ಆಂಕಿತ್ ಆಟಕ್ಕೆ ಒಲಿದ ಮುನ್ನಡೆ

7
ಕ್ರಿಕೆಟ್: ಭಾರತ ಎ –ಆಸ್ಟ್ರೇಲಿಯಾ ಎ ನಡುವಣ ‘ಟೆಸ್ಟ್‌’

ಆಂಕಿತ್ ಆಟಕ್ಕೆ ಒಲಿದ ಮುನ್ನಡೆ

Published:
Updated:
Deccan Herald

ಬೆಂಗಳೂರು: ಅಂಕಿತ್ ಭಾವ್ನೆ ಅವರ ದಿಟ್ಟ ಬ್ಯಾಟಿಂಗ್‌ ಬಲದಿಂದ ಭಾರತ ‘ಎ’ ತಂಡವು  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಟೆಸ್ಟ್‌’ ಪಂದ್ಯದಲ್ಲಿ ಆಸ್ಟ್ರೇಲಿಯಾ ‘ಎ’ ವಿರುದ್ಧ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ.

ಭಾನುವಾರ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಪ್ರವಾಸಿ ಬಳಗವು 243 ರನ್‌ ಗಳಿಸಿತ್ತು. ಮೊಹಮ್ಮದ್ ಸಿರಾಜ್ ಅವರು ಎಂಟು ವಿಕೆಟ್ ಪಡೆದು ಮಿಂಚಿದ್ದರು.  ಪಂದ್ಯದ ಎರಡನೇ ದಿನವಾದ ಸೋಮವಾರ ಭಾರತ ‘ಎ’ ತಂಡವು 83.1 ಓವರ್‌ಗಳಲ್ಲಿ 274 ರನ್‌ ಗಳಿಸಿ ಆಲೌಟ್‌ ಆಯಿತು. ಅಂಕಿತ್ (ಔಟಾಗದೆ 91; 159ಎಸೆತ, 6ಬೌಂಡರಿ, 3 ಸಿಕ್ಸರ್) ಅರ್ಧಶತಕ ಗಳಿಸಿದರು. ಭಾರತವು 31 ರನ್‌ಗಳ ಅಲ್ಪ ಮುನ್ನಡೆ ಪಡೆಯಿತು. ಮೈಕೆಲ್ ನೆಸೆರ್ (61ಕ್ಕೆ4) ಭಾರತ ಎ ಬಳಗವು ದೊಡ್ಡ ಮುನ್ನಡೆ ಗಳಿಸದಂತೆ ತಡೆಯೊಡ್ಡಿದರು.

ಎರಡನೇ ಇನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ ‘ಎ’ ತಂಡವು ದಿನದಾಟದ ಕೊನೆಗೆ 16 ಓವರ್‌ಗಳಲ್ಲಿ 1 ವಿಕೆಟ್‌ಗೆ 42 ರನ್ ಗಳಿಸಿದೆ. ಪಂದ್ಯದಲ್ಲಿ ಇನ್ನೂ ಎರಡು ದಿನ ಬಾಕಿ ಉಳಿದಿವೆ.

ಅಂಕಿತ್ ದಿಟ್ಟ ಆಟ: ಕರ್ನಾಟಕದ ‘ರನ್‌ ಯಂತ್ರ’ ಮಯಂಕ್ ಅಗರವಾಲ್ (47; 51ಎಸೆತ, 11ಬೌಂಡರಿ) ಅವರು ಅರ್ಧಶತಕದ ಅಂಚಿನಲ್ಲಿ ಎಡವಿದರು. ಮಯಂಕ್ ಮತ್ತು ಸಮರ್ಥ್ (25; 77ಎಸೆತ)  ಮೊದಲ ವಿಕೆಟ್‌ ಜೊತೆಯಾಟದಲ್ಲಿ 62 ರನ್‌ ಸೇರಿಸಿದರು. 16ನೇ ಓವರ್‌ನಲ್ಲಿ ಮಯಂಕ್ ಔಟಾದರು. ಆರ್. ಸಮರ್ಥ್ ಮತ್ತು ಎ. ಆರ್. ಈಶ್ವರನ್ (36; 57ಎಸೆತ) ಜೊತೆಗೂಡಿ ಇನಿಂಗ್ಸ್‌ ಕಟ್ಟುವ ಪ್ರಯತ್ನ ಮಾಡಿದರು. ಆದರೆ 28ನೇ ಓವರ್‌ನಲ್ಲಿ ಸಮರ್ಥ್ ಔಟಾದರು. ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ ಕೇವಲ 3 ರನ್‌ ಗಳಿಸಿ ಔಟಾದರು. ಆಗ ಕ್ರೀಸ್‌ಗೆ ಬಂದ ಅಂಕಿತ್ ಆಟಕ್ಕೆ ಕುದುರಿಕೊಳ್ಳುವ ಮುನ್ನ ಈಶ್ವರನ್ ಕೂಡ  ಔಟಾದರು. ಅವರ ನಂತರ ಬಂದ ಕೆ.ಎಸ್. ಭರತ್ ಕೂಡ ಜಾನ್ ಹಾಲೆಂಡ್ ಎಸೆತದಲ್ಲಿ ಕ್ಲೀನ್‌ಬೌಲ್ಡ್‌ ಆದರು. 

ಇದರಿಂದಾಗಿ ತಂಡವು 127 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡ ತಂಡವು ಸಂಕಷ್ಟಕ್ಕೆ ಸಿಲುಕಿತು. ಅಂಕಿತ್ ಜೊತೆಗೂಡಿದ ಕೃಷ್ಣಪ್ಪ ಗೌತಮ್ (31; 34ಎಸೆತ, 5ಬೌಂಡರಿ) ಆವರು ಆರನೇ ವಿಕೆಟ್‌ಗೆ 51 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ಚೇತರಿಕೆ ಕಂಡಿತು. 50ನೇ ಓವರ್‌ನಲ್ಲಿ ಹಾಲೆಂಡ್ ಅವರ ಎಸೆತದ ವೇಗವನ್ನು ಅಂದಾಜಿಸುವಲ್ಲಿ ವಿಫಲರಾದ ಗೌತಮ್ ಬೌಲ್ಡ್‌ ಆದರು. ಇದರಿಂದಾಗಿ ಜೊತೆಯಾಟ ಮುರಿದುಬಿತ್ತು. ಕ್ರೀಸ್‌ಗೆ ಬಂದ ಕುಲದೀಪ್ ಯಾದವ್ (18ರನ್) ಅಲ್ಪ ಕಾಣಿಕೆ ನೀಡಿದರು. ನಂತರ ಬಂದ ಮೊಹಮ್ಮದ್ ಸಿರಾಜ್ 26 ಎಸೆತಗಳನ್ನು ಆಡಿ ಐದು ರನ್‌ ಗಳಿಸಿದರು. ಅವರು ಔಟಾದ ಮೇಲೆ ನವದೀಪ್ ಸೈನಿ 15 ಎಸೆತ ಆಡಿ ಒಂದೂ ರನ್ ಗಳಿಸಲಿಲ್ಲ.  ಆದರೆ ಅವರ ಬೆಂಬಲದಿಂದ ಅಂಕಿತ್  ತಂಡದ ಮೊತ್ತ ಹೆಚ್ಚಿಸಲು ಬಿರುಸಿನ ಆಟವಾಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !