ಬೆಂಗಳೂರು ಬ್ಲಾಸ್ಟರ್ಸ್‌ಗೆ ರೋಚಕ ಜಯ

7
ಅರ್ಷದೀಪ್ ಸಿಂಗ್ ಬ್ರಾರ್ ಸ್ಫೋಟಕ ಬ್ಯಾಟಿಂಗ್

ಬೆಂಗಳೂರು ಬ್ಲಾಸ್ಟರ್ಸ್‌ಗೆ ರೋಚಕ ಜಯ

Published:
Updated:
Deccan Herald

ಬೆಂಗಳೂರು: ಶುಕ್ರವಾರ ರಾತ್ರಿ ಹಲವು ಏರಿಳಿತಗಳನ್ನು ಕಂಡ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಆರು ರನ್‌ಗಳಿಂದ ಬಳ್ಳಾರಿ ಟಸ್ಕರ್ಸ್‌ ವಿರುದ್ಧ ರೋಚಕ ಜಯ ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ನಾಯಕತ್ವದ ಬೆಂಳೂರು ತಂಡವು  ಎರಡು ಪ್ರಮುಖ ಹಂತಗಳಲ್ಲಿ ಸೋಲಿನ ದವಡೆಯಿಂದ ಪಾರಾಗಿ ಗೆದ್ದಿತು. ಅದಕ್ಕೆ  ಕಾರಣವಾಗಿದ್ದು ಅರ್ಷದೀಪ್ ಸಿಂಗ್ ಬ್ರಾರ್ (68; 34ಎಸೆತ, 1 ಬೌಂಡರಿ, 8 ಸಿಕ್ಸರ್‌) ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಮನೋಜ್ ಭಾಂಡಗೆ (36ಕ್ಕೆ3) ಮತ್ತು ವಿ. ಕೌಶಿಕ್ (20ಕ್ಕೆ2) ಅವರ ಬೌಲಿಂಗ್. ಇದರಿಂದಾಗಿ ಟಸ್ಕರ್ಸ್‌ ತಂಡದ ಅಭಿನವ್ ಮನೋಹರ್ (61; 28ಎಸೆತ, 4ಬೌಂಡರಿ, 5ಸಿಕ್ಸರ್) ಅವರ ಅರ್ಧಶತಕ ವ್ಯರ್ಥವಾಯಿತು.

ಆರ್ಷದೀಪ್ ಸ್ಫೊಟಕ ಆಟ: ಟಾಸ್ ಗೆದ್ದ ಬಳ್ಳಾರಿ ಟಸ್ಕರ್ಸ್‌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಿ. ಪ್ರದೀಪ್ ಅವರು ಅಮೋಘ ಬೌಲಿಂಗ್ ಮೂಲಕ ಆರಂಭದಲ್ಲಿಯೇ ಪೆಟ್ಟು ನೀಡಿದರು. ಪ್ರಮುಖ ಬ್ಯಾಟ್ಸ್‌ಮನ್‌ಗಳು ಬೇಗನೆ ನಿರ್ಗಮಿಸಿದರು. ಇದರಿಂದಾಗಿ 67 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದು ಕೊಂಡ ಬೆಂಗಳೂರು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಬೀಸಾಟ ಆರಂಭಿಸಿದ ಅರ್ಷದೀಪ್ ಇನಿಂಗ್ಸ್‌ನ ದಿಕ್ಕು ಬದಲಿಸಿಬಿಟ್ಟರು.

ಮನೋಜ್–ಕೌಶಿಕ್ ಮಿಂಚು: ಬ್ಲಾಸ್ಟರ್ಸ್‌ ತಂಡದ ಮಧ್ಯಮವೇಗಿ ವಿ. ಕೌಶಿಕ್ (20ಕ್ಕೆ2) ಅವರು ಪಂದ್ಯದ ಕೊನೆಯ  ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿ ತಂಡದ ಸೋಲು ತಪ್ಪಿಸಿದರು. 20ನೇ ಓವರ್‌ನಲ್ಲಿ ತಂಡಕ್ಕೆ ಜಯಿಸಲು 12 ರನ್‌ಗಳ ಅವಶ್ಯಕತೆ ಇತ್ತು. ನಾಲ್ಕು ವಿಕೆಟ್‌ಗಳು ಬಾಕಿ ಇದ್ದವು.

ಓವರ್‌ನ ಎರಡನೇ ಎಸೆತವನ್ನು ಹೊಡೆದ ಪ್ರದೀಪ್ ಅವರು ಕೆ.ಬಿ. ಪವನ್‌ಗೆ ಕ್ಯಾಚ್ ಆದರು. ನಂತರದ ಎಸೆತದಲ್ಲಿ ಕೌಶಿಕ್ ಹಾಕಿದ ನೇರ ಎಸೆತವು ಸಿ.ಎ. ಕಾರ್ತಿಕ್ ಅವರನ್ನು ಬೀಟ್ ಮಾಡಿ ಲೆಗ್‌ಸ್ಟಂಪ್ ಹಾರಿಸಿತು. ನಂತರದ ನಾಲ್ಕು ಎಸೆತಗಳಲ್ಲಿ ಕೇವಲ ಮೂರು ರನ್ ನೀಡಿದರು.

ಇದಕ್ಕೂ ಮುನ್ನ ಬೆಂಗಳೂರು ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ್ದ ಅಭಿನವ್ ಮನೋಹರ್  ಅವರನ್ನು 19ನೇ ಓವರ್‌ನಲ್ಲಿ ಮನೋಜ್ ಔಟ್ ಮಾಡಿದ್ದರು. ಅದೇ ಓವರ್‌ನ ಎರಡನೇ ಎಸೆತದಲ್ಲಿ ಅಬ್ರಾರ್ ಖಾಜಿ ವಿಕೆಟ್‌ ಅನ್ನೂ ಮನೋಜ್ ಕಬಳಿಸಿದ್ದರು. ಟಸ್ಕರ್ಸ್‌ ತಂಡದ ನಾಯಕ ಸಿ.ಎಂ. ಗೌತಮ್ ಕೂಡ ಮನೋಜ್ ಹಾಕಿದ್ದ 13ನೇ ಓವರ್‌ನಲ್ಲಿ ಔಟಾಗಿದ್ದರು.

ವಿಭಿನ್ನ ಶೈಲಿಯ ಬೌಲಿಂಗ್‌ನಿಂದ ಗಮನ ಸೆಳೆದ ಭರತ್ ದೇವರಾಜ್ ಎರಡು ವಿಕೆಟ್ ಕಬಳಿಸಿದರು. ಅವರು ಆನಂದ್ ದೊಡ್ಡಮನಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದ ರೊಂದಿಗೆ ಬೆಂಗಳೂರು ತಂಡವು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಬೆಂಗಳೂರು ಬ್ಲಾಸ್ಟರ್ಸ್‌: 20  ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 167(ಎಂ. ವಿಶ್ವನಾಥನ್ 14, ಮನೋಜ್ ಭಾಂಡಗೆ 17, ಚೇತನ್ ವಿಲಿಯಂ 22, ಅರ್ಷದೀಪ್ ಸಿಂಗ್ ಬ್ರಾರ್ 67, ಭರತ್ ದೇವರಾಜ್ 19, ಸಂತೆಬೆನ್ನೂರು ಅಕ್ಷಯ್ 36ಕ್ಕೆ1, ಟಿ. ಪ್ರದೀಪ್ 24ಕ್ಕೆ3, ಮುತ್ತಣ್ಣ ನಾಯಕ 50ಕ್ಕೆ1, ಸಿ. ಕಾರ್ತಿಕ್ 25ಕ್ಕೆ1, ಅಬ್ರಾರ್ ಖಾಜಿ 26ಕ್ಕೆ1) ಬಳ್ಳಾರಿ ಟಸ್ಕರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 161 (ರೋಹನ್ ಕದಂ 31, ದೇವದತ್ತ ಪಡಿಕ್ಕಲ್ 19, ಅಭಿನವ್ ಮನೋಹರ್ 61, ಸಿ.ಎಂ. ಗೌತಮ್ 12, ಅಬ್ರಾರ್ ಖಾಜಿ 22, ವಿ. ಕೌಶಿಕ್ 20ಕ್ಕೆ2, ಅಭಿಷೇಕ್ ಭಟ್ 24ಕ್ಕೆ1, ಮನೋಜ್ ಭಾಂಡಗೆ 36ಕ್ಕೆ3, ಭರತ್ ದೇವರಾಜ್ 25ಕ್ಕೆ2)
ಫಲಿತಾಂಶ: ಬೆಂಗಳೂರು ಬ್ಲಾಸ್ಟರ್ಸ್‌ ತಂಡಕ್ಕೆ 6 ರನ್‌ಗಳ ಜಯ.

ಶನಿವಾರ ವಿಶ್ರಾಂತಿ; ಭಾನುವಾರದಿಂದ ಹುಬ್ಬಳ್ಳಿಯಲ್ಲಿ ಪಂದ್ಯಗಳು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !