ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೋರಾಟ ನೀಡಿ ಹೊರಬಿದ್ದ ಸ್ಕಾಟ್ಲೆಂಡ್‌: 8ರ ಘಟ್ಟ ಪ್ರವೇಶಿಸಿದ ಇಂಗ್ಲೆಂಡ್‌

ಇಂಗ್ಲೆಂಡ್‌ಗೆ ನೆರವಾದ ಮಿಚೆಲ್ ಮಾರ್ಷ್‌ ಬಳಗದ ಗೆಲುವು
Published 16 ಜೂನ್ 2024, 13:02 IST
Last Updated 16 ಜೂನ್ 2024, 13:02 IST
ಅಕ್ಷರ ಗಾತ್ರ

ಗ್ರಾಸ್‌ ಐಲ್‌ (ಸೇಂಟ್‌ ಲೂಸಿಯಾ): ಆಸ್ಟ್ರೇಲಿಯಾ ತಂಡದವರು ವಿರೋಚಿತ ಆಟವಾಡಿದ ಸ್ಕಾಟ್ಲೆಂಡ್‌ ತಂಡವನ್ನು ಭಾನುವಾರ ಐದು ವಿಕೆಟ್‌ಗಳಿಂದ ಸೋಲಿಸಿದರು. ಈ ಫಲಿತಾಂಶದಿಂದ ಅದರ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ ತಂಡ ‘ಬಿ’ ಗುಂಪಿನಿಂದ ಎರಡನೇ ತಂಡವಾಗಿ ಟಿ20 ವಿಶ್ವಕಪ್‌ ಸೂಪರ್‌ ಎಂಟರ ಘಟ್ಟ ಪ್ರವೇಶಿಸಲೂ ಅನುಕೂಲವಾಯಿತು.

‘ಬಿ’ ಗುಂಪಿನ ಲೀಗ್ ವ್ಯವಹಾರ ಮುಗಿದಿದ್ದು ಸೋಲಿನಿಂದ ಸ್ಕಾಟ್ಲೆಂಡ್‌ ನಿರಾಸೆಗೊಳಗಾಯಿತು. ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಲಾ ಎರಡು ಪಂದ್ಯಗಳನ್ನು ಗೆದ್ದುಕೊಂಡರೂ, ಇಂಗ್ಲೆಂಡ್‌ ಉತ್ತಮ ನೆಟ್‌ ರನ್‌ ರೇಟ್‌ (3.611) ಆಧಾರದಲ್ಲಿ ಮುನ್ನಡೆಯಿತು. ರಿಚೀ ಬೇರಿಂಗ್‌ಟನ್‌ ಸಾರಥ್ಯದ ತಂಡ (1.255) ಮೂರನೇ ಸ್ಥಾನಕ್ಕೆ ಸರಿಯಿತು.

181 ರನ್‌ಗಳ ಗುರಿ ಎದುರಿಸಿದ ಆಸ್ಟ್ರೇಲಿಯಾ 19.4 ಓವರುಗಳಲ್ಲಿ 5 ವಿಕೆಟ್‌ಗೆ 186 ರನ್ ಬಾರಿಸಿತು. ನಾಕೌಟ್‌ ಆಸೆ ಈಡೇರಿಸಿಕೊಳ್ಳಲು ಸ್ಕಾಟ್ಲೆಂಡ್ ಕೊನೆಯವರೆಗೂ ಯತ್ನ ನಡೆಸಿತು.

5 ವಿಕೆಟ್‌ಗೆ 181 ರನ್‌ಗಳ ಉತ್ತಮ ಮೊತ್ತ ಗಳಿಸಿದ ಸ್ಕಾಟ್ಲೆಂಡ್ ಒಂದು ಹಂತದಲ್ಲಿ ಆಸ್ಟ್ರೇಲಿಯಾದ ಮೂರು ವಿಕೆಟ್‌ಗಳನ್ನು 9.2 ಓವರ್‌ಗಳ ಒಳಗೆ 60 ರನ್ನಿಗೆ ಪಡೆದು ಮೇಲುಗೈ ಸಾಧಿಸುವಂತೆ ಕಂಡಿತು. ವಾರ್ನರ್‌, ನಾಯಕ ಮಿಚೆಲ್ ಮಾರ್ಷ್ ಮತ್ತು ಮ್ಯಾಕ್ಸ್‌ವೆಲ್‌ ಬೇಗ ಮರಳಿದರು. ಆದರೆ ಆರಂಭ ಆಟಗಾರ ಟ್ರಾವಿಸ್‌ ಹೆಡ್‌ (69, 49ಎ, 4x5, 6x4) ಜೊತೆಗೂಡಿದ ಮಾರ್ಕಸ್‌ ಸ್ಟೊಯಿನಿಸ್‌ (59, 29ಎ, 4x9, 6x2) ಮಿಂಚಿನ ಆಟದ ಮೂಲಕ ಆಸ್ಟ್ರೇಲಿಯಾಕ್ಕೆ ಅಮೋಘ ಚೇತರಿಕೆ ನೀಡಿದರು. ನಾಲ್ಕನೇ ವಿಕೆಟ್‌ಗೆ 80 ರನ್‌ (44 ಎಸೆತ) ಸೇರಿಸಿದ್ದರಿಂದ ಮಿಚೆಲ್ ಪಡೆ ಚೇತರಿಸಿಕೊಂಡಿತು. ಟಿಮ್ ಡೇವಿಡ್‌ ಕೊನೆಯಲ್ಲಿ ಅಜೇಯ 24 ರನ್ ಗಳಿಸಿದರು.

‘ನಾವು ಯೋಜನೆಗೆ ಅಂಟಿಕೊಳ್ಳಬೇಕೆಂದು ಮಾತಾಡಿಕೊಂಡಿದ್ದೆವು. ಸ್ಕಾಟ್ಲೆಂಡ್ ಉತ್ತಮ ತಂಡ. ಅವರು ಸಾಕಷ್ಟು ಸುಧಾರಿಸಿದ್ದಾರೆ. ಸ್ಥಿರ ಪ್ರದರ್ಶನ ನೀಡುವುದು ನಮ್ಮ ಗುರಿಯಾಗಿತ್ತು. ತಂಡಕ್ಕೆ ಸವಾಲು ಎದುರಾದಾಗಲ್ಲೆಲ್ಲಾ ನಮ್ಮಿಂದ ಉತ್ತಮ ಆಟ ಬಂದಿದೆ’ ಎಂದು ಮಿಚೆಲ್‌ ಮಾರ್ಷ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಆಸ್ಟ್ರೇಲಿಯಾ ತಂಡವು ಅನುಭವಿ ವೇಗಿಗಳಾದ ಪ್ಯಾಟ್‌ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೆ ವಿಶ್ರಾಂತಿ ನೀಡಿತು. ಅವರ ಗೈರಿನಲ್ಲಿ ಇತರ ಬೌಲರ್‌ಗಳು ಅಷ್ಟೇನೂ ಪರಿಣಾಮ ಬೀರಲಿಲ್ಲ.

ಇದಕ್ಕೆ ಮೊದಲು ಸ್ಕಾಟ್ಲೆಂಡ್ ಪರ ಬ್ರಾಂಡನ್ ಮೆಕ್‌ಮುಲೆನ್ ಕೇವಲ 34 ಎಸೆತಗಳಲ್ಲಿ 60 ರನ್ ಸಿಡಿಸಿ ಮಿಂಚಿದ್ದರು. ಅವರ ಆಟದಲ್ಲಿ 2 ಬೌಂಡರಿ ಜೊತೆ 6 ಸಿಕ್ಸರ್‌ಗಳಿದ್ದವು. ಆರಂಭ ಆಟಗಾರ ಮುನ್ಸಿ (35, 23ಎ, 4x2, 6x3) ಮತ್ತು ಮೆಕ್‌ಮುಲೆನ್‌ ಎರಡನೇ ವಿಕೆಟ್‌ಗೆ ಬಿರುಸಿನ ಆಟವಾಡಿ 48 ಎಸೆತಗಳಲ್ಲಿ 89 ರನ್ ಸೇರಿಸಿದ್ದರು.

ನಾಯಕ ಬೇರಿಂಗ್ಟನ್‌ 31 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ತಂಡ 180 ರನ್ ತಲುಪಲು ನೆರವಾದರು. ಕೊನೆಯ ಐದು ಓವರುಗಳಲ್ಲಿ ಸ್ಕಾಟ್ಲೆಂಡ್ 42 ರನ್ ಬಾಚಿತು.

ಸ್ಕೋರುಗಳು: ಸ್ಕಾಟ್ಲೆಂಡ್‌: 20 ಓವರುಗಳಲ್ಲಿ 5 ವಿಕೆಟ್‌ಗೆ 180 (ಜಾರ್ಜ್ ಮುನ್ಸಿ 35, ಬ್ರಾಂಡನ್ ಮೆಕ್‌ಮುಲೆನ್ 60, ರಿಚಿ ಬೇರಿಂಗ್ಟನ್ ಔಟಾಗದೇ 42; ಆಸ್ಟನ್ ಅಗರ್ 39ಕ್ಕೆ1, ನಥಾನ್ ಎಲ್ಲಿಸ್‌ 34ಕ್ಕೆ1, ಗ್ಲೆನ್ ಮ್ಯಾಕ್ಸ್‌ವೆಲ್‌ 44ಕ್ಕೆ2, ಆ್ಯಡಂ ಜಂಪಾ 30ಕ್ಕೆ1); ಆಸ್ಟ್ರೇಲಿಯಾ: 19.4 ಓವರುಗಳಲ್ಲಿ 5 ವಿಕೆಟ್‌ಗೆ 186 (ಟ್ರಾವಿಸ್‌ ಹೆಡ್‌ 68, ಮಾರ್ಕಸ್‌ ಸ್ಟೊಯಿನಿಸ್ 59, ಟಿಮ್‌ ಡೇವಿಡ್‌ ಔಟಾಗದೇ 34; ಬ್ರಾಡ್‌ ವೀಲ್ 28ಕ್ಕೆ1, ಮಾರ್ಕ್‌ ವಾಟ್‌ 34ಕ್ಕೆ2, ಸಫ್ಯಾನ್ ಶರೀಫ್  42ಕ್ಕೆ2). ಪಂದ್ಯದ ಆಟಗಾರ: ಸ್ಟೊಯಿನಿಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT