ವಿಶ್ವಕಪ್‌ಗೆ ‘ಸರಣಿ’ ತಾಲೀಮು

ಶುಕ್ರವಾರ, ಮಾರ್ಚ್ 22, 2019
26 °C
ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯಗಳು ಇಂದಿನಿಂದ; ಮಹೇಂದ್ರ ಸಿಂಗ್ ಧೋನಿಗೆ ಗಾಯ

ವಿಶ್ವಕಪ್‌ಗೆ ‘ಸರಣಿ’ ತಾಲೀಮು

Published:
Updated:
Prajavani

ಹೈದರಾಬಾದ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಹಣಾಹಣಿ ಶನಿವಾರ ಇಲ್ಲಿ ನಡೆಯಲಿದೆ. ಮೇ ಕೊನೆಯಲ್ಲಿ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಸಜ್ಜಾಗುತ್ತಿರುವ ಉಭಯ ತಂಡಗಳಿಗೆ ಇದು ಕೊನೆಯ ತಾಲೀಮು.

ಟ್ವೆಂಟಿ–20 ಸರಣಿಯಲ್ಲಿ ಸೋತಿರುವ ಭಾರತ ತಿರುಗೇಟು ನೀಡಲು ಸಜ್ಜಾಗಿದೆ. ತವರಿನಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಭಾರತಕ್ಕೆ ಮಣಿದಿದ್ದ ಆಸ್ಟ್ರೇಲಿಯಾ ಸೇಡು ತೀರಿಸಿಕೊಳ್ಳಲು ಸಿದ್ಧವಾಗಿದೆ.

ಭಾರತ ತಂಡದ ಕೋಚ್ ಮತ್ತು ನಾಯಕ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಪ್ರಯೋಗಗಳಿಗೆ ಮೊರೆ ಹೋಗುವ ಸಾಧ್ಯತೆ ಇದೆ. ಈ ಮೂಲಕ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಕಟ್ಟುವತ್ತ ಚಿತ್ತ ನೆಡಲಿದ್ದಾರೆ. ಹೀಗಾಗಿ ಕೆ.ಎಲ್‌.ರಾಹುಲ್‌, ರಿಷಭ್ ಪಂತ್, ವಿಜಯಶಂಕರ್‌ ಮತ್ತು ಸಿದ್ಧಾರ್ಥ್ ಕೌಲ್‌ ಅವರಿಗೆ ಸರಣಿ ಸವಾಲಿನದ್ದಾಗಲಿದೆ.

ಟ್ವೆಂಟಿ–20 ಸರಣಿಯ ಎರಡೂ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿರುವ ರಾಹುಲ್ ಭರವಸೆಯಲ್ಲಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಅವರು ಬೆಂಗಳೂರಿನಲ್ಲಿ 47 ರನ್ ಸಿಡಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಸ್ಥಾನಕ್ಕಾಗಿ ರಾಹುಲ್ ಕಾಯುತ್ತಿದ್ದಾರೆ. ಶಿಖರ್ ಧವನ್ ಅವರ ಕಳಪೆ ಫಾರ್ಮ್‌ ಮುಂದುವರಿದರೆ ರಾಹುಲ್ ಹಾದಿ ಸುಗಮವಾಗಲಿದೆ.

ಏಕದಿನ ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ ಇನ್ನೂ ಸಂಪೂರ್ಣವಾಗಿ ಫಾರ್ಮ್‌ಗೆ ಬರಲಿಲ್ಲ. ವಿಜಯಶಂಕರ್‌ ಅವರು ಬೌಲಿಂಗ್‌ನಲ್ಲಿ ಲಯ ಕಂಡುಕೊಳ್ಳಬೇಕಾಗಿದೆ. ಹಾರ್ದಿಕ್ ಪಾಂಡ್ಯಗೆ ಫಿಟ್‌ನೆಸ್‌ ಸಮಸ್ಯೆ ಕಾಡುತ್ತಿರುವುದರಿಂದ ಆಲ್‌ರೌಂಡರ್‌ ಸ್ಥಾನವನ್ನು ತುಂಬಲು ವಿಜಯಶಂಕರ್‌ಗೆ ಉತ್ತಮ ಅವಕಾಶವಿದೆ.

ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಅವರು ವಿಶ್ವಕಪ್‌ನಲ್ಲಿ ಆಡುವುದು ಖಚಿತ ಆಗಿರುವುದರಿಂದ ಮೊದಲ ಕೌಲ್‌ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕಾಗಿದೆ. ಮೊದಲ ಎರಡು ಪಂದ್ಯಗಳಿಗೆ ಮಾತ್ರ ಅವರನ್ನು ಆಯ್ಕೆ ಮಾಡಲಾಗಿದೆ. ಕೊನೆಯ ಮೂರು ಪಂದ್ಯಗಳಿಗೆ ಭುವನೇಶ್ವರ್ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಆ್ಯರನ್ ಫಿಂಚ್ ಬಳಗಕ್ಕೆ ಸವಾಲು: ಟ್ವೆಂಟಿ–20 ಸರಣಿಯನ್ನು ಗೆದ್ದಿರುವ ಫಿಂಚ್ ಬಳಗ ಮೈಮರೆಯುವಂತಿಲ್ಲ. ಅಂಬಟಿ ರಾಯುಡು, ಕೇದಾರ್ ಜಾಧವ್‌, ಮೊಹಮ್ಮದ್ ಶಮಿ ಮುಂತಾದವರು ಭಾರತ ತಂಡದಲ್ಲಿರುವುದರಿಂದ ಪ್ರವಾಸಿ ತಂಡದವರು ಕಠಿಣ ಸವಾಲು ಎದುರಿಸಬೇಕಾಗಿದೆ. ಆಸ್ಟ್ರೇಲಿಯಾಗೆ ನೇಥನ್ ಲಯನ್ ಬಲ ತುಂಬಲಿದ್ದಾರೆ. ಗಾಯಗೊಂಡಿರುವ ಕೇನ್‌ ರಿಚರ್ಡ್ಸನ್‌ ಬದಲಿಗೆ ತಂಡವನ್ನು ಸೇರಿಕೊಂಡಿರುವ ಆ್ಯಂಡ್ರ್ಯೂ ಟೈ ಕೂಡ ಮಿಂಚುವ ಛಲದಲ್ಲಿದ್ದಾರೆ.

ಧೋನಿಗೆ ಗಾಯ: ಶುಕ್ರವಾರ ಅಭ್ಯಾಸದ ವೇಳೆ ಭಾರತದ ಮಹೇಂದ್ರ ಸಿಂಗ್ ಧೋನಿ ಗಾಯಗೊಂಡಿದ್ದಾರೆ. ನೆಟ್ಸ್‌ನಲ್ಲಿ ನೆರವು ಸಿಬ್ಬಂದಿ ರಾಘವೇಂದ್ರ ಅವರಿಂದ ಥ್ರೋಡೌನ್‌ ತೆಗೆದುಕೊಂಡ ಧೋನಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ಮೊಣಕೈಗೆ ಚೆಂಡು ಬಡಿದಿದೆ.

ತೀವ್ರ ನೋವಿನಿಂದ ಬಳಲಿದ ಅವರು ನಂತರ ಅಭ್ಯಾಸ ಮಾಡಲಿಲ್ಲ. ಗಾಯದ ಸಮಸ್ಯೆಯ ತೀವ್ರತೆ ಬಗ್ಗೆ ತಿಳಿದು ಬಂದಿಲ್ಲ.

ಹೀಗಾಗಿ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯುವುದರ ಬಗ್ಗೆಯೂ ಖಚಿತ ಮಾಹಿತಿ ಇಲ್ಲ.

ಪಂದ್ಯಗಳ ಸ್ಥಳಾಂತರವಿಲ್ಲ

ಮೊಹಾಲಿ ಮತ್ತು ದೆಹಲಿಯಲ್ಲಿ ನಡೆಯಲಿರುವ ಪಂದ್ಯಗಳನ್ನು ಸ್ಥಳಾಂತರಿಸುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಶುಕ್ರವಾರ ತಿಳಿಸಿದರು. ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಬಿಗುವಿನ ಪರಿಸ್ಥಿತಿ ಇರುವುದರಿಂದ ಕೊನೆಯ ಎರಡು ಪಂದ್ಯಗಳನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಮಾರ್ಚ್ 10ರಂದು ನಾಲ್ಕನೇ ಪಂದ್ಯ ಮೊಹಾಲಿಯಲ್ಲಿ ನಡೆಯಲಿದ್ದು ಕೊನೆಯ ಪಂದ್ಯ ಮಾರ್ಚ್‌ 13ರಂದು ದೆಹಲಿಯಲ್ಲಿ ನಡೆಯಲಿದೆ.

ಕಳೆದ ಐದು ‍ಪಂದ್ಯಗಳ ಫಲಿತಾಂಶಗಳು

ಭಾರತ

* ಫೆಬ್ರುವರಿ 3, ವೆಲಿಂಗ್ಟನ್‌: ನ್ಯೂಜಿಲೆಂಡ್ ಎದುರು 35 ರನ್‌ಗಳ ಜಯ

* ಜನವರಿ 31, ಹ್ಯಾಮಿಲ್ಟನ್‌: ನ್ಯೂಜಿಲೆಂಡ್‌ ವಿರುದ್ಧ 8 ವಿಕೆಟ್ ಸೋಲು

* ಜನವರಿ 28, ಮೌಂಟ್‌ ಮೌಂಗನುಯಿ: ನ್ಯೂಜಿಲೆಂಡ್ ಎದುರು 7 ವಿಕೆಟ್ ಜಯ

* ಜನವರಿ 26, ಮೌಂಟ್‌ ಮೌಂಗನುಯಿ: ನ್ಯೂಜಿಲೆಂಡ್ ಎದುರು 90 ರನ್‌ ಜಯ

* ಜನವರಿ 23, ನೇಪಿಯರ್‌: ನ್ಯೂಜಿಲೆಂಡ್‌ ವಿರುದ್ಧ 8 ವಿಕೆಟ್‌ಗಳ ಗೆಲುವು

ಆಸ್ಟ್ರೇಲಿಯಾ

ಜನವರಿ 18, ಮೆಲ್ಬರ್ನ್‌: ಭಾರತದ ವಿರುದ್ಧ 7 ವಿಕೆಟ್‌ಗಳ ಸೋಲು

ಜನವರಿ 15, ಅಡಿಲೇಡ್‌: ಭಾರತದ ಎದುರು 6 ವಿಕೆಟ್‌ಗಳ ಸೋಲು

ಜನವರಿ 12, ಸಿಡ್ನಿ: ಭಾರತದ ವಿರುದ್ಧ 34 ರನ್‌ಗಳ ಗೆಲುವು

ನವೆಂಬರ್‌ 11, ಹೋಬರ್ಟ್‌: ದಕ್ಷಿಣ ಆಫ್ರಿಕಾ ಎದುರು 40 ರನ್‌ಗಳ ಸೋಲು

ನವೆಂಬರ್‌ 9, ಅಡಿಲೇಡ್‌: ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಜಯ

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್‌, ಅಂಬಟಿ ರಾಯುಡು, ಕೇದಾರ್ ಜಾಧವ್‌, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್‌), ರವೀಂದ್ರ ಜಡೇಜ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್‌, ಕುಲದೀಪ್ ಯಾದವ್‌, ವಿಜಯ ಶಂಕರ್‌, ರಿಷಭ್ ಪಂತ್‌, ಕೆ.ಎಲ್‌.ರಾಹುಲ್‌, ಸಿದ್ಧಾರ್ಥ್‌ ಕೌಲ್‌.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್‌ (ನಾಯಕ), ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಂಬ್, ಗ್ಲೆನ್ ಮ್ಯಾಕ್ಸ್‌ವೆಲ್‌, ಆ್ಯಶ್ಟನ್‌ ಟರ್ನರ್‌, ಮಾರ್ಕಸ್‌ ಸ್ಟೊಯಿನಿಸ್‌, ಅಲೆಕ್ಸ್ ಕರಿ (ವಿಕೆಟ್ ಕೀಪರ್‌), ಪ್ಯಾಟ್ ಕಮಿನ್ಸ್‌, ನೇಥನ್‌ ಕಾಲ್ಟರ್‌ನೈಲ್‌, ಜೇ ರಿಚರ್ಡ್ಸನ್‌, ಆ್ಯಂಡ್ರ್ಯೂ ಟೈ, ಜೇಸಜ್‌ ಬೆಹ್ರೆಂಡಾರ್ಫ್‌, ನೇಥನ್ ಲಯನ್‌, ಆ್ಯಡಮ್ ಜಂಪಾ, ಡಿ’ಆರ್ಸಿ ಶಾರ್ಟ್‌.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !