ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ–ಕ್ರಿಕೆಟ್‌ನಲ್ಲಿ ವ್ಯಕ್ತಿಗತ ಸಾಧನೆ ಮತ್ತು ತಂಡದ ಹಿತದ ನಡುವೆ ಹೊಯ್ದಾಟ

Last Updated 10 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಅಜೇಯ 175...ಮೊಹಾಲಿಯಲ್ಲಿ ಈಚೆಗೆ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಏಳನೇ ಕ್ರಮಾಂಕದ ಬ್ಯಾಟರ್ ರವೀಂದ್ರ ಜಡೇಜ ಗಳಿಸಿದ ಈ ಸ್ಕೋರು ಈಗ ಚರ್ಚೆಯ ಕೇಂದ್ರಬಿಂದು.

ಜಡೇಜ ದ್ವಿಶತಕದ ಹಾದಿಯಲ್ಲಿದ್ದಾಗಲೇ ನಾಯಕ ರೋಹಿತ್ ಶರ್ಮಾ ಇನಿಂಗ್ಸ್‌ ಡಿಕ್ಲೇರ್ ಮಾಡಿದ್ದರು.ಅದಾಗಿ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ವಿರುದ್ಧ ‘ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ’ ಎಂಬ ಟೀಕಾಸ್ತ್ರಗಳು ಪ್ರಯೋಗವಾದವು. ಅದೇ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಪಿಚ್‌ನಲ್ಲಿ ಚೆಂಡು ಚೆನ್ನಾಗಿ ತಿರುವು ಪಡೆಯುತ್ತಿರುವುದನ್ನು ಗಮನಿಸಿದೆ. ಲಂಕಾ ತಂಡದವರು ಫೀಲ್ಡಿಂಗ್ ಮಾಡಿ ದಣಿದಿದ್ದರು. ಈಗಲೇ ಅವರಿಗೆ ಬ್ಯಾಟಿಂಗ್ ನೀಡಿದರೆ ಒಂದಷ್ಟು ವಿಕೆಟ್ ಗಳಿಸಬಹುದೆಂದು ಯೋಚಿಸಿ, ನಾಯಕನಿಗೆ ಡಿಕ್ಲೇರ್ ಮಾಡಿಕೊಳ್ಳಲು ನಾನೇ ಸಲಹೆ ನೀಡಿದ್ದೆ’ ಎಂದು ಜಡೇಜ ಹೇಳಿದರು. ಅದರ ನಂತರವೂ ರೋಹಿತ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಟೀಕೆಗಳು ನಿಂತಿಲ್ಲ.

ಅಷ್ಟೇ ಅಲ್ಲ. 2004ರಲ್ಲಿ ಪಾಕಿಸ್ತಾನದ ಎದುರಿನ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ 194 ರನ್ ಮಾಡಿದ್ದಾಗ ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ಡಿಕ್ಲೇರ್ ಮಾಡಿದ್ದರು. ಆಗಲೂ ಅವರ ಮೇಲೆ ಟೀಕೆಗಳ ಸುರಿಮಳೆಯಾಗಿತ್ತು. ಆದರೆ ಆ ಪಂದ್ಯದಲ್ಲಿ ಭಾರತ ಜಯಿಸಿತ್ತು. ಆ ಪ್ರಸಂಗದ ಬಗ್ಗೆ ಭಾರತ ತಂಡದಅಂದಿನ ಕೋಚ್ ಆಗಿದ್ದ ಜಾನ್‌ ರೈಟ್ ತಮ್ಮ ಪುಸ್ತಕ ‘ಇಂಡಿಯನ್ ಸಮರ್ಸ್‌’ನಲ್ಲಿ ಬರೆದಿದ್ದಾರೆ.

‘ಇನಿಂಗ್ಸ್‌ನ ಚಹಾ ವೇಳೆ ಸಚಿನ್ 160 ರನ್ ಗಳಿಸಿದ್ದರು. ಆಗಲೇ ಡಿಕ್ಲೇರ್ ಮಾಡಿಕೊಳ್ಳುವಂತೆ ದ್ರಾವಿಡ್‌ಗೆ ನಾನು ಹೇಳಬೇಕಿತ್ತು. ಅವರು ತಂಡದ ಪೂರ್ವಯೋ‌ಜನೆಯಂತೆ ಇನಿಂಗ್ಸ್ ಮುಂದುವರಿಸಿದ್ದರು. ದ್ರಾವಿಡ್‌ಗೆ ತಂಡದ ಗೆಲುವೇ ಮುಖ್ಯವಾಗಿತ್ತು. ಆದರೆ ಈ ವಿಷಯವನ್ನು ದ್ರಾವಿಡ್ ಮತ್ತು ಸಚಿನ್ ಅವರಿಬ್ಬರೂ ನಿರ್ವಹಿಸಿದ ರೀತಿ ಅಭಿನಂದನಾರ್ಹ’ ಎಂದು ರೈಟ್ ಬರೆಯುತ್ತಾರೆ. ಆ ಪಂದ್ಯದ ಕೊನೆಯಲ್ಲಿ ಭಾರತ ಗೆದ್ದಾಗ ಸಚಿನ್ ಸಂಭ್ರಮಿಸಿದ ರೀತಿ ಇಂದಿಗೂ ಹಲವಾರು ಪೋಸ್ಟರ್‌ಗಳಲ್ಲಿ ರಾರಾಜಿಸುತ್ತದೆ. ಈ ಹಿಂದೆಯೂಇಂಥ ಘಟನೆಗಳು ನಡೆದಾಗಲೆಲ್ಲ ತಂಡದಲ್ಲಿ ಆಟಗಾರರ ಬಾಂಧವ್ಯ ಗಟ್ಟಿಯಾಗಿರುವುದನ್ನು ನೋಡಿದ್ದೇವೆ. ಭಾರತದಲ್ಲಷ್ಟೇ ಅಲ್ಲ, ಹೊರದೇಶಗಳ ತಂಡಗಳಲ್ಲಿಯೂ ಇಂತಹ ಉದಾಹರಣೆಗಳು ಹಲವಾರಿವೆ.

2019ರಲ್ಲಿ ಅಡಿಲೇಡ್‌ನಲ್ಲಿ ಪಾಕಿಸ್ತಾನದ ಎದುರಿನ ಟೆಸ್ಟ್‌ನಲ್ಲಿ ಡೇವಿಡ್ ವಾರ್ನರ್ 335 ರನ್‌ಗಳನ್ನು ಗಳಿಸಿದ್ದಾಗ ನಾಯಕ ಟಿಮ್ ಪೇನ್ ಅವರು ಡಿಕ್ಲೇರ್ ಮಾಡಿದ್ದಾಗಲೂ ದೊಡ್ಡ ಚರ್ಚೆ ನಡೆದಿತ್ತು. ಅವತ್ತು ವಾರ್ನರ್ ಅವರು ಡಾನ್ ಬ್ರಾಡ್ಮನ್ ದಾಖಲೆಯನ್ನೂ ಮೀರಿದ್ದರು. 554 ನಿಮಿಷಗಳವರೆಗೆ ಕ್ರೀಸ್‌ನಲ್ಲಿ ಬೆವರು ಹರಿಸಿ ದ್ದರ ಫಲ ಅದಾಗಿತ್ತು. ಅವರಿಗೆ ಇನ್ನೊಂದು ಅರ್ಧ, ಮುಕ್ಕಾಲು ಗಂಟೆ ಬ್ಯಾಟಿಂಗ್ ಮಾಡಲು ಬಿಟ್ಟಿದ್ದರೆ ಬ್ರಯನ್ ಲಾರಾ (400) ದಾಖಲೆಯನ್ನೂ ಮುರಿದುಬಿಡುತ್ತಿದ್ದರು ಎಂಬ ಮಾತುಗಳು ಕೇಳಿಬಂದವು. ಆದರೆ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಲ್ಕನೇ ದಿನದಾಟದಲ್ಲಿಯೇ ಜಯಿಸಿತ್ತು. ಈ ವಿಷಯದಲ್ಲಿ ಪೇನ್ ತಮ್ಮ ಪೂರ್ವನಿಗದಿತ ಯೋಜನೆಯಲ್ಲಿ ಸ್ವಲ್ಪ ರಾಜಿ ಮಾಡಿಕೊಳ್ಳಬಹುದಿತ್ತು, ವಾರ್ನರ್‌ಗೆ ಅವಕಾಶ ಕೊಡಬೇಕಿತ್ತು ಎನ್ನುವ ಮಾತುಗಳೂ ಕೇಳಿಬಂದವು. ಆದರೆ, ಕ್ರಿಕೆಟ್‌ ಎಂಬುದು ಅನಿಶ್ಚಿತತೆಯ ಕಣಜ. 65 ರನ್‌ಗಳನ್ನು ಪೂರೈಸುವುದರೊಳಗೇ ವಾರ್ನರ್ ಔಟಾಗಬಹುದಿತ್ತಲ್ಲವೇ?

ಈ ಹಿಂದೆ ಕರ್ನಾಟಕದ ಕರುಣ್ ನಾಯರ್ ಚೆನ್ನೈನಲ್ಲಿ ತ್ರಿಶತಕ ದಾಖಲಿಸಿದ್ದ ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ಕೆ.ಎಲ್. ರಾಹುಲ್ 199 ರನ್ ಗಳಿಸಿ ಔಟಾಗಿರಲಿಲ್ಲವೇ? ಸಚಿನ್ ತೆಂಡೂಲ್ಕರ್ ಹಲವು ಪಂದ್ಯಗಳಲ್ಲಿ 90–99ರ ಮಧ್ಯದಲ್ಲಿ ಔಟಾಗಿದ್ದು ‘ನರ್ವಸ್‌ ನೈಂಟಿ’ ಎಂಬ ಪದ ಜನಿಸಲು ಕಾರಣವಾಗಿತ್ತು. ಆದರೆ ಕೆಲವೊಮ್ಮೆ ಶತಕ, ದ್ವಿಶತಕಗಳಿಗಿಂತ ತಂಡದ ಜಯಕ್ಕೆ ಬಲ ತುಂಬಿದ ಇನಿಂಗ್ಸ್‌ಗಳು ಅಜರಾಮರವಾಗಿಬಿಡುತ್ತವೆ. 48 ವರ್ಷಗಳ ಹಿಂದೆ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಜಿ.ಆರ್. ವಿಶ್ವನಾಥ್ ಅವರ ಅಜೇಯ 97 ರನ್‌ಗಳ ಆಟವನ್ನು ಮರೆಯಲು ಸಾಧ್ಯವೇ?

ಹೋದ ವರ್ಷ ಸಿಡ್ನಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಡ್ರಾ ಸಾಧಿಸಲು ಕಾರಣ ವಾಗಿದ್ದು ರಿಷಭ್ ಪಂತ್ ಗಳಿಸಿದ್ದ 97 ರನ್‌ಗಳು. ಅದಕ್ಕೂ ಎರಡು ವರ್ಷಗಳ ಮುನ್ನ ಅದೇ ಪಿಚ್‌ನಲ್ಲಿ ರಿಷಭ್ ಗಳಿಸಿದ್ದ ಶತಕಕ್ಕಿಂತಲೂ ಈ ಇನಿಂಗ್ಸ್‌ನ ಬೆಲೆ ಹೆಚ್ಚು.ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಟೆಸ್ಟ್ ಸರಣಿಗಳೆಲ್ಲವೂ ವಿಶ್ವ ಚಾಂಪಿಯನ್‌ಷಿಪ್‌ನ ಭಾಗವೇ ಆಗಿರುವುದರಿಂದ ಪ್ರತೀ ಪಂದ್ಯದ ಗೆಲುವೂ ಮಹತ್ವದ್ದಾಗಿದೆ. ಆದ್ದರಿಂದ ವೈಯಕ್ತಿಕ ದಾಖಲೆಗಳಿಗಿಂತ ತಂಡದ ಹಿತವೇ ಮುಖ್ಯ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಫೈನಲ್ ಪ್ರವೇಶಿಸುವುದು ಗುರಿ. ಇದರಿಂದಾಗಿ ಆಟಗಾರರ ಮನಃಸ್ಥಿತಿಯೂ ಬದಲಾಗುತ್ತಿದೆ. ದಾಖಲೆಯ ಮೇಲೆ ಕಣ್ಣಿಟ್ಟು ಆಡುವುದನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ.

ಆದರೆ, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರರು ಮೈಲಿಗಲ್ಲುಗಳನ್ನು ಸ್ಥಾಪಿಸಬೇಕು ಎಂಬ ಆಸೆ ಆಗಲೂ ಇತ್ತು, ಈಗಲೂ ಇದೆ, ಬಹುಶಃ ಮುಂದೆಯೂ ಇರುತ್ತದೆ. ಟೆಸ್ಟ್ ಕ್ರಿಕೆಟ್ ಉಳಿಸುವ ಸಲುವಾಗಿ ಹಲವಾರು ಪ್ರಯೋಗ ಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಜನರನ್ನು ಸೆಳೆಯುವ ಇಂತಹ ಅಂಶಗಳನ್ನು ನಾಯಕರಾದವರು ಗಮನಿಸುವುದು ಒಳಿತು. ಪೂರ್ವಯೋಜನೆಗೆ ಅಂಟಿ ಕೊಳ್ಳದೇ ಸಂದರ್ಭೋಚಿತ ನಿರ್ಣಯ ಕೈಗೊಳ್ಳುವತ್ತ ಚಿತ್ತ ಹರಿಸಬೇಕು. ಒಬ್ಬರು ಹೊಸ ದಾಖಲೆ ನಿರ್ಮಿಸುವುದು, ಮತ್ತೊಬ್ಬರು ಅವುಗಳನ್ನು ಮುರಿಯುವ ಈ ಪ್ರಕ್ರಿಯೆಯು ಆಟದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಅಂಶವೂ ಹೌದು.

ರೋಹಿತ್‌ ಪೂರ್ಣಾವಧಿ ನಾಯಕನಾಗಿ ಮುನ್ನಡೆಸಿದ ಮೊದಲ ಪಂದ್ಯ ಇದಾಗಿತ್ತು. ತಂಡದ ಹಿತ ಮೊದಲು ಎನ್ನುವುದು ನಿಜ. ಆದರೆ ಜಡೇಜ ಅವರಂಥ ಆಲ್‌ರೌಂಡರ್‌ಗೆ ಒಂದು ಮೈಲಿಗಲ್ಲು ಸ್ಥಾಪಿಸಲು ಪ್ರೇರಣೆಯಾಗುವ ಅವಕಾಶವನ್ನು ರೋಹಿತ್ ಕಳೆದು ಕೊಂಡರು.ಮೊಹಾಲಿ ಪಂದ್ಯದಲ್ಲಿ ರೋಹಿತ್ ಮತ್ತು ದ್ರಾವಿಡ್ ನಿರ್ಧಾರ ಕೈಗೊಳ್ಳುವ ಮುನ್ನ ಈ ಅಭಿಮಾನಿಗಳ ದೃಷ್ಟಿಕೋನದ ಅಂಶವನ್ನು ಗಣನೆಗೆ ತೆಗೆದುಕೊಳ್ಳಬಹುದಿತ್ತು.

ಏಕೆಂದರೆ, ಸದ್ಯ ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ತಂಡ ಬಲಾಢ್ಯವೇನಲ್ಲ. ಡಿಕ್ಲೇರ್ ಮಾಡಿ ಕೊಂಡಾಗ ಪಂದ್ಯದಲ್ಲಿ ಇನ್ನೂ ಮೂರೂವರೆ ದಿನಗಳಿದ್ದವು. ಆತಿಥೇಯರ ಜಯ ಕೈತಪ್ಪುವ ಸಾಧ್ಯತೆಯೇನೂ ಇರಲಿಲ್ಲ. ದ್ವಿಶತಕಕ್ಕೆ ಬೇಕಾಗಿದ್ದ 25 ರನ್‌ಗಳನ್ನು ಜಡೇಜ ಗಳಿಸುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಅವಕಾಶವನ್ನಂತೂ ಕೊಡಬಹುದಿತ್ತು. 36 ವರ್ಷಗಳ ಹಿಂದೆ ಕಪಿಲ್ ದೇವ್ ಏಳನೇ ಕ್ರಮಾಂಕ ದಲ್ಲಿ ಗಳಿಸಿದ್ದ 163 ರನ್‌ಗಳು ಇಲ್ಲಿಯವರೆಗೂ ದಾಖಲೆ ಯಾಗಿತ್ತು. ಅದನ್ನು ಮೊಹಾಲಿಯಲ್ಲಿ ಜಡೇಜ ಮೀರಿ ನಿಂತರು.33 ವರ್ಷದ ಜಡೇಜ ಅವರಿಗೆ ಮುಂದಿನ ದಿನಗಳಲ್ಲಿ ಇಂತಹ ಮತ್ತೊಂದು ದೀರ್ಘ ಇನಿಂಗ್ಸ್‌ ಆಡಲು ಸಾಧ್ಯವಾಗುವುದೋ ಇಲ್ಲವೋ ಎಂಬ ಬಗ್ಗೆಯೂ ತಂಡದ ಆಡಳಿತ ಯೋಚಿಸಬಹುದಿತ್ತು. ಆದ್ದರಿಂದ ಸ್ವತಃ ಜಡೇಜ ಸಲಹೆ ನೀಡಿದ್ದರೂ ಅದನ್ನು ಅನುಮೋದಿಸುವುದು ಅಥವಾ ಬಿಡುವುದು ನಾಯಕನ ಕೈಯ್ಯಲ್ಲಿತ್ತಲ್ಲವೇ?.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT