ಜಯದ ಸಂಭ್ರಮದಲ್ಲಿ ಗಾಯದ ನೋವು ಮಾಯ

7
ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಆಸ್ಪತ್ರೆಯಿಂದ ಕ್ರೀಸ್‌ಗೆ ಬಂದು ಆಡಿದ ತಮೀಮ್ ಇಕ್ಬಾಲ್‌

ಜಯದ ಸಂಭ್ರಮದಲ್ಲಿ ಗಾಯದ ನೋವು ಮಾಯ

Published:
Updated:
Deccan Herald

ದುಬೈ: ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಂದ ತಮೀಮ್‌ ಇಕ್ಬಾಲ್‌ಗೆ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಗಾಯ; ಕಣದಿಂದ ನಿವೃತ್ತಿ. 47ನೇ ಓವರ್‌ನ ಕೊನೆಯ ಎಸೆತದಲ್ಲಿ ಕ್ರೀಸ್‌ಗೆ ವಾಪಸ್‌; ಒಂದು ಕೈಯಲ್ಲಿ ಬ್ಯಾಟಿಂಗ್‌!

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕಂಡ ಈ ಅಪರೂಪದ ನೋಟ ಕ್ರಿಕೆಟ್ ಲೋಕದ ಮೆಚ್ಚುಗೆಗೆ ಕಾರಣವಾಗಿದೆ. ಕೊನೆಯ ಮೂರು ಓವರ್‌ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ, ಶತಕವೀರ ಮುಷ್ಫಿಕುರ್ ರಹೀಮ್ ಜೊತೆ 32 ರನ್‌ಗಳನ್ನು ಸೇರಿಸಿದ ತಮೀಮ್‌ ಅವರ ಧೈರ್ಯ ಮತ್ತು ಅರ್ಪಣಾ ಭಾವವನ್ನು ಕ್ರೀಡಾಪ್ರಿಯರು ಕೊಂಡಾಡಿದ್ದಾರೆ. ತಂಡ ಜಯ ಗಳಿಸಿದ ಸಂಭ್ರಮದಲ್ಲಿ ತಮೀಮ್‌, ಗಾಯದ ನೋವನ್ನು ಮರೆತಿದ್ದಾರೆ.

ಅದು ಬಾಂಗ್ಲಾದೇಶ ಇನಿಂಗ್ಸ್‌ನ ಎರಡನೇ ಓವರ್‌. ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಉರುಳಿದ್ದ ತಂಡಕ್ಕೆ ಸುರಂಗ ಲಕ್ಮಲ್‌ ಮತ್ತೊಂದು ಪೆಟ್ಟು ನೀಡಿದರು. ಅವರು ಹಾಕಿದ ಆರನೇ ಎಸೆತದಲ್ಲಿ ಪುಲ್ ಮಾಡಲು ಶ್ರಮಿಸಿದ ತಮೀಮ್‌ ಅವರ ಎಡಗೈ ಮಣಿಗಂಟಿಗೆ ಚೆಂಡು ಬಡಿಯಿತು. ತೀವ್ರ ನೋವಿನಿಂದ ಬಳಲಿದ ಅವರಿಗೆ ಅಂಗಣದಲ್ಲೇ ಪ್ರಥಮ ಚಿಕಿತ್ಸೆ ನೀಡಿದರೂ ಪ್ರಯೋಜನ ಆಗಲಿಲ್ಲ. ಆದ್ದರಿಂದ ಆಸ್ಪತ್ರೆಗೆ ಸೇರಿಸಲಾಯಿತು.

ಕೈಗೆ ಬ್ಯಾಂಡೇಜ್‌ ಸುತ್ತಿಕೊಂಡು ಡ್ರೆಸಿಂಗ್ ಕೊಠಡಿಗೆ ವಾಪಸಾದ ಅವರು 47ನೇ ಓವರ್‌ನಲ್ಲಿ ಸುರಂಗ ಅವರ ಎಸೆತದಲ್ಲಿ ಮುಸ್ತಫಿಜುರ್ ರಹಮಾನ್ ಔಟಾದಾಗ 11ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದರು. ವಾಪಸಾದ ನಂತರ ತಮೀಮ್‌ ಒಂದು ಎಸೆತವನ್ನು ಮಾತ್ರ ಎದುರಿಸಿದ್ದರು. 49.3 ಓವರ್‌ಗಳಲ್ಲಿ ತಂಡ ಆಲೌಟಾಯಿತು. ಅಷ್ಟರ ವರೆಗೆ ಸ್ಟ್ರೈಕ್ ಅನ್ನು ತಮ್ಮಲ್ಲೇ ಉಳಿಸಿಕೊಂಡು ಮುಷ್ಫಿಕುರ್ ರಹೀಮ್ ಜಾಣ್ಮೆ ಮೆರೆದರು. 261 ರನ್‌ ಕಲೆ ಹಾಕಿದ್ದ ಬಾಂಗ್ಲಾದೇಶ ಎದುರಾಳಿಗಳನ್ನು 124 ರನ್‌ಗಳಿಗೆ ಆಲೌಟ್ ಮಾಡಿ 137 ರನ್‌ಗಳ ಭರ್ಜರಿ ಜಯ ಸಾಧಿಸಿತು.

‘ತಂಡ ಆರಂಭದಲ್ಲಿ ಆತಂಕದಲ್ಲಿತ್ತು. ಆದರೆ ನಂತರ ಸುಧಾರಿಸಿಕೊಂಡಿತು. ಕೊನೆಯ ಓವರ್‌ಗಳಲ್ಲಿ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಲು ತಮೀಮ್ ಮುಂದಾದರು. ಇದು ಶ್ಲಾಘನೀಯ’ ಎಂದು ನಾಯಕ ಮಷ್ರಫೆ ಮೊರ್ತಜಾ ಹೇಳಿದರು.

‘ಮುಷ್ಫಿಕುರ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತ್ಯಪೂರ್ವವಾದ ಇನಿಂಗ್ಸ್ ಆಡಿದ್ದಾರೆ. ಆರಂಭದಿಂದ ಕೊನೆಯ ವರೆಗೆ ಅವರು ಬ್ಯಾಟಿಂಗ್ ಮಾಡಿದ ರೀತಿಯನ್ನು ಮೆಚ್ಚಲೇಬೇಕು’ ಎಂದು ಅವರು ಹೇಳಿದರು.

ಎದುರಾಳಿ ನಾಯಕನಿಂದ ಮೆಚ್ಚುಗೆ: ಶ್ರೀಲಂಕಾ ತಂಡದ ನಾಯಕ ಏಂಜಲೊ ಮ್ಯಾಥ್ಯೂಸ್ ಕೂಡ ತಮೀಮ್ ಇಕ್ಬಾಲ್ ಅವರನ್ನು ಕೊಂಡಾಡಿದರು. ನೋವನ್ನು ಮರೆದು ಆಡಿದ ತಮೀಮ್‌ ಅವರಿಂದಾಗಿ ಬಾಂಗ್ಲಾದೇಶ ಸವಾಲಿನ ಮೊತ್ತ ಪೇರಿಸಿತು. ನಮ್ಮ ತಂಡದ ಮೇಲೆ ಒತ್ತಡ ಹೇರಲು ಆ ಮೊತ್ತ ನೆರವಾಯಿತು’ ಎಂದು ಮ್ಯಾಥ್ಯೂಸ್ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !