ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup: ಶ್ರೀಲಂಕೆಗೆ ಆಘಾತ ನೀಡಿದ ಅಫ್ಗಾನಿಸ್ತಾನ, 8 ವಿಕೆಟ್‌ಗಳ ಭರ್ಜರಿ ಜಯ

ಏಷ್ಯಾಕಪ್ ಟಿ20 ಕ್ರಿಕೆಟ್: ಐತಿಹಾಸಿಕ ಜಯ ಸಾಧಿಸಿದ ನಬಿ ಬಳಗ
Last Updated 27 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ದುಬೈ : ಅಫ್ಗಾನಿಸ್ತಾನದ ಎಡಗೈ ವೇಗಿ ಫಜಲ್ ಹಕ್ ಫಾರೂಕಿ ಶಿಸ್ತಿ ದಾಳಿ ಹಾಗೂ ರೆಹಮಾನುಲ್ಲಾ ಗುರ್ಬಾಜ್ ಬ್ಯಾಟಿಂಗ್ ನೆರವಿನಿಂದ ಅಫ್ಗಾನಿಸ್ತಾನ ತಂಡವು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಶನಿವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾದ ಟೂರ್ನಿಯ ಮೊದಲ ಪಂದ್ಯದಲ್ಲಿ ಅಫ್ಗನ್ ತಂಡವು 8 ವಿಕೆಟ್‌ಗಳಿಂದ ಶ್ರೀಲಂಕಾಕ್ಕೆ ಆಘಾತ ನೀಡಿತು. ಐತಿಹಾಸಿಕ ಜಯ ದಾಖಲಿಸಿತು.

ಟಾಸ್ ಗೆದ್ದ ಅಫ್ಗಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.ಶಿಸ್ತಿನ ದಾಳಿಯ ಮುಂದೆ ಶ್ರೀಲಂಕಾ 19.4 ಓವರ್‌ಗಳಲ್ಲಿ 105 ರನ್‌ ಗಳಿಸಿ ಆಲೌಟ್ ಆಯಿತು. ‌ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಅಫ್ಗನ್ ತಂಡವು 10.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 106 ರನ್‌ ಗಳಿಸಿತು. ರೆಹಮಾನುಲ್ಲಾ (40; 18ಎ, 4X3, 6X4) ಹಾಗೂ ಹಜ್ರತುಲ್ಲಾ ಝಝೈ (ಔಟಾಗದೆ 37) ಮೊದಲ ವಿಕೆಟ್‌ಗೆ 83 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು.

ಫಾರೂಕಿ ದಾಳಿ:ಅಫ್ಗಾನಿಸ್ತಾನದ ಬೌಲರ್‌ಗಳು ತಂಡದ ಗೆಲುವಿಗೆ ಮುನ್ನುಡಿ ಬರೆದರು. ಮೊದಲ ಓವರ್‌ನಲ್ಲಿ ಫಾರೂಕಿ ಎರಡು ವಿಕೆಟ್‌ ಕಿತ್ತು ತಮ್ಮ ನಾಯಕ ನಿರ್ಧಾರ ಸಮರ್ಥಿಸಿಕೊಂಡರು. ಐದನೇ ಎಸೆತದಲ್ಲಿ ಕುಶಾಲ ಮೆಂಡಿಸ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರೆ, ಆರನೇ ಎಸೆತದಲ್ಲಿ ಅಸಲಂಕಾ ಔಟಾದರು.

ನಂತರದ ಓವರ್‌ನಲ್ಲಿ ನವೀನ್ ಉಲ್ ಹಕ್ ಕೂಡ ಲಂಕೆಗೆ ಪೆಟ್ಟುಕೊಟ್ಟರು. ಪಥುಮ್ ನಿಸಾಂಕಾ ವಿಕೆಟ್ ಪಡೆದು ಸಂಭ್ರಮಿಸಿದರು.

ಗುಣತಿಲಕ (17;17ಎ, 4X3) ಹಾಗೂ ರಾಜಪಕ್ಸ (38; 29ಎ, 4X5) ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 44 ರನ್‌ ಸೇರಿಸಿದರು. ಆದರೆ ಎಂಟನೇ ಓವರ್‌ನಲ್ಲಿ ಗುಣತಿಲಕ ವಿಕೆಟ್ ಗಳಿಸಿದ ಮುಜೀಬ್ ಜೊತೆಯಾಟವನ್ನು ಮುರಿದರು.

ಎರಡು ಓವರ್‌ಗಳ ನಂತರ ವಣಿಂದು ಹಸರಂಗಾ ವಿಕೆಟ್ ಕೂಡ ಮುಜೀಬ್ ಪಾಲಾಯಿತು. ಸ್ವಲ್ಪ ಭರವಸೆ ಮೂಡಿಸಿದ್ದ ರಾಜಪಕ್ಸ ರನೌಟ್ ಆದರು. ಇದರಿಂದಾಗಿ ತಂಡವು ನೂರರ ಗಡಿ ದಾಟುವುದೇ ಅನುಮನವಾಗಿತ್ತು. ಈ ಹಂತದಲ್ಲಿ ಒಂದಿಷ್ಟು ಉತ್ತಮ ಹೊಡೆತಗಳ ಆಟವಾಡಿದ ಕರುಣಾರತ್ನೆ (31; 38ಎ, 4X3, 6X1) ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 19.4 ಓವರ್‌ಗಳಲ್ಲಿ 105 (ರಾಜಪಕ್ಸ 38, ಕರುಣಾರತ್ನೆ 31, ಗುಣತಿಲಕ 17, ಫಜಲ್‌ ಹಕ್ ಫಾರೂಕಿ 11ಕ್ಕೆ3, ಮುಜೀಬ್ 24ಕ್ಕೆ2, ಮೊಹಮ್ಮದ್ ನಬಿ 14ಕ್ಕೆ2)

ಅಫ್ಗಾನಿಸ್ತಾನ 10.1 ಓವರ್‌ಗಳಲ್ಲಿ 2ಕ್ಕೆ 106 (ಹಜ್ರತುಲ್ಲಾ ಝಝೈ ಔಟಾಗದೆ 37, ರೆಹಮಾನುಲ್ಲಾ ಗುರ್ಬಾಜ್‌ 40, ಇಬ್ರಾಹಿಂ ಜದ್ರಾನ್‌ ಔಟಾಗದೆ 15; ವನಿಂದು ಹಸರಂಗ 19ಕ್ಕೆ 1).

ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ ಎಂಟು ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT