ಒಂದೇ ಓವರ್‌ನಲ್ಲಿ 43 ರನ್‌ ಕಲೆ ಹಾಕಿದ ನ್ಯೂಜಿಲೆಂಡ್‌ ಜೋಡಿ

7

ಒಂದೇ ಓವರ್‌ನಲ್ಲಿ 43 ರನ್‌ ಕಲೆ ಹಾಕಿದ ನ್ಯೂಜಿಲೆಂಡ್‌ ಜೋಡಿ

Published:
Updated:
Deccan Herald

ಬೆಂಗಳೂರು: ಎಂಟು ಎಸೆತಗಳಲ್ಲಿ 43 ರನ್‌ ಸೇರಿಸಿದ ನ್ಯೂಜಿಲೆಂಡ್‌ನ ಜೋ ಕಾರ್ಟರ್‌ ಮತ್ತು ಬ್ರೆಟ್‌ ಹ್ಯಾಂಪ್ಟನ್‌ ಜೋಡಿ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಬುಧವಾರ ವಿಶ್ವ ದಾಖಲೆ ಬರೆದರು. ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್‌ನಲ್ಲಿ ನಡೆದ ಫೋರ್ಡ್ ಟ್ರೋಫಿ ಟೂರ್ನಿಯಲ್ಲಿ ನಾರ್ತರ್ನ್‌ ನೈಟ್ಸ್‌ ತಂಡದ ಪರವಾಗಿ ಆಡಿದ ಇವರಿಬ್ಬರು ಸೆಂಟ್ರಲ್‌ ಡಿಸ್ಟ್ರಿಕ್ಟ್ ವಿರುದ್ಧ ಸಾಧನೆ ಮಾಡಿದರು.

ವಿಲಿಯಮ್ ಲೂಡಿಕ್ ಹಾಕಿದ ಓವರ್‌ನಲ್ಲಿ ನೋಬಾಲ್‌ ಸೇರಿದಂತೆ ಎಂಟು ಎಸೆತಗಳು ಇದ್ದವು. ಮೊದಲ ಎಸೆತದಲ್ಲಿ ಬ್ರೆಟ್‌ ಬೌಂಡರಿ ಗಳಿಸಿದರು. ಮುಂದಿನ ಎರಡು ಎಸೆತಗಳು ನೋಬಾಲ್ ಆಗಿದ್ದವು. ಇವುಗಳಲ್ಲಿ ಸಿಕ್ಸರ್ ಬಂತು. ಫ್ರೀ ಹಿಟ್‌ನಲ್ಲೂ ಚೆಂಡು ಸಿಕ್ಸರ್‌ಗೆ ಸಾಗಿತು. ಮುಂದಿನ ಎಸೆತವನ್ನೂ ಅವರು ಸಿಕ್ಸರ್‌ಗೆ ಅಟ್ಟಿದರು. ನಂತರ ಒಂದು ರನ್‌; ಸ್ಟ್ರೈಕ್‌ ಕಾರ್ಟರ್‌ಗೆ. ಕೊನೆಯ ಮೂರು ಎಸೆತಗಳನ್ನು ಕಾರ್ಟರ್‌ ಗ್ಯಾಲರಿಗೆ ಅಟ್ಟಿದರು. ಓವರ್ ಮುಗಿದಾಗ ವಿವರ ಹೀಗಿತ್ತು: 4,6 (ನೋಬಾಲ್‌), 6 (ನೋಬಾಲ್‌), 6, 1,6,6,6.

ಜಿಂಬಾಬ್ವೆಯ ಎಲ್ಟನ್ ಚಿಗುಂಬುರಾ, ಏಳು ಎಸೆತಗಳಲ್ಲಿ (ಒಂದು ನೋಬಾಲ್‌) ಗಳಿಸಿದ 39 ರನ್‌ಗಳು ಲಿಸ್ಟ್‌ ‘ಎ’ ಕ್ರಿಕೆಟ್‌ನ ಓವರೊಂದರಲ್ಲಿ ಗಳಿಸಿದ ಅತಿ ಹೆಚ್ಚು ರನ್‌ಗಳ ದಾಖಲೆಯಾಗಿತ್ತು. 2013ರಲ್ಲಿ ನಡೆದಿದ್ದ ಢಾಕಾ ಪ್ರೀಮಿಯರ್‌ ಲೀಗ್‌ನಲ್ಲಿ ಬಾಂಗ್ಲಾದೇಶದ ಅಲವುದ್ದೀನ್ ಬಾಬು ಅವರ ಓವರ್‌ನಲ್ಲಿ ಅವರು ಈ ಸಾಧನೆ ಮಾಡಿದ್ದರು.

ಕಾರ್ಟರ್ ಮತ್ತು ಬ್ರೆಟ್‌ ಆರನೇ ವಿಕೆಟ್‌ಗೆ 178 ರನ್‌ ಸೇರಿಸಿದರು. ಬ್ರೆಟ್‌ ಐದು ರನ್‌ಗಳಿಂದ ಶತಕ ತಪ್ಪಿಸಿಕೊಂಡರೆ, ಕಾರ್ಟರ್ ಮೂರಂಕಿ ಮೊತ್ತ ಗಳಿಸಿ ಸಂಭ್ರಮಿಸಿದರು. ಪಂದ್ಯದಲ್ಲಿ ಡಿಸ್ಟ್ರಿಕ್ಟ್‌ ತಂಡ 25 ರನ್‌ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರು

ನಾರ್ತರ್ನ್‌ ನೈಟ್ಸ್‌: 50 ಓವರ್‌ಗಳಲ್ಲಿ 7ಕ್ಕೆ 313 (ಆ್ಯಂಟನ್ ಡೆವಿಚ್‌ 50, ಜೋ ಕಾರ್ಟರ್‌ 102, ಬ್ರೆಟ್‌ ಹ್ಯಾಂಪ್ಟನ್‌ 95; ಡಗ್ ಬ್ರೇಸ್‌ವೆಲ್‌ 64ಕ್ಕೆ3, ನವೀನ್ ಪಟೇಲ್‌ 12ಕ್ಕೆ2, ವಿಲಿಯಮ್ ಲೂಡಿಕ್‌ 85ಕ್ಕೆ1)

ಸೆಂಟ್ರಲ್‌ ಡಿಸ್ಟ್ರಿಕ್ಟ್: 50 ಓವರ್‌ಗಳಲ್ಲಿ 9ಕ್ಕೆ 288 (ಗ್ರೆಗ್‌ ಹೇ 46, ಡೀನ್‌ ಫಾಕ್ಸ್ ಕ್ರಾಫ್ಟ್‌ 120, ಜೋಶ್ ಕ್ಲಾಕ್‌ಸನ್‌ 43, ಫೆಲಿಕ್ಸ್ ಮರೆ 35; ಬ್ರೆಟ್ ರ‍್ಯಾಂಡೆಲ್ 53ಕ್ಕೆ3, ಡ್ಯಾರಿಲ್ ಮಿಶೆಲ್‌ 51ಕ್ಕೆ3).

Tags: 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !