ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 3rd T20 | ಭಾರತಕ್ಕೆ ಸರಣಿ; ಕೊನೆ ಪಂದ್ಯದಲ್ಲಿ ಇಂಗ್ಲೆಂಡ್ ಮೇಲುಗೈ

ಸೂರ್ಯ ಶತಕ
Last Updated 10 ಜುಲೈ 2022, 18:09 IST
ಅಕ್ಷರ ಗಾತ್ರ

ನಾಟಿಂಗ್‌ಹ್ಯಾಮ್: ಸೂರ್ಯಕುಮಾರ್ ಯಾದವ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ಆದರೂ ಭಾರತ ತಂಡಕ್ಕೆ ಇಂಗ್ಲೆಂಡ್ ಎದುರು ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.

ಭಾನುವಾರ ಟ್ರೆಂಟ್‌ ಬ್ರಿಜ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮಲಾನ್ (77; 39ಎ, 4X6, 6X5) ಮತ್ತು ಲಿಯಾಮ್ (ಔಟಾಗದೆ 42; 29ಎ, 6X4) ಜೊತೆಯಾಟದ ಬಲದಿಂದ ಇಂಗ್ಲೆಂಡ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 215 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 198 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಆತಿಥೇಯ ತಂಡವು 17 ರನ್‌ಗಳಿಂದ ಜಯಿಸಿತು. ಭಾರತವು 2–1ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.

ಮುಂಬೈಕರ್ ಸೂರ್ಯಕುಮಾರ್ ಯಾದವ್ (117; 55ಎಸೆತ, 4X14, 6X6) ಏಕಾಂಗಿ ಹೋರಾಟದಿಂದಾಗಿ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಆದರೆ, ಅಗ್ರಕ್ರಮಾಂಕದ ಮತ್ತು ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್‌ಗಳಿಗೆ ಇಂಗ್ಲೆಂಡ್‌ನ ರೀಸ್ ಟಾಪ್ಲಿ (22ಕ್ಕೆ3) ಹಾಗೂ ಡೇವಿಡ್ ವಿಲಿ (40ಕ್ಕೆ2) ಕಡಿವಾಣ ಹಾಕಿದರು.

ಈ ಪಂದ್ಯದಲ್ಲಿಯೂ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ದೊಡ್ಡ ಮೊತ್ತ ಬೆನ್ನಟ್ಟಿದ ಭಾರತ ತಂಡದ ಆರಂಭಿಕ ಜೋಡಿ ರೋಹಿತ್ ಮತ್ತು ರಿಷಭ್ ಅಗ್ಗದ ಮೊತ್ತಕ್ಕೆ ವಿಕೆಟ್ ಚೆಲ್ಲಿದರು. ವಿರಾಟ್ ಕೊಹ್ಲಿಯ ವಿಫಲಯಾತ್ರೆ ಮುಂದುವರಿಯಿತು. ತಂಡವು 31 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ಹೊತ್ತಿನಲ್ಲಿ ಸೂರ್ಯ ಮಾತ್ರ ಪ್ರಖರವಾಗಿ ಬೆಳಗಿದರು. ಎಲ್ಲ ಬೌಲರ್‌ಗಳಿಗೂ ಬಿಸಿ ಮುಟ್ಟಿಸಿದರು. ಶ್ರೇಯಸ್ ಅಯ್ಯರ್ ಜೊತೆಗೆ ನಾಲ್ಕನೇ ವಿಕೆಟ್‌ಗೆ 119 ರನ್‌ ಸೇರಿಸಿದರು. ಅದರಲ್ಲಿ ಶ್ರೇಯಸ್ ಕಾಣಿಕೆ 28 ರನ್‌ಗಳು ಮಾತ್ರ. ಸೂರ್ಯ 48 ಎಸೆತಗಳಲ್ಲಿ ಶತಕದ ಗಡಿ ತಲುಪಿದರು.

ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಮಿಂಚಿದ್ದ ಭುವನೇಶ್ವರ್ ಕುಮಾರ್‌ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ವಿಶ್ರಾಂತಿ ನೀಡಲಾಯಿತು. ಅವರ ಬದಲಿಗೆ ಆವೇಶ್ ಖಾನ್ ಮತ್ತು ರವಿ ಬಿಷ್ಣೋಯಿ ಅವಕಾಶ ಪಡೆದರು. ಆವೇಶ್ ಮತ್ತು ಉಮ್ರಾನ್ ಉತ್ತಮ ಬೌಲಿಂಗ್‌ನಿಂದಾಗಿ ಇಂಗ್ಲೆಂಡ್ ತಂಡವು 84 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ,ಈ ಹಂತದಲ್ಲಿ ಜೊತೆಗೂಡಿದ ಮಲಾನ್ ಮತ್ತು ಲಿಯಾಮ್ ಇನಿಂಗ್ಸ್‌ ರೂಪವನ್ನೇ ಬದಲಿಸಿಬಿಟ್ಟರು.

ಹರ್ಷಲ್ ಪಟೇಲ್ ತಾವೇ ಹಾಕಿದ 6ನೇ ಓವರ್‌ನಲ್ಲಿ ಮಲಾನ್ ಕ್ಯಾಚ್‌ ಪಡೆಯುವಲ್ಲಿ ವಿಫಲರಾಗಿ ಜೀವದಾನ ನೀಡಿದರು. ಇದು ಇಂಗ್ಲೆಂಡ್‌ಗೆ ವರ ದಾನವಾಯಿತು. ಹರ್ಷಲ್ ಹಾಕಿದ 19ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಲಿವಿಂಗ್‌ಸ್ಟೋನ್ ಕ್ಯಾಚ್ ಕೈಚೆಲ್ಲಿದರು.

ಮಲಾನ್ ಅವರು ಉಮ್ರಾನ್ ವೇಗದ ಮತ್ತು ಜಡೇಜಾ ಹಾಕಿದ ನಿಧಾನಗತಿಯ ಎಸೆತಗಳನ್ನೂ ನಿರಾಯಾಸವಾಗಿ ಬೌಂಡರಿಗೆರೆ ದಾಟಿ ಸಿದರು. ಇನ್ನೊಂದೆಡೆ ಲಿಯಾಮ್ ಕೂಡ ಚೆಂಡನ್ನು ಸಿಕ್ಸರ್‌ಗೆತ್ತುವಲ್ಲಿ ನಿರತರಾದರು. ಇವರಿಬ್ಬರೂ 4ನೇ ವಿಕೆಟ್ ಜೊತೆಯಾಟದಲ್ಲಿ 84 ರನ್‌ ಸೇರಿಸಿದರು. 17ನೇ ಓವರ್‌ನಲ್ಲಿ ರವಿ ಸ್ಪಿನ್‌ಗೆ ಮಲಾನ್ ಔಟಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT