ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND VS SL: ಭಾರತಕ್ಕೆ ಸುಲಭ ಜಯ

ಹೋಳ್ಕರ್‌ನಲ್ಲಿ ಮಿಂಚಿದ ಸೈನಿ, ಯಾದವ್‌, ರಾಹುಲ್ ಅಬ್ಬರದ ಆಟ
Last Updated 7 ಜನವರಿ 2020, 18:39 IST
ಅಕ್ಷರ ಗಾತ್ರ

ಇಂದೋರ್: ಕುಲದೀಪ್‌ ಯಾದವ್‌ ಬೌಲಿಂಗ್ ಮತ್ತು ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಮಂಗಳವಾರ ರಾತ್ರಿ ಹೋಳ್ಕರ್ ಮೈದಾನದಲ್ಲಿ ನಡೆದ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಶ್ರೀಲಂಕಾ ಎದುರು ಜಯಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ಶ್ರೀಲಂಕಾ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು.

ಮಧ್ಯಮವೇಗಿ ನವದೀಪ್ ಸೈನಿ (18ಕ್ಕೆ2) ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಅವರ ದಾಳಿಗೆ ನಲುಗಿದ ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 142 ರನ್‌ ಗಳಿಸಿತು. ಗುರಿ ಬೆನ್ನತ್ತಿದ್ದ ಭಾರತಕ್ಕೆ ಕೆ.ಎಲ್. ರಾಹುಲ್ (45; 32ಎಸೆತ, 6ಬೌಂಡರಿ) ಮತ್ತು ಶಿಖರ್ ಧವನ್ (32; 29ಎಸೆತ, 2ಬೌಂಡರಿ) ಉತ್ತಮ ಆರಂಭ ನೀಡಿದರು. ವಿರಾಟ್ ಬಳಗವು 17.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 144 ರನ್‌ ಗಳಿಸಿ ಜಯಿಸಿತು.

ಲಸಿತ್ ಮಾಲಿಂಗ ನಾಯಕತ್ವದ ಲಂಕಾ ತಂಡಕ್ಕೆ ಧನುಷ್ಕಾ ಗುಣತಿಲಕ (20) ಮತ್ತು ಅವಿಷ್ಕಾ ಫರ್ನಾಂಡೊ (22 ರನ್) ಅವರು ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಐದನೇ ಓವರ್‌ನಲ್ಲಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಈ ಜೊತೆಯಾಟವನ್ನು ಮುರಿದರು.

ಇವರ ನಂತರ ಸೈನಿ ಮತ್ತು ಕುಲದೀಪ್ ಯಾದವ್ ಅವರ ಬೌಲಿಂಗ್‌ ಪರಿಣಾಮಕಾರಿಯಾಗಿತ್ತು. ಇದರಿಂದಾಗಿ ಪ್ರವಾಸಿ ತಂಡವು 100ರ ಗಡಿ ಮುಟ್ಟುವಷ್ಟರಲ್ಲಿ ಒಟ್ಟು ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

ದೀರ್ಘ ವಿಶ್ರಾಂತಿಯ ನಂತರ ಕಣಕ್ಕಿಳಿದ ಜಸ್‌ಪ್ರೀತ್ ಬೂಮ್ರಾ ಅವರು ಆರಂಭದಲ್ಲಿ ಸ್ವಲ್ಪ ದಂಡನೆಗೊಳಗಾದರು. ಆದರೂ ಅವರ ಇನ್‌ಸ್ವಿಂಗರ್ ಮತ್ತು ಕಟರ್‌ಗಳು ಗಮನ ಸೆಳೆದವು. ದಸುನ್ ಶನಾಕ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ಇದರಿಂದಾಗಿ ಮಧ್ಯಮ ಕ್ರಮಾಂಕ ಕುಸಿಯಿತು.

ನಂತರ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಗಳಿಸಿ ಕೆಳಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಲಂಕಾ ತಂಡವು ಸಾಧಾರಣ ಮೊತ್ತ ಗಳಿಸಿತು.

ರಾಹುಲ್‌ ಆಟದ ಸೊಬಗು: ಭಾರತ ತಂಡಕ್ಕೆ ಗೆಲುವು ಸುಲಭವಾಗುವಂತೆ ಮಾಡಿದ್ದು ಕನ್ನಡಿಗ ಕೆ.ಎಲ್. ರಾಹುಲ್ ಅವರ ಆಟ.

ಎಡಗೈ ಬ್ಯಾಟ್ಸ್‌ಮನ್ ಶಿಖರ್ ಜೊತೆಗೆ ಇನಿಂಗ್ಸ್ ಆರಂಭಿಸಿದ ರಾಹುಲ್ ಲಂಕಾ ಬೌಲರ್‌ಗಳನ್ನು ಕಾಡಿದರು. ಹತ್ತು ಓವರ್‌ಗಳು ಮುಗಿಯುವ ಮುನ್ನವೇ ಗೆಲುವನ್ನು ಖಚಿತಗೊಳಿಸುವಂತಹ ಆಟವಾಡಿದರು.

ರಾಹುಲ್ ಕೇವಲ ಐದು ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಆಗ ತಂಡದ ಖಾತೆಗೆ 71 ರನ್‌ಗಳು ಸೇರಿದ್ದವು.

ಇನ್ನೊಂದು ಬದಿಯಲ್ಲಿ ಲಯ ಕಂಡುಕೊಳ್ಳಲು ಪ್ರಯತ್ನಿಸಿದ ಶಿಖರ್ ಧವನ್ (32 ರನ್) 12ನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಎರಡೂ ವಿಕೆಟ್‌ ಗಳಿಸಿದ ಧನಂಜಯ ಡಿಸಿಲ್ವಾ ಸಂಭ್ರಮಿಸಿದರು.

ಆದರೆ, ಶ್ರೇಯಸ್ ಅಯ್ಯರ್ (34; 26ಎ, 3ಬೌಂ) ಮತ್ತು ನಾಯಕ ವಿರಾಟ್ ಕೊಹ್ಲಿ( ಔಟಾಗದೆ 30, 17 ಎಸೆತ, 1 ಬೌಂಡರಿ, 2 ಸಿಕ್ಸರ್‌) ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಅನುಭವಿ ಬೌಲರ್ ಲಸಿತ್ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ಕೊಹ್ಲಿ, ಟಿ20 ತಂಡದ ನಾಯಕರಾಗಿ ಒಂದು ಸಾವಿರ ರನ್ ಗಳಿಸಿದ ಸಾಧನೆ ಮಾಡಿದರು.

ಈ ಪಂದ್ಯದಲ್ಲಿಯೂ ಮನೀಷ್ ಪಾಂಡೆ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಕಣಕ್ಕಿಳಿಯುವ ಅವಕಾಶ ಲಭಿಸಲಿಲ್ಲ.

ಸಂಕ್ಷಿಪ್ತ ಸ್ಕೋರು:ಶ್ರೀಲಂಕಾ: 20 ಓವರ್‌ಗಳಲ್ಲಿ 9ಕ್ಕೆ142 (ಧನುಷ್ಕಾ ಗುಣತಿಲಕ 20, ಅವಿಷ್ಕಾ ಫರ್ನಾಂಡೊ 22, ಕುಶಾಲ ಪರೆರಾ 34, ಜಸ್‌ಪ್ರೀತ್ ಬೂಮ್ರಾ 32ಕ್ಕೆ1, ಶಾರ್ದೂಲ್ ಠಾಕೂರ್ 23ಕ್ಕೆ3, ನವದೀಪ್ ಸೈನಿ 18ಕ್ಕೆ2, ವಾಷಿಂಗ್ಟನ್ ಸುಂದರ್ 29ಕ್ಕೆ1, ಕುಲದೀಪ್ ಯಾದವ್ 38ಕ್ಕೆ2), ಭಾರತ: 17.3ಓವರ್‌ಗಳಲ್ಲಿ 3ಕ್ಕೆ144 (ಕೆ.ಎಲ್. ರಾಹುಲ್ 45, ಶಿಖರ್ ಧವನ್ 32, ಶ್ರೇಯಸ್ ಅಯ್ಯರ್ 34, ವಿರಾಟ್ ಕೊಹ್ಲಿ ಔಟಾಗದೆ 30, ರಿಷಭ್ ಪಂತ್ ಔಟಾಗದೆ 1, ಧನಂಜಯ ಡಿಸಿಲ್ವಾ 30ಕ್ಕೆ2)

ಫಲಿತಾಂಶ: ಭಾರತ ತಂಡಕ್ಕೆ 7 ವಿಕೆಟ್‌ಗಳಿಂದ ಜಯ, ಸರಣಿಯಲ್ಲಿ1–0 ಮುನ್ನಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT