ಭಾನುವಾರ, ಜನವರಿ 17, 2021
28 °C
ವನಿತೆಯರ ಕ್ರಿಕೆಟ್ ಅಭಿವೃದ್ಧಿಗೆ ಧಾರವಾಡದ ಅಕಾಡೆಮಿಗಳ ಭರವಸೆಯ ಹೆಜ್ಜೆ

PV Web Exclusive| ಬಾಲಕರ ಕ್ರಿಕೆಟ್‌ ತಂಡದಲ್ಲಿ ಬಾಲಕಿಯರು!

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಏಳೆಂಟು ತಿಂಗಳುಗಳಿಂದ ಕೋವಿಡ್‌ ಆತಂಕದ ಅಲೆಯಲ್ಲಿಯೇ ತೇಲಿ ಹೋಗಿದ್ದ ಕ್ರಿಕೆಟ್‌ ಎಂಬ ಮರಕ್ಕೆ ಈಗ ಹೊಸ ನೀರು ಬರುತ್ತಿದೆ. ಭವಿಷ್ಯದಲ್ಲಿ ದೊಡ್ಡ ಸಾಧನೆಯ ಕನಸು ಹೊಂದಿರುವ ಭರವಸೆಯ ಆಟಗಾರ್ತಿಯರು ಕ್ರಿಕೆಟ್‌ ಅಂಗಳದಲ್ಲಿ, ನೆಟ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಕ್ರಿಕೆಟ್‌ನ ಹೊಸ ಚಿಗುರು ಬೆಳೆಯುವ ಹಾದಿ ನಿಚ್ಚಳವಾಗಿದೆ.

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಬೇರೆ ನಗರ ಪ್ರದೇಶಗಳಲ್ಲಿ ಒಂದು ಕ್ರಿಕೆಟ್‌ ತಂಡಕ್ಕಾಗುವಷ್ಟು ಆಟಗಾರ್ತಿಯರು ಒಂದೇ ಜಿಲ್ಲೆಯಲ್ಲಿ ಹಾಗೂ ಅಕಾಡೆಮಿಯಲ್ಲಿ ಸಿಗುವುದು ಕಷ್ಟ. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ  ಮಹಿಳೆಯರ ಶಾಲಾ ಕ್ರಿಕೆಟ್ ಟೂರ್ನಿ ಆಯೋಜಿಸಲು ವಯೋಮಿತಿ ಸಡಿಲಿಕೆ ನೀಡಿ ಅರ್ಜಿ ಕರೆಯಲಾಗಿತ್ತು. ಟೂರ್ನಿಗೆ ಬಂದವರಿಗೆ ಕ್ರಿಕೆಟ್ ಕಿಟ್‌, ತರಬೇತಿ ಸೌಲಭ್ಯ ಎಲ್ಲವನ್ನೂ ಉಚಿತವಾಗಿ ನೀಡುವುದಾಗಿ ಸಂಘಟಕರು ತಿಳಿಸಿದ್ದರು. ತಮ್ಮ ಪರಿಚಯದ ಶಾಲೆಗಳ ಮುಖ್ಯಸ್ಥರಿಗೆ ಕರೆ ಮಾಡಿ ನಿಮ್ಮ ಶಾಲೆಯಿಂದ ಮಹಿಳಾ ತಂಡವನ್ನು ಕಳುಹಿಸಿಕೊಡಿ; ಜಿಲ್ಲೆಯಲ್ಲಿ ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಮನವಿಯನ್ನೂ ಮಾಡಿದ್ದರು. ಆದರೆ, ಬಂದ ತಂಡಗಳ ಸಂಖ್ಯೆ ಶೂನ್ಯ!

ಹೀಗಾಗಿ ಜಿಲ್ಲೆಯಲ್ಲಿ ಬಾಲಕಿಯರ ತಂಡಕ್ಕೆ ಪ್ರತ್ಯೇಕ ಟೂರ್ನಿ ನಡೆಸುವ, ಅವರಿಗಾಗಿಯೇ ಪಂದ್ಯಗಳನ್ನು ಆಯೋಜಿಸುವ ಪರಿಪಾಠ ಇಲ್ಲ. ಇದರಿಂದ ಬಾಲಕಿಯರ ಶಕ್ತಿ, ಸಾಮರ್ಥ್ಯ ಮತ್ತು ಕೌಶಲ ತಮ್ಮ ಅಕಾಡೆಮಿಗಳಲ್ಲಿ ಅಭ್ಯಾಸಕ್ಕೆ ಮಾತ್ರ ಸೀಮಿತವಾಗುತ್ತಿತ್ತು. ಇದನ್ನು ತಪ್ಪಿಸಿ ಬಾಲಕಿಯರಿಗೂ ವೇದಿಕೆ ಕಲ್ಪಿಸಲು ಸ್ಥಳೀಯ ಕ್ಲಬ್‌ಗಳು ಅವಕಾಶ ಮಾಡಿಕೊಟ್ಟವು. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ 14 ವರ್ಷದೊಳಗಿನ ಬಾಲಕರ ಕ್ರಿಕೆಟ್‌ ಟೂರ್ನಿಯಲ್ಲಿ 16 ವರ್ಷದ ಒಳಗಿನವರ ಬಾಲಕಿಯರಿಗೂ ಸ್ಥಾನ ನೀಡಲಾಗಿತ್ತು.


ಕೀರ್ತಿ ಮರೆದ್‌ (ಎಡ), ಕೃಷ್ಣವೇಣಿ ಬೆಟದೂರು

ಆ ವಯೋಮಿತಿಯೊಳಗಿನ ಬಾಲಕರಿಗೆ ಸಡ್ಡು ಹೊಡೆಯುವಂತೆ ಪ್ರತಿ ತಂಡಗಳಲ್ಲಿದ್ದ ಒಂದಿಬ್ಬ ಆಟಗಾರ್ತಿಯರು ಪೈಪೋಟಿ ಒಡ್ಡಿದ್ದರು. ನಾವೂ ಯಾರಿಗೆ ಕಡಿಮೆಯಿಲ್ಲ ಎನ್ನುವಂತೆ ಸವಾಲು ಎಸೆದಿದ್ದರು. ಜಿಲ್ಲೆಯ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌, ತೇಜಲ್‌ ಶಿರಗುಪ್ಪಿ ಅಕಾಡೆಮಿ, ವಿಎಂಸಿಎ, ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ, ಎಸ್‌ಡಿಎಂ ಸೇರಿದಂತೆ ಹಲವು ಕ್ಲಬ್‌ಗಳು ವನಿತೆಯರ ಕ್ರಿಕೆಟ್‌ಗೆ ಆಸಕ್ತಿಗೆ ನೆರವಾಗಲು ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡುತ್ತಿವೆ. ಧಾರವಾಡದ ಫಸ್ಟ್‌ ಕ್ರಿಕೆಟ್‌ ಅಕಾಡೆಮಿ ಬಾಲಕಿಯರಿಗೆ ಉಚಿತವಾಗಿ ತರಬೇತಿ ಕೊಡುತ್ತಿದೆ.

ಹುಬ್ಬಳ್ಳಿಯ ಬಿಜೆ ಅಸೋಸಿಯೇಟ್ಸ್‌ ಈಚೆಗೆ ಬಾಲಕಿಯರ ತಂಡಗಳ ನಡುವೆ ತ್ರಿಕೋನ ಕ್ರಿಕೆಟ್‌ ಸರಣಿ ಆಯೋಜಿಸಿತ್ತು. ಈ ಸರಣಿಯಲ್ಲಿ ಪ್ರತಿ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿದ್ದವು. ಧಾರವಾಡ, ರಾಯಚೂರು, ಬಳ್ಳಾರಿ, ವಿಜಯಪುರದಿಂದ ಆಟಗಾರ್ತಿಯರು ಬಂದಿದ್ದರು. ರಾಯಚೂರಿನಿಂದ ಬಂದಿದ್ದ ಚಿನ್ಮಯಿ ಎನ್ನುವ ಆಟಗಾರ್ತಿ ಸಿದ್ಧಾರೂಢ ಮಠದಲ್ಲಿದ್ದು ಟೂರ್ನಿಯಲ್ಲಿ ಪಾಲ್ಗೊಂಡಿದ್ದು ವಿಶೇಷ.

14 ವರ್ಷದ ಒಳಗಿನವರಿಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ‘ಲೀಲಾವತಿ ಪ್ಯಾಲೇಸ್‌ ಕಪ್‌’ ಬಾಲಕರ ಅಂತರ ಕ್ಯಾಂಪ್‌ಗಳ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಚಾಂಪಿಯನ್ಸ್‌ ನೆಟ್‌ ಕ್ರಿಕೆಟ್‌ ಕೇಂದ್ರದ ಸಂಜನಾ ವೆರ್ಣೇಕರ ಮತ್ತು ಲಕ್ಷ್ಮಿ ಬಾಗೇವಾಡಿ, ದುರ್ಗಾ ಸ್ಪೋರ್ಟ್ಸ್‌ ಅಕಾಡೆಮಿಯ ಭೂಮಿಕಾ ಆರ್‌. ಮತ್ತು ಇಂದುಮತಿ ಓದುಗೌಡರ ಅವರಿಗೆ ಪ್ರೋತ್ಸಾಹಿಸಲು ವಿಶೇಷ ಪ್ರಶಸ್ತಿ ನೀಡಲಾಗಿತ್ತು.

ಬಾಲ್ಯದಿಂದಲೂ ಕ್ರಿಕೆಟ್‌ನತ್ತ ಅಭಿರುಚಿ ಹೊಂದಿರುವ ಧಾರವಾಡದ ಅಶ್ಮೇರಾ ಬಾನು 19 ವರ್ಷದ ಒಳಗಿನವರ ರಾಜ್ಯ ತಂಡದಲ್ಲಿ ಆಡಿದ್ದಳು. ಜಿಲ್ಲೆಯ ಖುಷಿ ಬಾಂಡೇಕರ್, ಪುಷ್ಪಾ ಕಿರೇಸೂರ, ಮೇದಿನಿ ಹೆಗಡೆ, ಕೀರ್ತಿ ಮರೇದ ಮತ್ತು ಕೃಷ್ಣವೇಣಿ ಬೆಟದೂರು ಕ್ರಿಕೆಟ್‌ ತರಬೇತಿ ಪಡೆಯುತ್ತಿದ್ದಾರೆ. ಪುಷ್ಪಾ, ಚಾಲೆಂಜರ್ ಟ್ರೋಫಿ ಮತ್ತು ಕರ್ನಾಟಕ ತಂಡದ ಪರ ಆಡಿದ್ದಾರೆ.  

ತಮ್ಮ ಅಕಾಡೆಮಿಯಲ್ಲಿ ಎಂಟು ಜನ ಬಾಲಕಿಯರಿಗೆ ತರಬೇತಿ ನೀಡುತ್ತಿರುವ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿಯ ಕೋಚ್‌ ಸೋಮಶೇಖರ ಶಿರಗುಪ್ಪಿ ‘ಪ್ರತಿ ಕ್ಲಬ್‌ನಿಂದ ಒಂದು ತಂಡ ಮಾಡಿ ಟೂರ್ನಿ ಆಡಿಸುವಷ್ಟು ಆಟಗಾರ್ತಿಯರು ಎಲ್ಲ ಅಕಾಡೆಮಿಗಳಲ್ಲಿ ಇಲ್ಲ. ಹೀಗಾಗಿ ಬಾಲಕರ ತಂಡದ ಜೊತೆಗೆ ಬಾಲಕಿಯರೂ ಆಡುತ್ತಿದ್ದಾರೆ. ಇದರಿಂದ ಆಟಗಾರ್ತಿಯರ ಕೌಶಲ, ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗುತ್ತದೆ. ನಿಯಮಗಳು, ಬ್ಯಾಟಿಂಗ್‌ ಕೌಶಲ ಕಲಿಯಲು ಅನುಕೂಲವಾಗುತ್ತದೆ’ ಎಂದರು.


ಹುಬ್ಬಳ್ಳಿಯಲ್ಲಿ ನಡೆದ ಬಾಲಕಿಯರ ಕ್ರಿಕೆಟ್ ಟೂರ್ನಿಯ ಪಂದ್ಯಕ್ಕೂ ಮೊದಲಿನ ನೋಟ

ಮಹಿಳಾ ಪಂದ್ಯಕ್ಕೆ ಉಚಿತ ಕ್ರೀಡಾಂಗಣ

ಜಿಲ್ಲೆಯಲ್ಲಿ ವನಿತೆಯರ ಕ್ರಿಕೆಟ್‌ ಅಭಿವೃದ್ಧಿ ಪಡಿಸಬೇಕು ಎನ್ನುವ ಉದ್ದೇಶದಿಂದ ಎರಡು ತಂಡಗಳನ್ನು ರಚಿಸಿಕೊಂಡು ಬಂದರೆ ಅವರಿಗೆ ಉಚಿತವಾಗಿ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಆಡಲು ಅವಕಾಶ ಕೊಡಲಾಗುತ್ತಿದೆ. ಈಗಾಗಲೇ ಎರಡು ಪಂದ್ಯಗಳು ಕೂಡ ನಡೆದಿವೆ. ಚೆಂಡನ್ನೂ ನೀಡುತ್ತೇವೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಧಾರವಾಡ ಜಿಲ್ಲೆಯ ಚೇರ್ಮನ್‌ ವೀರಣ್ಣ ಸವಡಿ.

‘ಕೋವಿಡ್‌ ಕಾರಣದಿಂದ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್‌ ಚಟುವಟಿಕೆಗಳು ಆರಂಭವಾಗಿಲ್ಲ. ಆರಂಭವಾದ ಬಳಿಕ ಕೆಎಸ್‌ಸಿಎ ವತಿಯಿಂದಲೇ ಅವರಿಗೆ ತರಬೇತಿ ಕೊಡಿಸಲು ವ್ಯವಸ್ಥೆ ಮಾಡಲಾಗುವುದು. ಹುಬ್ಬಳ್ಳಿ–ಧಾರವಾಡದ ಎಲ್ಲ ಕ್ರಿಕೆಟ್‌ ಕ್ಲಬ್‌ಗಳು ಬಾಲಕಿಯರ ಕ್ರಿಕೆಟ್‌ಗೆ ಆದ್ಯತೆ ನೀಡುತ್ತಿರುವುದರಿಂದ ಐದಾರು ವರ್ಷಗಳಿಂದ ಮಕ್ಕಳು ಕ್ರಿಕೆಟ್‌ ಕಲಿಯಲು ಆಸಕ್ತಿ ತೋರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದರು.

ರಾಜಧಾನಿ ಕೇಂದ್ರದಿಂದ ಹೊರಗೆ ವನಿತೆಯರ ಕ್ರಿಕೆಟ್‌ ಮುನ್ನಲೆಗೆ ತರಲು ಹುಬ್ಬಳ್ಳಿಯ ಬಿಜೆ ಅಸೋಸಿಯೇಟ್ಸ್‌ ಜ. 27ರಿಂದ ಮಹಿಳಾ ಪ್ರೀಮಿಯರ್ ಲೀಗ್ ‌ ಆರಂಭಿಸಲು ಮುಂದಾಗಿದೆ. ಈ ಟೂರ್ನಿಯಲ್ಲಿ ಧಾರವಾಡ, ಬಳ್ಳಾರಿ, ರಾಯಚೂರು, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ ನಗರದಿಂದ, ಗೋವಾ ರಾಜ್ಯದಿಂದಲೂ ಆಟಗಾರ್ತಿಯರು ಬರುತ್ತಾರೆ. ಆರು ತಂಡಗಳು ಪಾಲ್ಗೊಳ್ಳಲಿವೆ.

‘ಜಿಲ್ಲೆಯಲ್ಲಿ ಮೊದಲು ಆಟಗಾರ್ತಿಯರ ಸಂಖ್ಯೆ ಬಹಳಷ್ಟು ಕಡಿಮೆಯಿತ್ತು. ಈಗ ಎಲ್ಲ ಅಕಾಡೆಮಿಗಳ ಸಹಕಾರದಿಂದ ಬಾಲಕಿಯರು ಆಸಕ್ತಿ ತೋರಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಜಿಲ್ಲೆಯ ಆಟಗಾರ್ತಿಯರನ್ನು ಒಳಗೊಂಡ ಬಲಿಷ್ಠ ತಂಡ ರೂಪುಗೊಳ್ಳುವುದರಲ್ಲಿ ಅನುಮಾನವೇನಿಲ್ಲ. ಮಂದೆಯೂ ಹೆಚ್ಚು ಮಹಿಳಾ ಟೂರ್ನಿಗಳನ್ನು ನಡೆಸಲಾಗುವುದು’ ಎಂದು ಮಹಿಳಾ ಕ್ರಿಕೆಟ್‌ ಲೀಗ್‌ ಸಂಘಟಕ ಶಿವಾನಂದ ಗುಂಜಾಳ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು