ಸೋಮವಾರ, ಅಕ್ಟೋಬರ್ 21, 2019
25 °C
ಐಸಿಎಗೆ ಹಿರಿಯ ಕ್ರಿಕೆಟಿಗ ಸ್ಪರ್ಧೆ

ಬಿಸಿಸಿಐ ಚುನಾವಣೆ; ಕೀರ್ತಿ ಪ್ರಣಾಳಿಕೆ ಬಿಡುಗಡೆ

Published:
Updated:
Prajavani

ನವದೆಹಲಿ: ಬಿಸಿಸಿಐನ ಭಾರತ ಕ್ರಿಕೆಟಿಗರ ಸಂಘಟನೆ (ಐಸಿಎ) ಚುನಾವಣೆಗೆ ಸ್ಪರ್ಧಿಸಿರುವ ಕೀರ್ತಿ ಆಜಾದ್ ಅವರು ಭಾನುವಾರ 13 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ಧಾರೆ.

ಪ್ರಥಮ ದರ್ಜೆಯ ನಿವೃತ್ತ ಕ್ರಿಕೆಟಿಗರಿಗೆ ಪಿಂಚಣಿ, ಆರೋಗ್ಯ ವಿಮೆ ಮತ್ತು ಒಂದು ಬಾರಿ ಸಹಾಯನಿಧಿಗಳನ್ನು ನೀಡುವ ಭರವಸೆಗಳು ಅದರಲ್ಲಿ ಪ್ರಮುಖವಾಗಿವೆ.

ಸಂಘಟನೆಯ ಅಪೆಕ್ಸ್‌ ಕೌನ್ಸಿಲ್ ಸದಸ್ಯತ್ವಕ್ಕಾಗಿ ಅವರು ಸ್ಪರ್ಧಿಸಿದ್ಧಾರೆ. ಅವರಿಗೆ ಹಿರಿಯ ಕ್ರಿಕೆಟಿಗ ಅನ್ಷುಮನ್ ಗಾಯಕವಾಡ್, ಕನ್ನಡಿಗ ದೊಡ್ಡಗಣೇಶ್ ಮತ್ತು ರಾಕೇಶ್ ಧ್ರುವ ಅವರು ಪ್ರತಿಸ್ಪರ್ಧಿಗಳಾಗಿದ್ದಾರೆ. ಭಾರತ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿರುವ ಮಾಜಿ ಆಟಗಾರರು ಪ್ರತಿನಿಧಿಸುವ ಸಂಘಟನೆ ಇದಾಗಿದೆ.

ಧ್ರುವ ಅವರಿಗೆ ಸೌರಾಷ್ಟ್ರ ಮತ್ತು ಗುಜರಾತ್ ಕ್ರಿಕೆಟ್ ವಲಯಗಳ ಬೆಂಬಲ ಸಿಗುವ ನಿರೀಕ್ಷೆ ದಟ್ಟವಾಗಿದೆ. ದೆಹಲಿಯ ಆಜಾದ್ ಅವರು 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಆಡಿದ್ದರು.

‘ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ ಬಹಳಷ್ಟು ಆಟಗಾರರು ಆರ್ಥಿಕ ಮುಗ್ಗಟ್ಟಿನಲ್ಲಿದ್ದಾರೆ. ಅಂತಹವರಿಗೆ ನೆರವಿನ ಹಸ್ತ ಚಾಚುವುದು ನನ್ನಗುರಿ. ಮುಖ್ಯವಾಗಿ ಅವರ ಚಿಕಿತ್ಸೆ ಮತ್ತು ಆರೋಗ್ಯ ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಅದಕ್ಕಾಗಿ ವಿಮೆ ಅಗತ್ಯವಾಗಿದೆ. ಪ್ರಮುಖವಾಗಿ ಐದು ವರ್ಷಗಳ ಹಿಂದೆ ನಿವೃತ್ತರಾದವರಿಗೆ ಆದ್ಯತೆ ನೀಡಲಾಗುವುದು’ ಎಂದು  ಆಜಾದ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಕಣದಲ್ಲಿ ಕನ್ನಡಿಗರು  

ಬೆಂಗಳೂರು: ಬಿಸಿಸಿಐನ ಭಾರತ ಕ್ರಿಕೆಟಿಗರ ಸಂಘಟನೆ (ಐಸಿಎ) ಪ್ರತಿನಿಧಿಗಳ ಚುನಾವಣೆಯಲ್ಲಿ ಕರ್ನಾಟಕದ ದೊಡ್ಡಗಣೇಶ್ ಮತ್ತು ಮಹಿಳಾ ವಿಭಾಗದಲ್ಲಿ ಶಾಂತಾ ರಂಗಸ್ವಾಮಿ ಅವರು ಸ್ಪರ್ಧೆಯಲ್ಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಅಮೃತಾ ಪಿ ಶಿಂಧೆ, ಸಿಟಿಎಂ ಸುಗುಣಾ, ಮಾನಾ ಎಸ್   ಮತ್ತು ಶಾಂತಾ ರಂಗಸ್ವಾಮಿ ಇದ್ಧಾರೆ. ಇದೇ 11ರಂದು ಐಸಿಎ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)