ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ 2 ಟೆಸ್ಟ್‌ಗಳಿಗೆ ವಾರ್ನರ್‌ ಅಲಭ್ಯ

Last Updated 22 ಫೆಬ್ರುವರಿ 2023, 6:38 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್‌ ಡೇವಿಡ್‌ ವಾರ್ನರ್‌ ಅವರು ಬಾರ್ಡರ್‌–ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ನವದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅವರ ಮೊಣಕೈಗೆ ಗಾಯವಾಗಿತ್ತು. ಮೂಳೆಯಲ್ಲಿ ಬಿರುಕು ಮೂಡಿರುವುದರಿಂದ ಚೇತರಿಸಿಕೊಳ್ಳಲು ಕೆಲವು ದಿನಗಳ ವಿಶ್ರಾಂತಿಯ ಅಗತ್ಯವಿದ್ದು, ತವರಿಗೆ ಮರಳಿದ್ದಾರೆ.

ಟೆಸ್ಟ್ ಸರಣಿ ಬಳಿಕ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ವೇಳೆಗೆ ಅವರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಪ್ರಕಟಣೆ ತಿಳಿಸಿದೆ.

ಕೊನೆಯ ಎರಡು ಟೆಸ್ಟ್‌ ಪಂದ್ಯಗಳು ಕ್ರಮವಾಗಿ ಇಂದೋರ್‌ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ. ವಾರ್ನರ್‌ ಅನುಪಸ್ಥಿತಿಯಲ್ಲಿ ಮೂರನೇ ಟೆಸ್ಟ್‌ನಲ್ಲಿ ಟ್ರಾವಿಸ್‌ ಹೆಡ್‌ ಅವರು ಉಸ್ಮಾನ್‌ ಖ್ವಾಜಾ ಜತೆ ಇನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ.

ಟಿ20: ಇಂಗ್ಲೆಂಡ್‌ಗೆ ದಾಖಲೆ ಗೆಲುವು
ಕೇಪ್‌ಟೌನ್‌ (ರಾಯಿಟರ್ಸ್‌): ಇಂಗ್ಲೆಂಡ್‌ ತಂಡದವರು ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು 114 ರನ್‌ಗಳಿಂದ ಮಣಿಸಿದರು.

ಟಿ20 ವಿಶ್ವಕಪ್‌ನಲ್ಲಿ ತಂಡವೊಂದು ಗಳಿಸಿದ ಅತಿದೊಡ್ಡ ಗೆಲುವು ಇದು. 2020 ರಲ್ಲಿ ದಕ್ಷಿಣ ಆಫ್ರಿಕಾ ತಂಡ, ಥಾಯ್ಲೆಂಡ್‌ ವಿರುದ್ಧ ಸಾಧಿಸಿದ್ದ 113 ರನ್‌ ಗೆಲುವು ಇದುವರೆಗಿನ ದಾಖಲೆಯಾಗಿತ್ತು.

ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 213 ರನ್‌ ಗಳಿಸಿತು. ನಥಾಲಿ ಸಿವೆರ್‌ ಬ್ರಂಟ್‌ (ಅಜೇಯ 81, 40 ಎ., 4X12, 6X1) ಬಿರುಸಿನ ಆಟವಾಡಿದರು. ಪಾಕ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 99 ರನ್‌ ಕಲೆಹಾಕಿತು.

ವಿಶ್ವಕಪ್‌ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಪೇರಿಸಿದ ದಾಖಲೆಯನ್ನೂ ಇಂಗ್ಲೆಂಡ್‌ ತನ್ನದಾಗಿಸಿಕೊಂಡಿತು. ದಕ್ಷಿಣ ಆಫ್ರಿಕಾ ತಂಡದ ಹೆಸರಿನಲ್ಲಿದ್ದ ದಾಖಲೆ (195 ರನ್‌) ಮುರಿಯಿತು. ಇಂಗ್ಲೆಂಡ್‌ ತಂಡ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಅಥವಾ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಭಾರತ–ಆಸ್ಟ್ರೇಲಿಯಾ ಸೆಮಿಫೈನಲ್ ನಾಳೆ: ಕೇಪ್‌ಟೌನ್‌ನಲ್ಲಿ ಗುರುವಾರ ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ– ಆಸ್ಟ್ರೇಲಿಯಾ ತಂಡಗಳು ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT