ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ದೇಶಿ ಹೊನಲು ಬೆಳಕಿನ ಕ್ರಿಕೆಟ್ ಸರಣಿ ಆಯೋಜಿಸಿ: ಶಾಂತಾ ಸಲಹೆ

Last Updated 20 ಮೇ 2021, 15:10 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರ ಟೆಸ್ಟ್ ಕ್ರಿಕೆಟ್ ಮತ್ತೆ ಆರಂಭವಾಗುತ್ತಿರುವುದು ಸ್ವಾಗರ್ತಾಹ. ಭಾರತ ತಂಡವು ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲು ತೆರಳುವ ಮುನ್ನ ದೇಶಿ ವಿಭಾಗದಲ್ಲಿ ಹೊನಲು ಬೆಳಕಿನ ಪಂದ್ಯಗಳನ್ನು ಆಯೋಜಿಸಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಪೆಕ್ಸ್ ಕೌನ್ಸಿಲ್ ಸದಸ್ಯೆ ಶಾಂತಾ ರಂಗಸ್ವಾಮಿ ಸಲಹೆ ನೀಡಿದ್ದಾರೆ.

ಭಾರತ ತಂಡವು ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡಲಿದೆ. ಕಳೆದ ಏಳು ವರ್ಷಗಳಿಂದ ತಂಡವು ಟೆಸ್ಟ್‌ನಲ್ಲಿ ಆಡಿಲ್ಲ. 2018ರಿಂದ ಮಹಿಳೆಯರ ದೇಶಿ ಕ್ರಿಕೆಟ್‌ ಟೂರ್ನಿಗಳೂ ಹೆಚ್ಚು ನಡೆದಿಲ್ಲ.

‘ಹೋದ ವರ್ಷ ಮಹಿಳೆಯರಿಗಾಗಿ ಕೆಲವು ಟೂರ್ನಿಗಳನ್ನು ಆಯೋಜಿಸಲು ಬಿಸಿಸಿಐ ಚಿಂತನೆ ಮಾಡಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಎಲ್ಲ ಯೋಜನೆಗಳು ತಲೆಕೆಳಗಾದವು. ಇದೀಗ ಇಂಗ್ಲೆಂಡ್ ಟೆಸ್ಟ್‌ ಪ್ರವಾಸಕ್ಕೆ ಯೋಜನೆ ಮಾಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಹೊನಲು ಬೆಳಕಿನ ಟೆಸ್ಟ್ ಪಂದ್ಯದ ದಿನಾಂಕ ಪ್ರಕಟಿಸಿರುವುದು ಶ್ಲಾಘನೀಯ. ದೀರ್ಘ ಮಾದರಿಯ ಕ್ರಿಕೆಟ್‌ಗೆ ಹೆಚ್ಚುಒತ್ತು ಕೊಡಬೇಕು. ಆದರೆ ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಭಾರತದ ಆಟಗಾರ್ತಿಯರು ಹೆಚ್ಚು ಆಡಿದ ಅನುಭವ ಇಲ್ಲ. ಆದ್ದರಿಂದ ದೇಶಿ ಟೂರ್ನಿಗಳನ್ನು ಆಯೋಜಿಸಬೇಕು‘ ಎಂದು ಹೇಳಿದರು.

‘ಪುರುಷರ ತಂಡವು ಜುಲೈನಲ್ಲಿ ಶ್ರೀಲಂಕಾದಲ್ಲಿ ಸರಣಿ ಆಡಲು ತೆರಳುತ್ತಿರುವುದು ಸಂತಸದ ವಿಷಯ. ಅದೇ ಹೊತ್ತಿಗೆ ಶ್ರೀಲಂಕಾದಲ್ಲಿಯೇ ಮಹಿಳೆಯರಿಗಾಗಿಯೂ ಒಂದು ಸರಣಿ ಆಯೋಜಿಸುವುದು ಒಳ್ಳೆಯದು‘ ಎಂದು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT