ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಪಾಕಿಸ್ತಾನ -ಕೀನ್ಯಾ ಸೆಣಸು

Last Updated 22 ಫೆಬ್ರವರಿ 2011, 18:40 IST
ಅಕ್ಷರ ಗಾತ್ರ

ಹಂಬಂಟೋಟಾ, ಶ್ರೀಲಂಕಾ (ಪಿಟಿಐ): ಹಲವು ವಿವಾದಗಳ ಸುಳಿಗೆ ಸಿಲುಕಿ ಸಾಕಷ್ಟು ಮುಜುಗರ ಅನುಭವಿಸಿರುವ ಪಾಕಿಸ್ತಾನ ತಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಬುಧವಾರ ಆರಂಭಿಸಲಿದೆ.

ಶ್ರೀಲಂಕಾದ ಹಂಬಂಟೋಟಾದಲ್ಲಿ ನಡೆಯುವ ‘ಎ’ ಗುಂಪಿನ ಪಂದ್ಯದಲ್ಲಿ ಶಾಹಿದ್ ಆಫ್ರಿದಿ ಬಳಗ ಕೀನ್ಯಾ ತಂಡದ ಸವಾಲನ್ನು ಎದುರಿಸಲಿದೆ. ‘ಸ್ಪಾಟ್ ಫಿಕ್ಸಿಂಗ್’ ಒಳಗೊಂಡಂತೆ ಕೆಲವು ವಿವಾದಗಳಲ್ಲಿ ಸಿಲುಕಿರುವ ಕಾರಣ ಪಾಕ್ ತಂಡ ತನ್ನ ಗೌರವ ಕಳೆದುಕೊಂಡಿದೆ. ವಿಶ್ವಕಪ್ ಟ್ರೋಫಿ ಗೆದ್ದರಷ್ಟೇ ತಂಡಕ್ಕೆ ಹಳೆಯ ಘನತೆಯನ್ನು ಮರಳಿ ಪಡೆಯಲು ಸಾಧ್ಯ.

ಪಾಕಿಸ್ತಾನದಲ್ಲಿ ಕ್ರಿಕೆಟ್‌ಗೆ ಹೊಸ ಜೀವ ಲಭಿಸಲು ಅಫ್ರಿದಿ ಬಳಗ ವಿಶ್ವಕಪ್ ಗೆಲ್ಲಬೇಕು ಎಂದು ಮಾಜಿ ಆಟಗಾರರು ಈಗಾಗಲೇ ಹೇಳಿದ್ದಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪಾಕ್ ತಂಡ ಬುಧವಾರ ಕೀನ್ಯಾ ಜೊತೆ ಪೈಪೋಟಿ ನಡೆಸಲಿದೆ. 2007ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಮೊದಲ ಸುತ್ತಿನಲ್ಲೇ ನಿರ್ಗಮಿಸಿತ್ತು. ಐರ್ಲೆಂಡ್ ಕೈಯಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿದ್ದ ತಂಡ ಸಾಕಷ್ಟು ಟೀಕೆ ಎದುರಿಸಿತ್ತು.

ಆ ನಿರಾಸೆ ಇನ್ನೂ ಪಾಕ್ ತಂಡವನ್ನು ಕಾಡುತ್ತಿದೆ. ವಿಶ್ವಕಪ್‌ನಲ್ಲಿ ಎಲ್ಲ ಎದುರಾಳಿಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಅಫ್ರಿದಿ ಸಹ ಆಟಗಾರರನ್ನು ಎಚ್ಚರಿಸಿದ್ದಾರೆ. ‘ಈ ಹಿಂದೆ ವಿಶ್ವಕಪ್ ಟೂರ್ನಿಯಲ್ಲಿ ಸಾಕಷ್ಟು ಅಚ್ಚರಿಯ ಫಲಿತಾಂಶಗಳು ದಾಖಲಾಗಿವೆ. ನಾಲ್ಕು ವರ್ಷಗಳ ಹಿಂದೆ ನಾವು ಐರ್ಲೆಂಡ್ ಕೈಯಲ್ಲಿ ಸೋಲು ಅನುಭವಿಸಿದ್ದೆವು. ಅದನ್ನು ಗಮನದಲ್ಲಿಟ್ಟುಕೊಂಡೇ ಈ ಬಾರಿ ಆಡುತ್ತೇವೆ’ ಎಂದು ಪಾಕ್ ನಾಯಕ ಹೇಳಿದ್ದಾರೆ.

ಯೂನಿಸ್ ಖಾನ್, ಮಿಸ್ಬಾ ಉಲ್ ಹಕ್, ಮೊಹಮ್ಮದ್ ಹಫೀಜ್, ಕಮ್ರನ್ ಹಾಗೂ ಉಮರ್ ಅಕ್ಮಲ್ ಅವರು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಬಲ ನೀಡಲಿದ್ದಾರೆ. ಸಲ್ಮಾನ್ ಬಟ್ ಅವರ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಹಫೀಜ್ ಮತ್ತು ಅಹ್ಮದ್ ಶೆಹಜಾದ್ ತಂಡದ ಇನಿಂಗ್ಸ್ ಆರಂಭಿಸುವರು. ‘ಸ್ಪಾಟ್ ಫಿಕ್ಸಿಂಗ್’ ಆರೋಪ ಸಾಬೀತಾದ ಕಾರಣ ಬಟ್ ಐಸಿಸಿಯಿಂದ 10 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.

ಶಾಹಿದ್ ಅಫ್ರಿದಿ ಮತ್ತು ಅಬ್ದುಲ್ ರಜಾಕ್ ಕೆಳಗಿನ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯುವರು. ಕೊನೆಯ ಓವರ್‌ಗಳಲ್ಲಿ ಆಕ್ರಮಣಕಾರಿ ಆಟದ ಮೂಲಕ ರನ್‌ರೇಟ್ ಹೆಚ್ಚಿಸುವ ತಾಕತ್ತು ಇವರಿಗೆ ಇದೆ.ಪ್ರಮುಖ ಬೌಲರ್‌ಗಳಾದ ಶೋಯಬ್ ಅಖ್ತರ್ ಮತ್ತು ಉಮರ್ ಗುಲ್ ತಮ್ಮ ವೇಗದ ಎಸೆತಗಳಿಂದ ಕೀನ್ಯಾ ಬ್ಯಾಟ್ಸ್‌ಮನ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೇರ್ ಅವರು ‘ಸ್ಪಾಟ್ ಫಿಕ್ಸಿಂಗ್’ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೆ ಒಳಗಾಗಿರುವ ಕಾರಣ ಪಾಕ್ ತಂಡದ ಬೌಲಿಂಗ್ ವಿಭಾಗ ತನ್ನ ಬ್ಯಾಲೆನ್ಸ್ ಕಳೆದುಕೊಂಡಿದೆ.

ಮತ್ತೊಂದೆಡೆ ಕೀನ್ಯಾ ತಂಡ ನ್ಯೂಜಿಲೆಂಡ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಮುಖಭಂಗ ಅನುಭವಿಸಿತ್ತು. ಜಿಮ್ಮಿ ಕಮಾಂಡೆ ಬಳಗ ಕಿವೀಸ್ ವಿರುದ್ಧ ಕೇವಲ 69 ರನ್‌ಗಳಿಗೆ ಆಲೌಟಾಗಿತ್ತು. ಪಾಕಿಸ್ತಾನದ ಎದುರು ತಂಡ ಸುಧಾರಿತ ಪ್ರದರ್ಶನ ನೀಡುವುದೇ ಎಂಬ ಕುತೂಹಲ ಎಲ್ಲರದ್ದು.

ತಂಡದ ಬ್ಯಾಟಿಂಗ್ ಆರಂಭಿಕ ಆಟಗಾರ ಸೆರೆನ್ ವಾಟರ್ಸ್‌ ಅವರನ್ನು ನೆಚ್ಚಿಕೊಂಡಿದೆ. ಹಾಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೆರೆನ್ ಶತಕ ಗಳಿಸಿದ್ದರು. ಕಾಲಿನ್ಸ್ ಒಬುಯಾ ಮತ್ತು ಸ್ಟೀವ್ ಟಿಕೊಲೊ ಅವರು ಪಾಕ್ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಲ್ಲುವ ಛಲ ತೋರಬೇಕು. ಇಲ್ಲದಿದ್ದರೆ ಕೀನ್ಯಾಕ್ಕೆ ಮತ್ತೊಂದು ಹೀನಾದ ಸೋಲು ಎದುರಾದರೆ ಅಚ್ಚರಿಯಿಲ್ಲ.

ಪಾಕಿಸ್ತಾನ
ಶಾಹಿದ್ ಅಫ್ರಿದಿ (ನಾಯಕ), ಮಿಸ್ಬಾ ಉಲ್ ಹಕ್, ಅಬ್ದುಲ್ ರಜಾಕ್, ಅಬ್ದುರ್ ರೆಹಮಾನ್, ಅಹ್ಮದ್ ಶೆಹಜಾದ್, ಅಸಾದ್ ಶಫೀಕ್, ಜುನೈದ್ ಖಾನ್, ಕಮ್ರನ್ ಅಕ್ಮಲ್, ಮೊಹಮ್ಮದ್ ಹಫೀಜ್, ಸಯೀದ್ ಅಜ್ಮಲ್, ಶೋಯಬ್ ಅಖ್ತರ್, ಉಮರ್ ಅಕ್ಮಲ್, ಉಮರ್ ಗುಲ್, ವಹಾಬ್ ರಿಯಾಜ್, ಯೂನಿಸ್ ಖಾನ್

ಕೀನ್ಯಾ
ಜಿಮ್ಮಿ ಕಮಾಂಡೆ (ನಾಯಕ), ಸೆರೆನ್ ವಾಟರ್ಸ್‌, ಅಲೆಕ್ಸ್ ಒಬಾಂಡ, ಡೇವಿಡ್ ಒಬುಯಾ, ಕಾಲಿನ್ಸ್ ಒಬುಯಾ, ಸ್ಟೀವ್ ಟಿಕೋಲೊ, ತನ್ಮಯ್ ಮಿಶ್ರಾ, ರಾಕೆಪ್ ಪಟೇಲ್, ಮೌರಿಸ್ ಔಮಾ, ಥಾಮಸ್ ಒಡೊಯೊ, ನೆಹೆಮಿಯಾ ಒದಿಯಾಂಬೊ, ಎಲಿಜಾ ಒಟೀನೊ, ಪೀಟರ್ ಒಂಗೊಂಡೊ, ಶೆಮ್ ನೋಚೆ, ಜೇಮ್ಸ್ ನೋಚೆ.

ಆಟದ ಅವಧಿ: ಮಧ್ಯಾಹ್ನ 2.30ರಿಂದ ಸಂಜೆ 6.00 ಹಾಗೂ 6.40ರಿಂದ
ಪಂದ್ಯ ಮುಗಿಯುವವರೆಗೆ. ನೇರ ಪ್ರಸಾರ: ಇಎಸ್‌ಪಿಎನ್/ಸ್ಟಾರ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT