ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ದಂತಕಥೆ

Last Updated 28 ಜುಲೈ 2012, 19:30 IST
ಅಕ್ಷರ ಗಾತ್ರ

`ಸ್ವತಂತ್ರ ಭಾರತದಲ್ಲಿ ಮಹಿಳೆಯ ಸ್ಥಾನಮಾನ ಪೂರ್ಣ ಸುಧಾರಿಸಿಲ್ಲ. ಇದನ್ನು ಅಂಕಿ ಅಂಶಗಳು ಸಾರಿ ಹೇಳುತ್ತಿವೆ. ಸೌಂದರ್ಯ ಸ್ಪರ್ಧೆ ಇತ್ಯಾದಿ ವಾಣಿಜ್ಯವಿಶ್ವದ ಸರಕು ಸಂಸ್ಕೃತಿಯ ಆಕ್ರಮಣಗಳ ಸೂಕ್ಷ್ಮ ಸವಾಲುಗಳು ಮಹಿಳಾ ಹೋರಾಟದ ಮುಂದಿದ್ದು ಈ ಹೋರಾಟ ಸತತ ಪ್ರಕ್ರಿಯೆಯಾಗಿರಬೇಕು~.

1996ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ವಿಶ್ವ ಸೌಂದರ್ಯ ಸ್ಪರ್ಧೆ ವಿರುದ್ಧ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಕ್ಯಾಪ್ಟನ್ ಲಕ್ಷ್ಮಿ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಈ ವರದಿಗಾರ್ತಿಗೆ ಹೇಳಿದ್ದ ಮಾತುಗಳಿವು.

ಈ ಮಾತುಗಳಿಗೆ ಅನುಗುಣವಾಗಿ ಜೀವನದ ಅಂತಿಮಕ್ಷಣದವರೆಗೂ ಹೋರಾಟವನ್ನೇ ಉಸಿರಾಡಿದವರು ಅವರು. ಹೃದಯಾಘಾತವಾಗುವ ಹಿಂದಿನ ದಿನದವರೆಗೂ ಕಾನ್ಪುರದಲ್ಲಿರುವ ತಮ್ಮ ಕ್ಲಿನಿಕ್‌ನಲ್ಲಿ ರೋಗಿಗಳನ್ನು ನೋಡಿದ್ದರು ಅವರು. ಬಡಜನರ ನ್ಯಾಯಬದ್ಧ ಹಕ್ಕುಗಳು, ಆರೋಗ್ಯ ಜಾಗೃತಿ ಕುರಿತಂತೆ ಅವರು ಹೊಂದಿದ್ದ ಕಳಕಳಿ, ಬದ್ಧತೆ ಆ ಮಟ್ಟದ್ದು.
 
ಸಾವಿನಲ್ಲೂ ತಾವು ನಂಬಿದ್ದ ಮೌಲ್ಯಗಳನ್ನೇ ಎತ್ತಿಹಿಡಿದ ಅಪರೂಪದ ಚೈತನ್ಯ ಕ್ಯಾಪ್ಟನ್ ಲಕ್ಷ್ಮಿ. ಜುಲೈ23ರಂದು ಅವರ ನಿಧನದೊಂದಿಗೆ ಸ್ವಾತಂತ್ರ್ಯ ಕಾಲದ ಆದರ್ಶಗಳ ಸ್ಮೃತಿಯೊಂದಿಗಿನ ಕೊಂಡಿ ಕಳಚಿದಂತಾಗಿದೆ.

ಕ್ಯಾಪ್ಟನ್ ಲಕ್ಷ್ಮಿ ಎಂದೇ ಪ್ರಸಿದ್ಧರಾದ ಡಾ. ಲಕ್ಷ್ಮಿ ಸೆಹಗಾಲ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸರ ನಿಕಟವರ್ತಿಯಾಗಿದ್ದರು. ಅಂದಿನಿಂದ ಇಂದಿನವರೆಗೂ ಹೋರಾಟದ ಸಂಕೇತವಾಗಿಯೇ ತುಂಬು ಬದುಕು (97ವರ್ಷ) ಬಾಳಿದ್ದು ಅನನ್ಯ.

1914ರ ಅಕ್ಟೋಬರ್ 24ರಂದು ಮದ್ರಾಸ್(ಇಂದಿನ ಚೆನ್ನೈ)ನಲ್ಲಿ ಲಕ್ಷ್ಮಿ ಸ್ವಾಮಿನಾಥನ್ ಜನನ. ತಂದೆ ಸ್ವಾಮಿನಾಥನ್ ಬ್ಯಾರಿಸ್ಟರ್ . ತಾಯಿ ಅಮ್ಮು ಸ್ವಾಮಿನಾಥನ್ ಸ್ವತಂತ್ರ ಭಾರತದ ಸಂವಿಧಾನ ರಚನಾ ಮಂಡಳಿಯ ಸದಸ್ಯೆಯಾಗಿದ್ದವರು; ನಂತರ ತಮಿಳುನಾಡಿನ ದಿಂಡಿಗಲ್‌ನಿಂದ ಲೋಕಸಭೆಗೆ ಆಯ್ಕೆಯಾಗಿದ್ದವರು (1951-57). 1938ರಲ್ಲಿ ಮದ್ರಾಸ್ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದುಕೊಂಡರು ಲಕ್ಷ್ಮಿ.
 
ವಿದ್ಯಾರ್ಥಿ ದೆಸೆಯಲ್ಲಿ ಜಾತಿ ಪೂರ್ವಗ್ರಹಗಳ ವಿರುದ್ಧ ದನಿ ಎತ್ತಿದ್ದರು ಅವರು. ಮನೆಯೊಳಗೆ ಹಾಗೂ ಹೊರಗಡೆ ರಾಜಕೀಯ, ಸಾಮಾಜಿಕ ಚಟುವಟಿಕೆಗಳು ಸಕ್ರಿಯವಾಗಿದ್ದಂತಹ ಪರಿಸರದಲ್ಲಿ ಬೆಳೆದ ಲಕ್ಷ್ಮಿ, ಇನ್ನೂ ಹೆಚ್ಚು ತೀವ್ರತರ ಹೋರಾಟದೆಡೆ ಆಕರ್ಷಿತರಾಗಿದ್ದರು. ಸುಭಾಷ್‌ಚಂದ್ರ ಬೋಸರ ಕುರಿತು ಸಾಕಷ್ಟು ಕೇಳಿದ್ದ ಅವರು ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು.

1940ರಲ್ಲಿ ಸಿಂಗಪುರಕ್ಕೆ ತೆರಳಿದ ಲಕ್ಷ್ಮಿ ವೈದ್ಯೆಯಾಗಿ ವೃತ್ತಿ ಆರಂಭಿಸಿದರು. ಅಲ್ಲಿ ಅವರು ಭಾರತದ ಬಡ ವಲಸಿಗ ಕಾರ್ಮಿಕರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದರು. ಇದೇ ಸಂದರ್ಭದಲ್ಲಿ ಲಕ್ಷ್ಮಿ ಅವರು ಇಂಡಿಯಾ ಇಂಡಿಪೆಂಡೆನ್ಸ್ ಲೀಗ್(ಐಐಎಲ್)ನಲ್ಲಿ ಸಕ್ರಿಯ ಪಾತ್ರ ವಹಿಸತೊಡಗಿದ್ದರು.

1943ರಲ್ಲಿ ಸಿಂಗಪುರಕ್ಕೆ ಆಗಮಿಸಿದ ನೇತಾಜಿ ಸುಭಾಷ್ ಚಂದ್ರ ಬೋಸರು ಕ್ರಾಂತಿಕಾರಿ ಸೇನಾ ಪಡೆ ರಚಿಸಲು ನಿರ್ಧರಿಸಿದ್ದರು. ಇದರ ಫಲವಾಗಿ `ಆಜಾದ್ ಹಿಂದ್ ಫೌಜ್~ (ಇಂಡಿಯನ್ ನ್ಯಾಷನಲ್ ಆರ್ಮಿ) ರೂಪು ತಳೆಯಿತು. `ಈ ಸೇನೆಯ ಪ್ರವೇಶ ಫಾರಂಗಳಲ್ಲಿ ಜಾತಿ ಅಥವಾ ಧರ್ಮ ಕೇಳುವ ಕಾಲಂಗಳು ಇಲ್ಲದಿದ್ದುದು ನನಗೆ ಬಹಳ ಇಷ್ಟವಾಗಿತ್ತು~ ಎಂದು ಡಾ ಲಕ್ಷ್ಮಿ `ಪ್ರಜಾವಾಣಿ~ ಜೊತೆ ನೆನಪಿಸಿಕೊಂಡಿದ್ದರು.

ಇದೇ ಸಂದರ್ಭದಲ್ಲೇ ಐಐಎಲ್ ಮುಂದೆ ಒಂದು ಅಚ್ಚರಿಯ ಪ್ರಸ್ತಾವವನ್ನೂ ಸುಭಾಷ್ ಇಟ್ಟಿದ್ದರು. ಭಾರತೀಯ ಮಹಿಳೆಯರ ರೆಜಿಮೆಂಟ್ ಸ್ಥಾಪನೆಯಾಗಬೇಕೆಂಬ ಕ್ರಾಂತಿಕಾರಿ ಪ್ರಸ್ತಾವ ಅದು.

ಈ ರೆಜಿಮೆಂಟ್‌ನ ನಾಯಕತ್ವ ಹೊರಬಹುದಾದ ಮಹಿಳೆಯ ಹೆಸರನ್ನು ಸೂಚಿಸಬೇಕೆಂದು ಐಐಎಲ್ ಅನ್ನು ಕೋರಿದ್ದರು ಸುಭಾಷ್. ನಾಯಕಿ ಯಾರೆಂಬುದನ್ನು ಗುರುತಿಸಿಬಿಟ್ಟರೆ ಮುಂದಿನ ನೇಮಕಾತಿಗಳು ಅಷ್ಟೇನೂ ಸಮಸ್ಯೆಯಾಗದು ಎಂಬುದು ಸುಭಾಷ್‌ರ ವಾದವಾಗಿತ್ತು. ಆಗ ಸೂಚಿತವಾದ ಹೆಸರು ಡಾ. ಲಕ್ಷ್ಮಿ ಅವರದು.

ಇಂಡಿಯನ್ ನ್ಯಾಷನಲ್ ಆರ್ಮಿ(ಐಎನ್‌ಎ)ಯ ಮಹಿಳಾ ರೆಜಿಮೆಂಟ್‌ಗೆ ನೀಡಲಾದ ಹೆಸರು ಝಾನ್ಸಿ ರಾಣಿ ರೆಜಿಮೆಂಟ್. ಸುಮಾರು ಒಂದು ಸಾವಿರ ಮಹಿಳೆಯರು ರೆಜಿಮೆಂಟ್‌ಗೆ ಸೇರಿದರು. ಲಕ್ಷ್ಮಿ ಸ್ವಾಮಿನಾಥನ್ ಕ್ಯಾಪ್ಟನ್ ಲಕ್ಷ್ಮಿ ಆದರು. ಈ ಹೆಸರು ಎಷ್ಟು ಜನಪ್ರಿಯ ಆಯಿತೆಂದರೆ, ನಂತರದ ಜೀವನದುದ್ದಕ್ಕೂ ಅವರನ್ನು  ಕ್ಯಾಪ್ಟನ್ ಲಕ್ಷ್ಮಿ ಎಂದೇ ಗುರುತಿಸಲಾಗುತ್ತಿತ್ತು.

ತಾತ್ಕಾಲಿಕ ದೇಶಾಂತರ ಸರ್ಕಾರ ರಚಿಸುವ ಮೂಲಕ ಆಜಾದ್ ಹಿಂದ್ ಫೌಜ್‌ನ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸ್ವರೂಪವನ್ನೂ ನೀಡಲಾಗಿತ್ತು. ಈ `ಆಜಾದ್ ಹಿಂದ್ ಸರ್ಕಾರ~ದಲ್ಲಿ ಕ್ಯಾಪ್ಟನ್ ಲಕ್ಷ್ಮಿ  ವೈದ್ಯಕೀಯ ಹಾಗೂ ಸಾಮಾಜಿಕ ವ್ಯವಹಾರ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. 

ಬರ್ಮಾದಲ್ಲಿ ವಿಮಾನ ದಾಳಿಗಳಂತಹ ಸಂದರ್ಭಗಳಲ್ಲೂ ವಿಚಲಿತರಾಗದಂತಹ ಸಾಹಸಿಗಳಾಗಿದ್ದರು ಝಾನ್ಸಿ ರಾಣಿ ರೆಜಿಮೆಂಟಿನ ಯೋಧೆಯರು. ಬ್ರಿಟಿಷ್ ಮಿಲಿಟರಿಯಿಂದ ಬಂಧನಕ್ಕೊಳಗಾದ ಕ್ಯಾಪ್ಟನ್ ಲಕ್ಷ್ಮಿ ಅವರನ್ನು ಬರ್ಮಾದ ಉತ್ತರ ಭಾಗದಲ್ಲಿ ಎಂಟು ತಿಂಗಳ  ಕಾಲ ಗೃಹ ಬಂಧನದಲ್ಲಿರಿಸಲಾಗಿತ್ತು. ನಂತರ ಭಾರತಕ್ಕೆ ವಿಮಾನದಲ್ಲಿ ಅವರನ್ನು ವಾಪಸ್ ಕರೆತರಲಾಯಿತು. ಈ ಪ್ರಸಂಗವನ್ನು ಲಕ್ಷ್ಮಿ `ಪ್ರಜಾವಾಣಿ~ ಜೊತೆ ಹಂಚಿಕೊಂಡಿದ್ದ ರೀತಿ ರಂಜನೀಯವಾಗಿತ್ತು.
 
“ಭಾರತ-ಬರ್ಮಾ ಗಡಿಯವರೆಗೆ ನನ್ನ ಜೊತೆ ಇರಬೇಕೆಂದು ನನ್ನ ಜತೆ ಇದ್ದ ಅಧಿಕಾರಿಗೆ ಆದೇಶ ನೀಡಲಾಗಿತ್ತು. ಬರ್ಮಾ ಗಡಿ ದಾಟಿ ಭಾರತದ ಗಡಿಯನ್ನು ವಿಮಾನ ಪ್ರವೇಶಿಸುತ್ತಿದ್ದಂತೆಯೇ ನನ್ನ ಪಕ್ಕ ಕುಳಿತಿದ್ದ ವ್ಯಕ್ತಿ ಎದ್ದುನಿಂತು `ನೀವೀಗ ಸ್ವತಂತ್ರರು~ ಎಂದು ಘೋಷಿಸಿದ.
 
ಗಗನ ಮಧ್ಯದಲ್ಲಿ ಈ ಬಿಡುಗಡೆ ಸಂದರ್ಭದಲ್ಲಿ, `ನಾನೇನು ಮಾಡಲಿ, ಕೆಳಗೆ ಹಾರಲೆ~ ಎಂದು ಆತನಿಗೇ ಮರುಪ್ರಶ್ನೆ ಹಾಕಿದೆ. ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ರಿಜಿಸ್ಟರ್‌ಗೆ ಸಹಿ ಹಾಕಿಸಿಕೊಂಡರು. ನಂತರ `ಏನು ಮಾಡಬೇಕು~ ಎಂದರೆ ಆತನೂ `ನೀವೀಗ  ಸ್ವತಂತ್ರರು~ ಎಂದರು.

ತಾಯ್ನಾಡಿನಲ್ಲಿ ಕಳೆದುಹೋದಂತಹ ಭಾವ ಆವರಿಸಿದ ರೀತಿ ವಿಚಿತ್ರವಾಗಿತ್ತು. ನಂತರ ಸುಭಾಷ್‌ರ ಸೋದರಸಂಬಂಧಿ ವಿಮಾನನಿಲ್ದಾಣಕ್ಕೆ ಬಂದು ಕರೆದೊಯ್ದರು” ಎಂದು ವಿವರವಾಗಿ ಸ್ಮರಿಸಿಕೊಂಡಿದ್ದರು ಕ್ಯಾಪ್ಟನ್ ಲಕ್ಷ್ಮಿ. 

 ನೇತಾಜಿಯವರ ಮಿಲಿಟರಿ ಸೆಕ್ರೆಟರಿಯಾಗಿದ್ದ ಕರ್ನಲ್ ಪ್ರೇಮ್ ಕುಮಾರ್ ಸೆಹಗಾಲ್ ಅವರನ್ನು 1947ರಲ್ಲಿ  ಕ್ಯಾಪ್ಟನ್ ಲಕ್ಷ್ಮಿ ವಿವಾಹವಾದರು. ನಂತರ, 1947ರಿಂದಲೂ ಕಾನ್ಪುರದ್ಲ್ಲಲೇ ನೆಲೆಸಿದ ಅವರು ವೈದ್ಯಕೀಯ ವೃತ್ತಿ ಮುಂದುವರಿಸಿದರು. 1971ರಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವನ್ನು (ಸಿಪಿಎಂ) ಸೇರಿದ ಅವರು ರಾಜ್ಯಸಭೆಯಲ್ಲಿ ಪಕ್ಷವನ್ನು ಪ್ರತಿನಿಧಿಸಿದ್ದರು.
 
ಲಕ್ಷ್ಮಿ ಅವರು 1981ರಲ್ಲಿ ಸ್ಥಾಪನೆಯಾದ ಆಲ್ ಇಂಡಿಯಾ ಡೆಮಾಕ್ರಟಿಕ್ ವಿಮೆನ್ ಅಸೋಸಿಯೇಷನ್( ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆ)ಸಂಸ್ಥಾಪಕ ಸದಸ್ಯೆ. ನಂತರ ಜನವಾದಿ ಮಹಿಳಾ ಸಂಘಟನೆಯ ಹಲವು ಆಂದೋಲನಗಳಲ್ಲಿ ಅವರು ಸಕ್ರಿಯರಾಗಿದ್ದರು. 1996ರಲ್ಲಿ ಬೆಂಗಳೂರಿನಲ್ಲಿ `ವಿಶ್ವ ಸುಂದರಿ ಸ್ಪರ್ಧೆ~ ವಿರುದ್ಧ ನಡೆಸಿದ ಪ್ರತಿಭಟನೆಗಾಗಿ ಅವರು ಬಂಧನಕ್ಕೊಳಗಾಗಿದ್ದರು.

  2002ರಲ್ಲಿ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಕ್ಯಾಪ್ಟನ್ ಲಕ್ಷ್ಮಿ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಎಡ ಪಕ್ಷಗಳು ಕಣಕ್ಕಿಳಿಸಿದ್ದವು. 1998ರಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿತ್ತು.

ಕ್ಯಾಪ್ಟನ್ ಲಕ್ಷ್ಮಿ ಅವರ ಮಗಳು ಸುಭಾಷಿಣಿ ಅಲಿ ಸಿಪಿಎಂ ರಾಜಕಾರಣಿ ಹಾಗೂ ಕಾರ್ಮಿಕ ನಾಯಕಿ. ಮತ್ತೊಬ್ಬ ಮಗಳು ಅನಿಸಾ ಪುರಿ. ಮೊಮ್ಮಗ ಶಾದ್ ಅಲಿ  ಬಾಲಿವುಡ್ ಚಿತ್ರನಿರ್ದೇಶಕ. ಲಕ್ಷ್ಮಿ ಅವರ ತಂಗಿ ಮೃಣಾಲಿನಿ ಸಾರಾಭಾಯ್ ಹೆಸರಾಂತ ನೃತ್ಯ ಕಲಾವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT