ಭಾನುವಾರ, ಫೆಬ್ರವರಿ 28, 2021
31 °C
ಕೊರೊನಾ ಹೊಡೆತಕ್ಕೆ ಕ್ರೀಡಾಲೋಕವೇ ಕ್ವಾರಂಟೈನ್

2020| ಬಯೋಬಬಲ್ ಕ್ರಿಕೆಟ್ ಹುಟ್ಟಿದ ವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ರಿಕೆಟ್ ಪದಕೋಶಕ್ಕೆ ಕ್ವಾರಂಟೈನ್, ನ್ಯೂನಾರ್ಮಲ್, ಸಲೈವಾ ಬ್ಯಾನ್, ಸ್ಯಾನಿಟೈಸರ್  ಎಂಬ  ಹೊಸ ಪದಗಳು ಸೇರಿಕೊಂಡ ವರ್ಷ ಇದು. ಮನರಂಜನೆ ರಾಜ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳೆಲ್ಲವೂ ಪ್ರೇಕ್ಕರಿಲ್ಲದೇ ಭಣಗುಟ್ಟಿದ ಕ್ರೀಡಾಂಗಣಗಳಲ್ಲಿ ನಡೆದದ್ದು ಇತಿಹಾಸ. ಅದೂ ಭಾರತದ ಹೊರಗೆ!

ಹೌದು; ಕಣ್ಣಿಗೆ ಕಾಣದ ಕೊರೊನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಕ್ರಿಕೆಟ್ ಕ್ಷೇತ್ರವೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸಪಡಬೇಕಾಯಿತು. ’ನವ ವಾಸ್ತವ‘ ನಿಯಮಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಾಯಿತು. ಕ್ರಿಕೆಟ್‌ ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಆಗದ ಹಲವು ಬದಲಾವಣೆಗಳು ಈ ವರ್ಷ ನಡೆದವು.

ಜನವರಿಯಲ್ಲಿ ಆಸ್ಟ್ರೇಲಿಯಾ ಎದುರು ಏಕದಿನ ಸರಣಿಯಲ್ಲಿ ಗೆದ್ದು ಬೀಗಿದ್ದ ವಿರಾಟ್ ಕೊಹ್ಲಿ ಬಳಗವು, ಫೆಬ್ರುವರಿ–ಮಾರ್ಚ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸ ಮಾಡಿತ್ತು. ಅಲ್ಲಿ ಟಿ20ಯಲ್ಲಿ ಗೆದ್ದು, ಏಕದಿನ ಮತ್ತು ಟೆಸ್ಟ್‌ನಲ್ಲಿ ಸೋಲಿನ ಕಹಿ ಅನುಭವಿಸಿತ್ತು.

ತವರಿಗೆ ಮರಳಿ ದಕ್ಷಿಣ ಆಫ್ರಿಕಾ ಎದುರು ಕಣಕ್ಕಿಳಿಯಲು ಸಿದ್ಧವಾದಾಗಲೇ ಕೊರೊನಾ ಹಾವಳಿ ಆರಂಭವಾಗಿತ್ತು. ದೇಶದಲ್ಲಿ ಲಾಕ್‌ಡೌನ್ ವಿಧಿಸಲಾಯಿತು. ಜನಜೀವನ ಅಸ್ತವ್ಯಸ್ಥವಾಯಿತು. ಪ್ರವಾಸಿ ತಂಡ ತನ್ನ ದೇಶಕ್ಕೆ ಮರಳಿತು. ಬೇರೆ ಬೇರೆ ದೇಶಗಳಲ್ಲಿಯೂ ಲಾಕ್‌ಡೌನ್, ಗಡಿ ನಿರ್ಬಂಧ, ವಿಮಾನ ಹಾರಾಟ ನಿಷೇಧಗಳಿಂದಾಗಿ ಕ್ರಿಕೆಟ್ ಸರಣಿಗಳು ರದ್ದಾದವು. ತಾರೆಗಳು ಸೇರಿದಂತೆ ಎಲ್ಲ ಕ್ರಿಕೆಟಿಗರು ತಮ್ಮ ಮನೆ ಸೇರಿಕೊಂಡರು. ಮುಂದಿನ ಸುಮಾರು ಮೂರು ತಿಂಗಳು ಅವರು ತಮ್ಮ ಮನೆಯಲ್ಲಿ ಮಾಡುತ್ತಿದ್ದ ಅಡುಗೆ, ಚೇಷ್ಟೆಗಳು, ಮನೆಗೆಲಸ ಮತ್ತು ವ್ಯಾಯಾಮಗಳ ಚಿತ್ರ–ವಿಡಿಯೊ ತುಣುಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸಿದವು.

ದೇಶವು ಎದುರಿಸಿದ ಆರೋಗ್ಯ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಗೆ ಹಲವು ಕ್ರೀಡಾತಾರೆಗಳು ನೆರವಿನ ಹಸ್ತ ಚಾಚಿದರು.

ಯಜುವೇಂದ್ರ ಚಾಹಲ್  ಆನ್‌ಲೈನ್ ಚೆಸ್ ಆಡಿ ಹಣ ಸಂಗ್ರಹಿಸಿದರೆ, ಹರಭಜನ್ ಸಿಂಗ್, ಯುವರಾಜ್ ಸಿಂಗ್, ಅಮಿತ್ ಮಿಶ್ರಾ ಮುಂತಾದವರು ಬಡವರು, ವಲಸೆ ಕಾರ್ಮಿಕರಿಗೆ ನಿರಂತರ ಅನ್ನದಾಸೋಹ ನಡೆಸಿದರು. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ. ಮಹೇಂದ್ರಸಿಂಗ್ ಧೋನಿ ಮತ್ತು ಅನಿಲ್ ಕುಂಬ್ಳೆ ಮುಂತಾದವರು ಪಿಎಂ ಕೇರ್ಸ್‌ಗೆ ಧನಸಹಾಯ ನೀಡಿದರು. 

 ಇನ್ನೊಂದು ಕಡೆ; ಕ್ರಿಕೆಟ್ ಆಡಳಿತ ಮಂಡಳಿಗಳು ಆರ್ಥಿಕ ಹೊಡೆತವನ್ನು ತಪ್ಪಿಸಿಕೊಳ್ಳಲು ಹೆಣಗಾಡಿದವು. ಕ್ರಿಕೆಟ್‌ ಕ್ಷೇತ್ರದ ದೊಡ್ಡಣ್ಣ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆದಾಯ ಖೋತಾ ಆಯಿತು. ಆದರೆ, ನಷ್ಟದಿಂದ ಜರ್ಜರಿತವಾಗಲಿಲ್ಲ ಎನ್ನುವುದು ಸಮಾಧಾನ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಸಂಸ್ಥೆಯ ಹಲವು ಉದ್ಯೋಗಿಗಳನ್ನು ಕಿತ್ತು ಹಾಕಬೇಕಾಯಿತು. ಆಟಗಾರರ ವೇತನಕ್ಕೂ ಕತ್ತರಿ ಹಾಕಿತು.

ಇದೆಲ್ಲದರ ನಡುವೆ ಏಷ್ಯಾಕಪ್ ಕ್ರಿಕೆಟ್‌, ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟ್ವೆಂಟಿ–20 ವಿಶ್ವಕಪ್ ಟೂರ್ನಿಗಳು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟವು. ಮಾರ್ಚ್‌ ಅಂತ್ಯದಲ್ಲಿ ಆರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಟೂರ್ನಿ ಕೂಡ ಅನಿರ್ದಿಷ್ಠಾವಧಿಗೆ ಮುಂದೂಡಲಾಯಿತು. ಕಡೆಗೂ ಹೋದ ಅಕ್ಟೋಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಐಪಿಎಲ್ ನಡೆಸುವಲ್ಲಿ ಬಿಸಿಸಿಐ ಯಶಸ್ವಿಯಾಯಿತು.

ಮುಂಬೈ ಇಂಡಿಯನ್ಸ್‌ ಚಾಂಪಿಯನ್ ಆದರೆ, ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಗುಂಪುಹಂತದಲ್ಲಿಯೇ ಹೊರಬಿದ್ದಿದ್ದು ಇತಿಹಾಸ. ಯಥಾಪ್ರಕಾರ ವಿರಾಟ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ’ಕಪ್ ‘ ಒಲಿಯಲಿಲ್ಲ. ಇದೆಲ್ಲವೂ ನಡೆದಿದ್ದು ಖಾಲಿ ಕ್ರೀಡಾಂಗಣಗಳಲ್ಲಿ.

ಅಲ್ಲಿಯೇ ತಂಡಗಳನ್ನು ಆಯ್ಕೆ ಮಾಡಿ ಆಸ್ಟ್ರೇಲಿಯಾ ಸರಣಿಗೆ ಕಳಿಸಿಕೊಡಲಾಯಿತು. ಟೂರ್ನಿ ಆರಂಭವಾಗುವ  ಎರಡು ವಾರಗಳ ಮುನ್ನವೇ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್ ಪಾಲಿಸಿತು. ಏಕದಿನ ಸರಣಿಯಲ್ಲಿ ಸೋಲು, ಟ್ವೆಂಟಿ–20ಯಲ್ಲಿ ಗೆದ್ದಿತು. 

ಆದರೆ, ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಹೀನಾಯ ಸೋಲನುಭವಿಸಿತು. ಆ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ತನ್ನ ಕ್ರಿಕೆಟ್ ಇತಿಹಾಸದಲ್ಲಿಯೇ ಕನಿಷ್ಟ ಮೊತ್ತ (36) ಗಳಿಸಿದ ಅವಮಾನಕ್ಕೆ ತುತ್ತಾಯಿತು. ಆದರೆ, ಎರಡನೇ ಪಂದ್ಯದಲ್ಲಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಬಳಗವು ಆಸ್ಟ್ರೇಲಿಯಾ ವಿರುದ್ಧ ಗೆದ್ದು ಮತ್ತೆ ಆತ್ಮವಿಶ್ವಾಸ ಹಳಿಗೆ ಮರಳಿತು. ಹೊಸ ವರ್ಷದಲ್ಲಿ ಸರಣಿ ಗೆದ್ದು ಬೀಗುವ ನಿರೀಕ್ಷೆ ಮೂಡಿಸಿತು.

ಜೀವ ಸುರಕ್ಷಾ ವಲಯಕ್ಕೆ ಇಂಗ್ಲೆಂಡ್  ಮುನ್ನುಡಿ 

ಕೊರೊನಾ ಕಾಲಘಟ್ಟದಲ್ಲಿ ಮೊಟ್ಟಮೊದಲು ದ್ವಿಪಕ್ಷೀಯ ಸರಣಿಗಳಿಗೆ ಅತಿಥ್ಯ ವಹಿಸುವ ಸಾಹಸಕ್ಕೆ ಕೈಹಾಕಿದ್ದು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ.

ಐಸಿಸಿಯೊಂದಿಗೆ ಸೇರಿ ಸಿದ್ಧಪಡಿಸಿದ ಜೀವ ಸುರಕ್ಷಾ ವಲಯ (ಬಯೋ ಬಬಲ್) ನಿಯಮವನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಿತು. ಮೊದಲ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಎದುರು ಮೂರು ಟೆಸ್ಟ್‌ಗಳನ್ನು ಆಡಿ ಜಯಿಸಿತು.

ಹಲವು ದಿನಗಳಿಂದ ಕ್ರಿಕೆಟ್‌ ನೋಡದೇ ಕಂಗೆಟ್ಟಿದ್ದ ಕ್ರೀಡಾಪ್ರಿಯರಿಗೆ ಎರಡೂ ತಂಡಗಳು ರಸದೌತಣ ನೀಡಿದವು. ಆದರೆ, ಚೆಂದಿಗೆ ಎಂಜಲು ಬಳಕೆ ನಿಷೇಧದ ಸುತ್ತ ಸಾಕಷ್ಟು ಚರ್ಚೆಗಳು ನಡೆದವು. ಆದರೆ ಆರೋಗ್ಯ, ಸುರಕ್ಷೆ ದೃಷ್ಟಿಯಿಂದ ತಾತ್ಕಾಲಿಕ ನಿಷೇಧ ಜಾರಿಗೊಳಿಸಲಾಯಿತು.

ನಂತರ ಪಾಕಿಸ್ತಾನ, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳಿ ಆತಿಥ್ಯ ನೀಡಿತು. ಅದರ ಯಶಸ್ಸಿನ ಜಾಡಿನಲ್ಲಿಯೇ ಯುಎಇಯಲ್ಲಿ ಐಪಿಎಲ್ ಸಂಘಟಿಸಿತು.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ಗುಡ್‌ಬೈ

ಭಾರತ ತಂಡಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್‌ ಜಯಿಸಿಕೊಟ್ಟ ನಾಯಕ ಮಹೇಂದ್ರಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳೀದರು.

2014ರಲ್ಲಿಯೇ ಅವರು ಟೆಸ್ಟ್ ಮಾದರಿಗೆ ವಿದಾಯ ಘೋಷಿಸಿದ್ದರು. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್ ನಂತರ ಅವರು ಭಾರತ ತಂಡಕ್ಕೆ ಮರಳಿರಲಿಲ್ಲ. ಆಗಸ್ಟ್‌ನಲ್ಲಿ ಐಪಿಎಲ್‌ ಸಿದ್ಧತೆಗಳು ಆರಂಭವಾದಾಗ ಅವರು ಚೆನ್ನೈಗೆ ಬಂದಿಳಿದರು.

ಸ್ವಾತಂತ್ರ್ಯ ದಿನಾಚರಣೆಯಂದು ಸಂಜೆ ಟ್ವಿಟರ್‌ ಮೂಲಕ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದರು. ಭಾರತ ತಂಡವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ ಕೂಲ್ ಕ್ಯಾಪ್ಟನ್  ಜೊತೆಗೆ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದರು.

ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳುವುದಾಗಿ  ಅವರು ಹೇಳಿದ್ದಾರೆ. ಮುಂದಿನ ವರ್ಷದಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯೂ ಅವರಿಗೆ ಇದೆ ಎನ್ನಲಾಗಿದೆ.

ಈ ಬಾರಿ ಐಪಿಎಲ್‌ನಲ್ಲಿ ಅವರ ನಾಯಕತ್ವದ ತಂಡವು ಪ್ಲೇ ಆಫ್‌ ಪ್ರವೇಶಿಸುವಲ್ಲಿ ವಿಫಲವಾಯಿತು.

ಐಪಿಎಲ್ ಆರಂಭವಾಗುವ ಮುನ್ನವೇ ಸುರೇಶ್ ರೈನಾ ಕೌಟುಂಬಿಕ ಕಾರಣಗಳಿಗಾಗಿ ಭಾರತಕ್ಕೆ ಮರಳಿದರು. ಅವರು ಮತ್ತೆ ಟೂರ್ನಿಗೆ ಮರಳಲಿಲ್ಲ. ಹರಭಜನ್ ಸಿಂಗ್ ಕೂಡ ಈ ಬಾರಿ ಆಡಲಿಲ್ಲ.

ಅಪ್ಪನಾದ ಹಾರ್ದಿಕ್ ಪಾಂಡ್ಯ!

ಕ್ರಿಕೆಟ್ ಮೈದಾನದಿಂದ ಆಚೆ ಸುದ್ದಿ ಮಾಡಿದವರಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖರು.

ಕೆಲವು ತಿಂಗಳುಗಳ ಹಿಂದೆಯಷ್ಟೇ ತಮ್ಮ ಗೆಳತಿ ನತಾಶ ಸ್ಟಾಂಕೊವಿಚ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅವರು ಜೂನ್ ತಿಂಗಳಲ್ಲಿ ತಾವು ತಂದೆಯಾಗುತ್ತಿರುವ ಸಂತಸದ ಸುದ್ದಿಯೊಂದಿಗೆ ಗರ್ಭಿಣಿ ನತಾಶ ಅವರ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದರು. ಆಗಲೇ ಅವರು ಕ್ವಾರಂಟೈನ್ ಮ್ಯಾರೇಜ್ ಆಗಿರುವ ಸುದ್ದಿಯೂ ಬಹಿರಂಗವಾಯಿತು. 

ನಂತರ ಅವರು ಐಪಿಎಲ್‌ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮವಾಗಿ ಆಡಿ ಗಮನ ಸೆಳೆದರು.

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.