ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: 10ನೇ ಸ್ಥಾನಕ್ಕೇರಿದ ಮಯಂಕ್‌

Last Updated 26 ನವೆಂಬರ್ 2019, 12:33 IST
ಅಕ್ಷರ ಗಾತ್ರ

ದುಬೈ: ಭಾರತದ ಮಯಂಕ್‌ ಅಗರವಾಲ್‌ ಅವರು ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದ್ದಾರೆ.

ಇಂದೋರ್‌ನಲ್ಲಿ ನಡೆದಿದ್ದ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕರ್ನಾಟಕದ ಮಯಂಕ್‌, ಎರಡನೇದ್ವಿಶತಕ ಸಿಡಿಸಿದ್ದರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 700ಕ್ಕೆ ಹೆಚ್ಚಿಸಿಕೊಂಡಿರುವ ಅವರು 11ರಿಂದ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಸದ್ಯ ಅಗ್ರ ಹತ್ತರೊಳಗೆ ಇರುವ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್‌ ಅವರಾಗಿದ್ದಾರೆ.

ಚೇತೇಶ್ವರ್‌ ಪೂಜಾರ (791) ಮತ್ತು ಅಜಿಂಕ್ಯ ರಹಾನೆ (759) ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳನ್ನು ಕಾಪಾಡಿಕೊಂಡಿದ್ದಾರೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅಗ್ರಸ್ಥಾನದ ಸನಿಹಕ್ಕೆ ಸಾಗಿದ್ದಾರೆ.

ಕೋಲ್ಕತ್ತದಲ್ಲಿ ನಡೆದಿದ್ದ ಬಾಂಗ್ಲಾದೇಶ ಎದುರಿನ ‘ಪಿಂಕ್‌ ಬಾಲ್‌’ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ವಿರಾಟ್‌, ಒಟ್ಟು ಪಾಯಿಂಟ್ಸ್‌ ಅನ್ನು 928ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಅವರು ಮೊದಲ ಸ್ಥಾನದಲ್ಲಿರುವ ಸ್ಟೀವನ್‌ ಸ್ಮಿತ್‌ಗಿಂತ (931) ಮೂರು ಪಾಯಿಂಟ್ಸ್‌ ಹಿಂದಿದ್ದಾರೆ.

ನ್ಯೂಜಿಲೆಂಡ್‌ ಎದುರಿನ ಮೊದಲ ಟೆಸ್ಟ್‌ನಲ್ಲಿ ಮಿಂಚಿದ್ದ ಇಂಗ್ಲೆಂಡ್‌ನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಕೂಡ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಕಂಡಿದ್ದಾರೆ. ಒಂಬತ್ತನೇ ಸ್ಥಾನಕ್ಕೆ ಏರಿರುವ ಅವರು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಬಾಂಗ್ಲಾದೇಶದ ಮುಷ್ಫಿಕುರ್‌ ರಹೀಮ್‌ ಮತ್ತು ಲಿಟನ್‌ ದಾಸ್‌ ಅವರು ಕ್ರಮವಾಗಿ 26 ಮತ್ತು 78ನೇ ಸ್ಥಾನಗಳಿಗೆ ಜಿಗಿದಿದ್ದಾರೆ.

ಬಾಂಗ್ಲಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಗಳಾಗಿದ್ದ ವೇಗದ ಬೌಲರ್‌ಗಳಾದ ಇಶಾಂತ್‌ ಶರ್ಮಾ ಮತ್ತು ಉಮೇಶ್‌ ಯಾದವ್‌ ಅವರು ರ‍್ಯಾಂಕಿಂಗ್‌ ಪಾಯಿಂಟ್ಸ್‌ ಹೆಚ್ಚಿಸಿಕೊಂಡು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಇಶಾಂತ್‌ (716) ಮತ್ತು ಉಮೇಶ್‌ (672) ಕ್ರಮವಾಗಿ 17 ಮತ್ತು 21ನೇ ಸ್ಥಾನಗಳಲ್ಲಿದ್ದಾರೆ.

ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ 10ನೇ ಸ್ಥಾನ ಉಳಿಸಿಕೊಂಡಿದ್ದು, ಒಂದು ಸ್ಥಾನ ಕಳೆದುಕೊಂಡಿರುವ ಜಸ್‌ಪ್ರೀತ್‌ ಬೂಮ್ರಾ ಐದಕ್ಕೆ ಇಳಿದಿದ್ದಾರೆ.

ರವೀಂದ್ರ ಜಡೇಜ ಅವರು ಬೌಲರ್‌ಗಳ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದು, ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ವೆಸ್ಟ್‌ ಇಂಡೀಸ್‌ನ ಜೇಸನ್‌ ಹೋಲ್ಡರ್‌ ಮೊದಲ ಸ್ಥಾನ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT