ದುಬೈ: ಎರಡು ತಿಂಗಳ ಅಮಾನತಿನ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಅನ್ನು ಅಂತರರಾಷ್ಟ್ರೀಯ ಕಿಕ್ರೆಟ್ ಕೌನ್ಸಿಲ್ (ಐಸಿಸಿ) ಸದಸ್ಯರಾಗಿ ಮರುಸ್ಥಾಪಿಸಲಾಗಿದೆ ಎಂದು ಐಸಿಸಿ ಭಾನುವಾರ ತಿಳಿಸಿದೆ.
ಹೋದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ತಂಡದ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರೀಡಾ ಸಚಿವಾಲಯವು ಎಸ್‌ಎಲ್‌ಸಿ ಮಂಡಳಿಯನ್ನು ವಜಾಗೊಳಿಸಿ, ಮಧ್ಯಂತರ ಸಮಿತಿಯನ್ನು ನೇಮಿಸಿತ್ತು.
ಕರ್ತವ್ಯ ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ತಡೆಯಲು ವಿಫಲವಾಗಿದೆ ಎಂಬ ಕಾರಣಕ್ಕೆ ಐಸಿಸಿ ಆ ದೇಶದ ಕ್ರಿಕೆಟ್ ಮಂಡಳಿಯನ್ನು ನವೆಂಬರ್ 10ರಂದು ಅಮಾನತ್ತುಗೊಳಿಸಿತ್ತು.
ಅಮಾನತು ಆದೇಶದ ವಿರುದ್ಧ ಎಸ್ಎಲ್‌ಸಿ ನವೆಂಬರ್ 21 ರಂದು ಐಸಿಸಿಗೆ ಮೇಲ್ಮನವಿ ಸಲ್ಲಿಸಿತು.
‘ಅಮಾನತುಗೊಂಡಾಗಿನಿಂದ (ಐಸಿಸಿ) ಮಂಡಳಿಯು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಈಗ ಎಸ್ಎಲ್‌ಸಿ ಸದಸ್ಯತ್ವದ ನಿಯಮಗಳನ್ನು ಉಲ್ಲಂಘಿಸುವುದಿಲ್ಲವೆಂಬ ತೃಪ್ತಿ ಇದೆ’ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ