ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋಬಲ ಹೆಚ್ಚಿಸಿದ ಪಿಂಕ್‌ ಮತಗಟ್ಟೆಗಳು

ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದ ‘ಸಖಿ’
Last Updated 13 ಮೇ 2018, 6:51 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆ 9 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ತೆರೆದ ‘ಸಖಿ’ ಪಿಂಕ್‌ ಮತಗಟ್ಟೆಗಳು ಮಹಿಳೆಯರ ಉತ್ಸಾಹವನ್ನು ಇಮ್ಮಡಿಗೊಳಿಸಿದವು.

ಮಹಿಳಾ ಮತದಾರರ ಹಿಂಜರಿಕೆಯನ್ನು ದೂರ ಮಾಡಿ, ಮತಗಟ್ಟೆಗೆ ಕರೆತರುವಲ್ಲಿ ಈ ಪ್ರಯೋಗ ಯಶಸ್ವಿಯಾಯಿತು. ಪಿಂಕ್‌ ದಿರಿಸಿನಲ್ಲೇ ಇದ್ದ ಮತಗಟ್ಟೆ ಸಿಬ್ಬಂದಿ ಆತ್ಮೀಯತೆಯಿಂದ ಬರಮಾಡಿಕೊಂಡರು.

ಸೇಡಂ ಕ್ಷೇತ್ರದ ಪಿಂಕ್‌ ಮತಗಟ್ಟೆ–109ರ ಅಲಂಕಾರ ಸೊಗಸಾಗಿತ್ತು. ಅಗಲವಾದ ಬಣ್ಣದ ಶಾಮಿಯಾನ, ಮುಂಬಾಗಿಲಲ್ಲಿ ಆಚೀಚೆ ಇಟ್ಟಿದ್ದ ಚೆಲುವೆಯರ ಕಲಾಕೃತಿಗಳು, ಒಳಾವರಣದಲ್ಲಿ ತೂಗುಹಾಕಿದ್ದ ಅಲಂಕಾರಿಕ ಸಾಮಗ್ರಿಗಳು, ಹೂಕುಂಡಗಳು ಗಮನ ಸೆಳೆದವು. ಶಂಖದಿಂದ ನೀರನ್ನು ಸುರಿಯುವ ಮಾದರಿಯ ಈ ಸುಂದರಿಯರು ಮತದಾರರನ್ನು ಬರಸೆಳೆದರು. ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಕುರ್ಚಿ, ತಾಯಂದಿರ ಜತೆಗೆ ಬರುವ ಮಕ್ಕಳಿಗೆ ಆಟಿಕೆ ಸಾಮಾನುಗಳನ್ನೂ ಇಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಬೆಳಿಗ್ಗೆ 11ರ ಹೊತ್ತಿಗೆ ಇಲ್ಲಿ ಶೇ 43 ರಷ್ಟು ಮತದಾನವಾಗಿತ್ತು. ಅವರಲ್ಲಿ 295 ಮಹಿಳೆಯರು, 272 ಪುರುಷರು ಇದ್ದರು.

ಚಿತ್ತಾಪುರ ಕ್ಷೇತ್ರದ ಪಿಂಕ್‌ ಮತಗಟ್ಟೆ– 69ರಲ್ಲಿ ಬೆಳಿಗ್ಗೆ 11ರ ಹೊತ್ತಿಗೆ 191 ವನಿತೆಯರು ಮತದಾನ ಮಾಡಿದ್ದರೆ; ಪುರುಷರ ಸಂಖ್ಯೆ 151 ಮಾತ್ರ. ಮತಗಟ್ಟೆ ಮುಂದೆ ಮಹಿಳೆಯರು ಸಾಲುಗಟ್ಟಿ ನಿಂತಿದ್ದರು.

**
ಕಳೆದ ಬಾರಿ ಚುನಾವಣೆಗಿಂತ ಈ ಬಾರಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಪಿಂಕ್‌ ಮಾದರಿ ಮತಗಟ್ಟೆಗಳು ಮಹಿಳೆಯರ ಹಿಂಜರಿಕೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿವೆ
– ನಾಗಜ್ಯೋತಿ, ಮತಗಟ್ಟೆ ಅಧಿಕಾರಿ, ಚಿತ್ತಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT