ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

WPL 2024 | ಅಗ್ರಸ್ಥಾನದ ಮೇಲೆ ಕಣ್ಣಿಟ್ಟ RCB; ಖಾತೆ ತೆರೆಯುವತ್ತ ಜೈಂಟ್ಸ್ ಚಿತ್ತ

Published 6 ಮಾರ್ಚ್ 2024, 14:30 IST
Last Updated 6 ಮಾರ್ಚ್ 2024, 14:30 IST
ಅಕ್ಷರ ಗಾತ್ರ

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಟಾಸ್‌ ಗೆದ್ದಿರುವ ಗುಜರಾತ್ ಜೈಂಟ್ಸ್‌ (ಜಿಜಿ) ಬ್ಯಾಟಿಂಗ್‌ ಆಯ್ದುಕೊಂಡಿದೆ.

ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಜೈಂಟ್ಸ್‌ ಪರ ಕ್ರೀಸ್‌ಗಿಳಿದಿರುವ ಲೌರಾ ವೊಲ್ವಾರ್ಡ್ಟ್‌ ಹಾಗೂ ನಾಯಕಿ ಬೆತ್‌ ಮೂನಿ ಉತ್ತಮ ಆರಂಭ ಒದಗಿಸಿದ್ದಾರೆ.

6 ಓವರ್‌ಗಳ ಅಂತ್ಯಕ್ಕೆ ತಂಡದ ಮೊತ್ತ ವಿಕೆಟ್‌ ನಷ್ಟವಿಲ್ಲದೆ 59 ರನ್ ಆಗಿದೆ. ಲೌರಾ 22 ಎಸೆತಗಳಲ್ಲಿ 32 ರನ್ ಬಾರಿಸಿದರೆ, ಮೂನಿ 14 ಎಸೆತಗಳಲ್ಲಿ 19 ರನ್ ಗಳಿಸಿದ್ದಾರೆ.

ಅಗ್ರಸ್ಥಾನದ ಮೇಲೆ ಆರ್‌ಸಿಬಿ ಕಣ್ಣು
ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ, ಆಡಿರುವ 5 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ, ಈ ಪಂದ್ಯ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ.

ಆದರೆ, ಆಸ್ಟ್ರೇಲಿಯಾದ ಬೆತ್‌ ಮೂನಿ ಬಳಗದ ಸ್ಥಿತಿ ಭಿನ್ನವಾಗಿದೆ. ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಮುಗ್ಗರಿಸಿರುವ ಈ ತಂಡ, ಖಾತೆ ತೆರೆಯಲು ಹಾತೊರೆಯುತ್ತಿದೆ.

ಮೂನಿ ಪಡೆಯ ಪ್ರಮುಖ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಿದ್ದಾರೆ. ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ 15 ಬ್ಯಾಟರ್‌ಗಳ ಪಟ್ಟಿಯಲ್ಲಿ ಈ ತಂಡದ ಒಬ್ಬರೂ ಇಲ್ಲ. ಆದರೆ, ಆರ್‌ಸಿಬಿಯ ನಾಲ್ವರು ಕಾಣಿಸಿಕೊಂಡಿದ್ದಾರೆ.

ರೇಣುಕಾ ಸಿಂಗ್, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಶೋಭನಾ ಆಶಾ ಅವರನ್ನೊಳಗೊಂಡ ಆರ್‌ಸಿಬಿ ಬೌಲಿಂಗ್‌ ವಿಭಾಗವೂ ಜೈಂಟ್ಸ್‌ಗಿಂತ ಪರಿಣಾಮಕಾರಿಯಾಗಿದೆ. ಆದರೆ, ಮೂನಿ ಪಡೆ ಯಾವಾಗಬೇಕಾದರೂ ಪುಟಿದೇಳುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸ್ಮೃತಿ ಬಳಗ ಮರೆಯುವಂತಿಲ್ಲ.

ಹನ್ನೊಂದರ ಬಳಗ
ಆರ್‌ಸಿಬಿ:
 ಸ್ಮೃತಿ ಮಂದಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರಿ, ರಿಚಾ ಘೋಷ್, ಸೋಫಿ ಮಾಲಿನ್‌, ಏಕ್ತಾ ಬಿಷ್ಠ್‌, ಜಾರ್ಜಿಯಾ ವೇರ್ಹ್ಯಾಮ್, ಸಿಮ್ರಾನ್ ಬಹದ್ದೂರ್, ಶೋಭನಾ ಆಶಾ, ರೇಣುಕಾ ಸಿಂಗ್

ಜಿಜಿ: ಬೆತ್‌ ಮೂನಿ (ನಾಯಕಿ), ಲೌರಾ ವೊಲ್ವಾರ್ಡ್ಟ್‌, ಫೊಯೆಬೆ ಲಿಚ್‌ಫೀಲ್ಡ್‌, ವೇದಾ ಕೃಷ್ಣಮೂರ್ತಿ, ದಯಾಳನ್‌ ಹೇಮಲತಾ, ಆಷ್ಲೇ ಗಾರ್ಡನರ್‌, ತನುಜಾ ಕನ್ವಾರ್‌, ಮೇಘನಾ ಸಿಂಗ್‌, ಕ್ಯಾಥರಿನ್‌ ಬ್ರೈಸ್‌, ಮನ್ನತ್‌ ಕಶ್ಯಪ್‌, ಶಬ್ನಾಮ್‌ ಶಕೀಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT