ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND Vs ENG: ಗೆಲುವಿನ ಹಾದಿಯಲ್ಲಿ ರೋಹಿತ್ ಬಳಗ

Published 25 ಫೆಬ್ರುವರಿ 2024, 16:27 IST
Last Updated 25 ಫೆಬ್ರುವರಿ 2024, 16:27 IST
ಅಕ್ಷರ ಗಾತ್ರ

ರಾಂಚಿ: ಭಾರತದ ಸ್ಪಿನ್ ಬೌಲರ್‌ಗಳು ಇಲ್ಲಿ  ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದ ಚಿತ್ರಣವನ್ನೇ ಸಂಪೂರ್ಣವಾಗಿ ತಿರುವುಮುರುವು ಮಾಡಿದರು.

ಮೊದಲ ಇನಿಂಗ್ಸ್‌ನಲ್ಲಿ ಭಾರಿ ಮುನ್ನಡೆ ಗಳಿಸಿದ್ದ ಇಂಗ್ಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿಯಲು ಆರ್‌. ಅಶ್ವಿನ್ (51ಕ್ಕೆ5) ಮತ್ತು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (22ಕ್ಕೆ4) ಕಾರಣರಾದರು.

ಇದರಿಂದಾಗಿ ಪಂದ್ಯದ ಮೂರನೇ ದಿನವಾದ ಭಾನುವಾರ ಇಂಗ್ಲೆಂಡ್ ತಂಡವು ಭಾರತಕ್ಕೆ 192 ರನ್‌ಗಳ ಗೆಲುವಿನ ಗುರಿ ನೀಡಿದೆ. ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡವು 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 40 ರನ್ ಗಳಿಸಿದೆ. ರೋಹಿತ್ ಶರ್ಮಾ (ಬ್ಯಾಟಿಂಗ್ 24) ಮತ್ತು ಯಶಸ್ವಿ ಜೈಸ್ವಾಲ್ (ಬ್ಯಾಟಿಂಗ್ 16) ಕ್ರೀಸ್‌ನಲ್ಲಿದ್ದಾರೆ.  ಪಂದ್ಯದಲ್ಲಿ ಇನ್ನೂ ಎರಡು ದಿನಗಳಿದ್ದು ಭಾರತದ ಗೆಲುವಿಗೆ 152 ರನ್‌ಗಳ ಅಗತ್ಯವಿದೆ.

ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 353 ರನ್‌ಗಳಿಗೆ ಉತ್ತರವಾಗಿ ದೊಡ್ಡ ಹಿನ್ನಡೆ ಅನುಭವಿಸುವ ಆತಂಕವನ್ನು ಭಾರತ ತಂಡ ಎದುರಿಸಿತ್ತು. ಆದರೆ ಧ್ರುವ ಜುರೇಲ್ (90; 149ಎ, 4X6, 6X4) ಮತ್ತು ನುರಿತ ಬ್ಯಾಟರ್‌ನಂತೆ ಆಡಿದ ಕುಲದೀಪ್ ಯಾದವ್ (28; 131ಎ)  ಎಂಟನೆ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸಿದರು. 

ಇದರಿಂದಾಗಿ ತಂಡವು 103.2 ಓವರ್‌ಗಳಲ್ಲಿ 307 ರನ್ ಗಳಿಸಿತು. ತಮ್ಮ ಇನಿಂಗ್ಸ್‌ ಉದ್ದಕ್ಕೂ ಶಾಂತಚಿತ್ತದಿಂದ ಆಡಿದ ಜುರೇಲ್ ಉತ್ತಮ ಕೌಶಲ ತೋರಿದರು. ಕೊನೆಯವರಾಗಿ ಔಟಾದರು. ಟಾಮ್ ಹಾರ್ಟ್ಲಿ ಸ್ಪಿನ್ ಎಸೆತವನ್ನು ಅಂದಾಜಿಸುವಲ್ಲಿ ಎಡವಿದ ಅವರು ಕೇವಲ  ಹತ್ತು ರನ್‌ಗಳಿಂದ ತಮ್ಮ ಚೊಚ್ಚಲ ಶತಕವನ್ನು ತಪ್ಪಿಸಿಕೊಂಡರು.

ಅಶ್ವಿನ್–ಕುಲದೀಪ್ ಜೊತೆಯಾಟ

46 ರನ್‌ಗಳ ಅಲ್ಪ ಮುನ್ನಡೆ ಗಳಿಸಿದ ಪ್ರವಾಸಿ ತಂಡದ ಬ್ಯಾಟಿಂಗ್ ಪಡೆ ತನ್ನ ಎರಡನೇ ಇನಿಂಗ್ಸ್‌ನಲ್ಲಿ ಕುಸಿಯಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ 35ನೇ ಸಲ ಐದು ವಿಕೆಟ್ ಗೊಂಚಲು ಗಳಿಸಿದ ಸಾಧನೆ ಮಾಡಿದ ಅಶ್ವಿನ್  ಹಾಗೂ ಕುಲದೀಪ್ ಇಬ್ಬರೂ ಜೊತೆಗೂಡಿ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದರು. ಇಂಗ್ಲೆಂಡ್ ತಂಡವು 53.5 ಓವರ್‌ಗಳಲ್ಲಿ 145 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಗಳಿಸಿದ್ದ ರೂಟ್ ಇಲ್ಲಿ ಕೇವಲ 11 ರನ್ ಗಳಿಸಿದರು. ಅವರೂ ಸೇರಿದಂತೆ ಐವರು ಪ್ರಮುಖ ಬ್ಯಾಟರ್‌ಗಳನ್ನು ಅಶ್ವಿನ್ ಹೆಡೆಮುರಿ ಕಟ್ಟಿದರು.

ರಾಂಚಿಯ ಪಿಚ್ ಇಡೀ ದಿನ ಸ್ಪಿನ್ನರ್‌ಗಳಿಗೇ ಹೆಚ್ಚು ನೆರವು ನೀಡಿತು. ಇಂಗ್ಲೆಂಡ್‌ನ ಆಫ್‌ಸ್ಪಿನ್ನರ್ ಶೋಯಬ್ ಬಷೀರ್ (119ಕ್ಕೆ5) ಮತ್ತು ಟಾಮ್ ಹಾರ್ಟ್ಲಿ (68ಕ್ಕೆ3)  ಮಿಂಚಿದರು. ಅದರಿಂದಾಗಿ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಗಳಿಸಿದ ಭಾರತ ತಂಡವು ದೃತಿಗೆಡದೇ ತಿರುಗೇಟು ನೀಡಿದ್ದು ತನ್ನ ಸ್ಪಿನ್ ಬಲದ ಮೂಲಕವೇ ಎಂಬುದು ವಿಶೇಷ.

ನಾಲ್ಕನೇ ದಿನದಾಟದ ಬೆಳಗಿನ  ಅವಧಿಯು ಮಹತ್ವದ್ದಾಗಿದ್ದು ಭಾರತದ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡದೇ ಹೋದರೆ ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ಸ್ಪಿನ್ನರ್‌ಗಳ ಮುಂದೆ ಸಣ್ಣ ಗುರಿಯೂ ಕಠಿಣ ಸವಾಲಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT