ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನನ್ನ ಜೀವನದ ಕರಾಳ ದಿನ: ಮಿಥಾಲಿ ರಾಜ್ ಟ್ವೀಟ್

Last Updated 29 ನವೆಂಬರ್ 2018, 11:12 IST
ಅಕ್ಷರ ಗಾತ್ರ

ನವದೆಹಲಿ: ‘ಇದು ನನ್ನ ಜೀವನದ ಕರಾಳ ದಿನವಾಗಿದೆ’ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಮಿಥಾಲಿ ರಾಜ್ ಹೇಳಿದ್ದಾರೆ.

ಈಚೆಗೆ ವೆಸ್ಟ್‌ ಇಂಡೀಸ್‌ನಲ್ಲಿ ನಡೆದಿದ್ದ ಮಹಿಳಾ ಟ್ವೆಂಟಿ–20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮಿಥಾಲಿಯವರನ್ನು ತಂಡದಿಂದ ಕೈಬಿಡಲಾಗಿತ್ತು. ಪಂದ್ಯದಲ್ಲಿ ತಂಡವು ಸೋತಿತ್ತು. ಅದರ ನಂತರ ಮಿಥಾಲಿ ಅವರನ್ನು ಕೈಬಿಟ್ಟ ಕುರಿತ ವಿವಾದ ಭುಗಿಲೆದ್ದಿದೆ.

ಈ ಕುರಿತು ಬುಧವಾರ ಬಿಸಿಸಿಐ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದ್ದ ‌ರಮೇಶ್ ಪೊವಾರ್, ‘ಮಿಥಾಲಿಯವರು ತಂಡದಲ್ಲಿ ಪ್ರತ್ಯೇಕವಾಗಿ ಇರುತ್ತಿದ್ದರು. ಅವರು ಹಠಮಾರಿ ಧೋರಣೆ ತೋರುತ್ತಿದ್ದರು. ಆದ್ದರಿಂದ ಅವರನ್ನು ಸಂಭಾಳಿಸುವುದು ಕಷ್ಟವಾಗುತ್ತಿತ್ತು’ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮಿಥಾಲಿ ಗುರುವಾರ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಈ ಪ್ರಕರಣವು ಈಗ ಮತ್ತಷ್ಟು ತಾರಕಕ್ಕೇರಿದೆ.

‘ಪೊವಾರ್ ಮಾಡಿರುವ ಆರೋಪಗಳಿಂದಾಗಿ ನನಗೆ ತೀವ್ರ ದುಃಖವಾಗಿದೆ. ಕ್ರಿಕೆಟ್ ಮತ್ತು ದೇಶದ ಬಗ್ಗೆ 20 ವರ್ಷಗಳಿಂದ ನಾನು ಬದ್ಧವಾಗಿದ್ದೇನೆ. ನನ್ನ ಪರಿಶ್ರಮ, ಬದ್ಧತೆ ಮತ್ತು ಕಾಣಿಕೆಗಳು ಈಗ ಮಣ್ಣುಪಾಲಾಗಿವೆ. ನನ್ನ ಜೀವನದ ಅತ್ಯಂತ ಕೆಟ್ಟ ದಿನ ಇದಾಗಿದೆ. ದೇವರು ಶಕ್ತಿ ನೀಡಲಿ’ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಸಿಒಎ ಸದಸ್ಯೆ ಡಯಾನಾ ಎಡುಲ್ಜಿಯವರು ನೀಡಿದ್ದ ಹೇಳಿಕೆ ಖಂಡಿಸಿ ಮತ್ತು ತಂಡದ ಮುಖ್ಯ ಕೋಚ್ ರಮೇಶ್ ಪೊವಾರ್ ಅವರ ಧೋರಣೆಯ ಬಗ್ಗೆ ಬಿಸಿಸಿಐ ಸಿಇಒಗೆ ಮಿಥಾಲಿ ಪತ್ರ ಬರೆದಿದ್ದರು. ಅದರ ನಂತರ ಪೊವಾರ್ ರ ವಿಚಾರಣೆ ನಡೆಸಲಾಗಿತ್ತು.

‘ಮಿಥಾಲಿಯ ವರ್ತನೆಯಿಂದ ತೀವ್ರ ಬೇಸರವಾಗಿದೆ. ಮಿಥಾಲಿಯಿಂದ ದೇಶ ಮುಖ್ಯ. ಆದರೆ ಅವರು ತಾವೇ ಮುಖ್ಯ ಎನ್ನುವಂತೆ ವರ್ತಿಸುತ್ತಿದ್ದಾರೆ. ಬಹಳಷ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರು ಬ್ಲ್ಯಾಕ್‌ಮೇಲ್ ಮಾಡುವುದನ್ನು ನಿಲ್ಲಿಸಲಿ. ಕೋಚ್‌ಗಳು ಮೇಲೆ ಒತ್ತಡ ಹಾಕುವ ತಂತ್ರಗಳನ್ನು ಬಿಡಲಿ’ ಎಂದೂ ಪೊವಾರ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದರು.

ಪೊವಾರ್ ಅವರ ಕಾರ್ಯಾವಧಿಯು ಶುಕ್ರವಾರ ಕೊನೆಗೊಳ್ಳಲಿದೆ. ಕೋಚ್ ನೇಮಕಕ್ಕಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಲಿದೆ.ಆ ಸಂದರ್ಭದಲ್ಲಿಯೂ ಪೊವಾರ್ ಅರ್ಜಿ ಹಾಕಿ ತಮ್ಮ ಮರುಆಯ್ಕೆಗೆ ಪ್ರಯತ್ನಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT