ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡಾಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು: ಅಜಂತಾ ಮೆಂಡಿಸ್

Published 9 ಡಿಸೆಂಬರ್ 2023, 16:44 IST
Last Updated 9 ಡಿಸೆಂಬರ್ 2023, 16:44 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೀಡಾಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಿದರೆ, ಆ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಶ್ರೀಲಂಕಾದ ಮಾಜಿ ಸ್ಪಿನರ್‌ ಅಜಂತಾ ಮೆಂಡಿಸ್ ಅಭಿಪ್ರಾಯಪಟ್ಟರು.

ನಗರದ ಆರ್ಕಿಡ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ‘ಮಾಸ್ಟರ್‌ ಕ್ಲಾಸ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮದವರ ಜತೆ ಮಾತನಾಡಿದರು. 

ಕರ್ತವ್ಯ ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ತಡೆಯಲು ಶ್ರೀಲಂಕಾದ ಕ್ರಿಕೆಟ್‌ ಮಂಡಳಿ ವಿಫಲವಾಗಿದೆ ಎಂದು ಐಸಿಸಿ ದೇಶದ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸಿದೆ. ಕ್ರಿಕೆಟ್ ಮಾತ್ರವಲ್ಲ ಕ್ರೀಡಾ ಕ್ಷೇತ್ರದಲ್ಲಿಯೇ ಕೆಟ್ಟ ರಾಜಕೀಯ ಇರಬಾರದು. ಇದು ಒಳ್ಳೆಯ ಬೆಳವಣಿಗೆಯಲ್ಲ. ಅಲ್ಲಿನ ಆಡಳಿತ ಸುಗಮವಾಗಿ ನಡೆದುಕೊಂಡು ಹೋಗಬೇಕು. ಸದ್ಯಕ್ಕೆ ಪರಿಸ್ಥಿತಿ ಸುಧಾರಿಸುತ್ತಿದೆ. ಅದು ಶೀಘ್ರವೇ ಸಹಜ ಸ್ಥಿತಿಗೆ ಬರಬೇಕು ಎಂದು ತಿಳಿಸಿದರು.

ಯುವ ಕ್ರಿಕೆಟಿಗರಿಗೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ. ಕೋಚ್‌ಗಳು, ಹಿರಿಯ ಆಟಗಾರರ ಅನುಭವ ಕೇಳಿ ತಿಳಿದುಕೊಳ್ಳಬಹುದು. ಯುವ ಪೀಳಿಗೆಗೆ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶ ಇದೆ. ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಫಿಟ್‌ನೆಸ್‌ ಕಡೆಗೆ ಹೆಚ್ಚು ಗಮನ ನೀಡಬೇಕು. ಸವಾಲುಗಳನ್ನು ಎದುರಿಸಿ ನಿರಂತರ ಶ್ರಮ, ದೃಢ ವಿಶ್ವಾಸದಿಂದ ಗುರಿ ಸಾಧಿಸಲು ಹೊರಟರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಯುವ ಕ್ರೀಡಾಪಟುಗಳಿಗೆ ಸಲಹೆ ನೀಡಿದರು. 

ವಿಶ್ವಕಪ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡ ಕಳಪೆ ಪ್ರದರ್ಶನ ನೀಡಿದೆ. ಆದರೆ, ಇದು ಮುಂದುವರಿಯಬಾರದು. ಭವಿಷ್ಯದಲ್ಲಿ ನಾವು ಉತ್ತಮ ತಂಡ ಹೊಂದುವ ವಿಶ್ವಾಸವಿದೆ ಎಂದರು. 

‘ಭಾರತ ಕ್ರಿಕೆಟ್‌ ಆಟಗಾರರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ವಿವಿಧ ಪಂದ್ಯಾವಳಿ ಆಡಲು ಸಾಕಷ್ಟು ಬಾರಿ ಭಾರತಕ್ಕೆ ಬಂದಿದ್ದೇನೆ. ನನ್ನ ಪತ್ನಿಗೆ ಹಿಂದಿ ಭಾಷೆ ಗೊತ್ತಿದೆ. ಆಕೆಯಿಂದ ನಾನು ಕೆಲವು ಪದಗಳನ್ನು ಕಲಿತಿದ್ದೇನೆ’ ಎಂದರು.

ಶಾಲೆಯ ಹರಳೂರು ಕ್ಯಾಂಪಸ್‌ನಲ್ಲಿ ನಡೆದ ‘ಮಾಸ್ಟರ್‌ ಕ್ಲಾಸ್‌’ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷೆ ಮಂಜುಳಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT