಆಮೇಲೆ ಅವನು ನನ್ನ ಜೊತೆ ಎಂದಿನಂತೆ ಮಾತನಾಡಿದ್ದೇ ಸಾಕ್ಷಿ.

ಮುಂದಿನ ವಾರ: ಚಿತ್ರಕಥೆಗಳ ರೂಪಿಸುವ ಇನ್ನಷ್ಟು ಸವಾಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.