ಉರುಗ್ವೆ–ಈಜಿಪ್ಟ್‌ ಪೈಪೋಟಿ: ಮಿಂಚುವ ವಿಶ್ವಾಸದಲ್ಲಿ ಸ್ವಾರೆಜ್‌

7

ಉರುಗ್ವೆ–ಈಜಿಪ್ಟ್‌ ಪೈಪೋಟಿ: ಮಿಂಚುವ ವಿಶ್ವಾಸದಲ್ಲಿ ಸ್ವಾರೆಜ್‌

Published:
Updated:
ಉರುಗ್ವೆ–ಈಜಿಪ್ಟ್‌ ಪೈಪೋಟಿ: ಮಿಂಚುವ ವಿಶ್ವಾಸದಲ್ಲಿ ಸ್ವಾರೆಜ್‌

ಎಕಾತೆರಿನ್‌ಬರ್ಗ್‌ (ಎಎಫ್‌ಪಿ): ಚೊಚ್ಚಲ ವಿಶ್ವಕಪ್‌ ಗೆದ್ದ ಇತಿಹಾಸ ಹೊಂದಿರುವ ಉರುಗ್ವೆ ತಂಡವು ಈ ಬಾರಿಯ ಟೂರ್ನಿಯ ‌ತನ್ನ ಮೊದಲ ಪಂದ್ಯದಲ್ಲಿ ಜಯ ಗಳಿಸುವ ವಿಶ್ವಾಸದಲ್ಲಿದೆ.

ಎಕಾತೆರಿನ್‌ಬರ್ಗ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ‘ಎ’ ಗುಂಪಿನ  ಎರಡನೇ ಪಂದ್ಯದಲ್ಲಿ ಉರುಗ್ವೆ ತಂಡವು ಈಜಿಪ್ಟ್‌ ತಂಡದ ವಿರುದ್ಧ ಸೆಣಸಲಿದೆ. ಉಭಯ ತಂಡಗಳು 2006ರ ಅಭ್ಯಾಸ ಪಂದ್ಯದಲ್ಲಿ ಮಾತ್ರ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ 2–0 ಗೋಲುಗಳಿಂದ ಉರುಗ್ವೆ ಗೆದ್ದಿತ್ತು.

‘ಎ’ ಗುಂಪಿನ ಬಲಿಷ್ಠ ತಂಡ ಎಂದೇ ಪರಿಗಣಿತವಾಗಿರುವ ಉರುಗ್ವೆ, ಎರಡು ಬಾರಿ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದ ಸಾಧನೆ ಮಾಡಿದೆ. 2010ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪಿತ್ತು. ಆದರೆ, ಅದರ ನಂತರದ ವರ್ಷಗಳಲ್ಲಿ ತಂಡ ಮಹತ್ವದ ಟೂರ್ನಿಗಳಲ್ಲಿ ಎಡವಿದೆ.

ತರಬೇತುದಾರ ಆಸ್ಕರ್‌ ಟಬರೆಜ್‌ ಅವರು ಕಳೆದ ವರ್ಷ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ತಂಡವು ಎಲ್ಲ ವಿಭಾಗಗಳಲ್ಲಿ ಬಲಿಷ್ಠ ವಾಗಲು ಅವರ ಹೊಸ ಯೋಜನೆಗಳು ಯಶಸ್ವಿಯಾಗಿವೆ. ಇದರ ಫಲವಾಗಿಯೇ ಕಳೆದ ಆರು ಪಂದ್ಯಗಳಲ್ಲಿ ತಂಡವು ಮೂರರಲ್ಲಿ ಜಯ ಗಳಿಸಿ, ಒಂದರಲ್ಲಿ ಸೋತಿದೆ.

ಡೀಗೊ ಗೊಡಿನ್‌ ಅವರ ನಾಯಕತ್ವದ ತಂಡದಲ್ಲಿ ಫಾರ್ವರ್ಡ್‌ ವಿಭಾಗವು ಶಕ್ತಿಯುತವಾಗಿದೆ. ಈ ವಿಭಾಗದ ಎಡಿಸನ್‌ ಕವಾನಿ ಹಾಗೂ ಲೂಯಿಸ್‌ ಸ್ವಾರೆಜ್‌ ಅವರು ಕಳೆದ ಋತುವಿನ ಕ್ಲಬ್‌ ಮಟ್ಟದಲ್ಲಿ ಆಡಿದ 99 ಪಂದ್ಯಗಳಲ್ಲಿ 71 ಗೋಲುಗಳನ್ನು ಗಳಿಸಿದ್ದಾರೆ.

ಸ್ವಾರೆಜ್‌ ಅವರು ಆಡಿರುವ 98 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 51 ಗೋಲುಗಳಿಸಿರುವ ಕಾರಣ ಪಂದ್ಯದ ಆಕರ್ಷಣೆಯ ಕೇಂದ್ರ ಬಿಂದು ವಾಗಿದ್ದಾರೆ. ಟಬರೆಜ್‌ ಅವರು 4–2–3–1ರ ಯೋಜನೆಯೊಂದಿಗೆ ತಂಡವನ್ನು ಅಂಗಳಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.

ಸವಾಲು ಮೀರುವ ವಿಶ್ವಾಸದಲ್ಲಿ ಈಜಿಪ್ಟ್‌: ಗೋಲ್‌ಕೀಪರ್‌ ಎಸ್ಸಾಮ್ ಎಲ್‌ ಹೈದರಿ ಅವರ ನಾಯಕತ್ವದ ಈಜಿಪ್ಟ್‌ ತಂಡವು ಇತ್ತೀಚಿನ ಪ್ರಮುಖ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇದೇ ಆಧಾರದಲ್ಲಿ ತಂಡವು ಉರುಗ್ವೆಯನ್ನು ಮಣಿಸುವ ವಿಶ್ವಾಸದಲ್ಲಿದೆ. 1990ರ ನಂತರ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿರುವ ತಂಡದ ಪ್ರಮುಖ ಶಕ್ತಿ ಅದರ ರಕ್ಷಣಾ ವಿಭಾಗದ ಆಟಗಾರರು.

ಆದರೆ, ತಂಡದ ಪ್ರಮುಖ ಫಾರ್ವರ್ಡ್‌ ವಿಭಾಗದ ಆಟಗಾರ ಮೊಹ ಮ್ಮದ್‌ ಸಲಾ ಭುಜದ ನೋವಿನಿಂದ ನರಳುತ್ತಿದ್ದು ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ. ನಿರ್ಣಾಯಕವಾಗಿದ್ದ ಅರ್ಹತಾ ಪಂದ್ಯದಲ್ಲಿ ಸಲಾ ಅವರು ಗೋಲು ಗಳಿಸಿ ತಂಡವು ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲು ಕಾರಣರಾಗಿದ್ದರು. ಇದರಿಂದಾಗಿ ಲಯೊನೆಲ್‌ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ನೇಮರ್‌ ಅವರೊಂದಿಗೆ ಈ ಬಾರಿ ಬ್ಯಾಲನ್‌ ಡಿ ಓರ್‌ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರ ಪಟ್ಟಿಯಲ್ಲಿ ಸಲಾ ಇದ್ದಾರೆ.

ಲಿವರ್‌ಪೂಲ್‌ ಕ್ಲಬ್‌ ತಂಡದಲ್ಲಿ ಆಡುವ ಸಲಾ, ಕಳೆದ ತಿಂಗಳ ಕೊನೆಯ ವಾರದಲ್ಲಿ ನಡೆದ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭುಜದ ಗಾಯಕ್ಕೊಳಗಾಗಿದ್ದರು. ಅದಾದ ನಂತರ ಅವರು ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆದಿದ್ದರು.

‘ಸಲಾ ಅವರು ಈ ಪಂದ್ಯದಲ್ಲಿ ಆಡಲು ಸಂಪೂರ್ಣ ಫಿಟ್‌ನೆಸ್‌ ಹೊಂದಿರುವ ಬಗ್ಗೆ ಅನುಮಾನಗಳಿವೆ’ ಎಂದು ತಂಡದ ನಿರ್ದೇಶಕ ಇಹಾಬ್‌ ಲಹಿತಾ ತಿಳಿಸಿದ್ದಾರೆ.

ಸಮಯ: ಸಂಜೆ 5.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry