ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ ಎದುರು ’ವಿರಾಟ್‌’ ವಿಜಯ

ಜಡೇಜ ಸ್ಪಿನ್ ಸುಳಿಯಲ್ಲಿ ಸಿಲುಕಿದ ಪ್ರವಾಸಿ ಪಡೆ; ರೋಹಿತ್ ಶರ್ಮಾ ಅರ್ಧಶತಕದ ಸೊಬಗು
Last Updated 1 ನವೆಂಬರ್ 2018, 18:46 IST
ಅಕ್ಷರ ಗಾತ್ರ

ತಿರುವನಂತಪುರ: ಹೊಸ ಅಂಗಣದಲ್ಲಿ ನಡೆದ ಮೊತ್ತಮೊದಲ ಏಕದಿನ ಪಂದ್ಯ ವೀಕ್ಷಿಸಲು ಸೇರಿದ್ದ ‘ಫುಟ್‌ಬಾಲ್ ಪ್ರಿಯರ‘ ನಾಡಿನ ಜನರು ರೋಹಿತ್ ಶರ್ಮಾ ಅವರ ಸಿಕ್ಸರ್‌ಗಳ ಸೊಬಗಿಗೆ ಮನಸೋತರು.

ರವೀಂದ್ರ ಜಡೇಜ ಅವರ ಸ್ಪಿನ್‌ ಮೋಡಿ ಮತ್ತು ರೋಹಿತ್‌ ಶರ್ಮಾ (ಅಜೇಯ 63; 56 ಎಸೆತ, 4 ಸಿಕ್ಸರ್‌, 5 ಬೌಂಡರಿ) ಗಳಿಸಿದ ಅರ್ಧಶತಕದ ನೆರವಿನಿಂದ ಭಾರತ ತಂಡ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತು. ಈ ಮೂಲಕ ವೆಸ್ಟ್ ಇಂಡೀಸ್ ಎದುರಿನ ಐದು ಪಂದ್ಯಗಳ ಏಕದಿನ ಸರಣಿಯನ್ನು 3–1ರಲ್ಲಿ ತನ್ನದಾಗಿಸಿಕೊಂಡಿತು. ಇದು ತವರಿನಲ್ಲಿ ಭಾರತದ ಸತತ ಆರನೇ ಸರಣಿ ಜಯವಾಗಿದೆ.

ಇಲ್ಲಿನ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆದ್ದರೆ ಮಾತ್ರ ಭಾರತಕ್ಕೆ ಸರಣಿ ತನ್ನದಾಗಿಸಿಕೊಳ್ಳುವ ಅವಕಾಶವಿತ್ತು. ವೆಸ್ಟ್ ಇಂಡೀಸ್‌ಗೆ ಸರಣಿ ಸಮಬಲಗೊಳಿಸಲು ಇಲ್ಲಿ ಗೆಲುವು ಅನಿವಾರ್ಯವಾಗಿತ್ತು. ಟಾಸ್ ಗೆದ್ದ ಪ್ರವಾಸಿ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ರವೀಂದ್ರ ಜಡೇಜ ಅವರ ಸ್ಪಿನ್‌ ಬಲೆಯಲ್ಲಿ ಸಿಲುಕಿದ ತಂಡ 104 ರನ್‌ಗಳಿಗೆ ಪತನಗೊಂಡಿತು.

ಗುರಿ ಬೆನ್ನತ್ತಿದ ಭಾರತ ಎರಡನೇ ಓವರ್‌ನಲ್ಲಿ ಶಿಖರ್ ಧವನ್ ಅವರನ್ನು ಕಳೆದುಕೊಂಡಿತು. ಆದರೆ ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 99 ರನ್‌ ಸೇರಿಸಿ ಎದುರಾಳಿ ತಂಡವನ್ನು ನಿರಾಸೆಗೊಳಿಸಿದರು. ಇದಕ್ಕಾಗಿ ಭಾರತದ ಬ್ಯಾಟ್ಸ್‌ಮನ್‌ಗಳು ತೆಗೆದುಕೊಂಡದ್ದು 14.5 ಓವರ್‌ ಮಾತ್ರ.

ನಾಲ್ಕು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳ ಮೈಲಿಗಲ್ಲು ದಾಟಿದರು. ಮಹೇಂದ್ರ ಸಿಂಗ್ ಧೋನಿ ಅವರನ್ನು ಬಿಟ್ಟರೆ ಭಾರತದ ಯಾವ ಬ್ಯಾಟ್ಸ್‌ಮನ್‌ಗೂ ಈ ಸಾಧನೆ ಮಾಡಲು ಆಗಲಿಲ್ಲ. ರೋಹಿತ್‌ ಈ ವರ್ಷದಲ್ಲಿ ಸಾವಿರ ರನ್‌ಗಳ ಸಾಧನೆಯನ್ನೂ ಮಾಡಿದರು.

ಪೆಟ್ಟು ನೀಡಿದ ಜಡೇಜ, ಬೂಮ್ರಾ, ಖಲೀಲ್‌: ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿ ಗಮನ ಸೆಳೆದ ಶಿಮ್ರಾನ್‌ ಹೆಟ್ಮೆಯರ್‌ ಒಳಗೊಂಡಂತೆ ಪ್ರಮುಖ ನಾಲ್ವರನ್ನು ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಬಲೆಯಲ್ಲಿ ಸಿಲುಕಿಸಿದರು. ವಿಂಡೀಸ್ ಬ್ಯಾಟ್ಸ್‌ಮನ್‌ಗಳು ಜಸ್‌ಪ್ರೀತ್ ಬೂಮ್ರಾ ಮತ್ತು ಖಲೀಲ್ ಅಹಮ್ಮದ್‌ ಅವರ ವೇಗದ ದಾಳಿಯ ಬಿಸಿಯನ್ನೂ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT