ಶುಕ್ರವಾರ, ಜನವರಿ 17, 2020
22 °C
ಶಿಖರ್ ಧವನ್‌ಗೆ ಸವಾಲಿನ ಪಂದ್ಯ

ಭಾರತ–ಶ್ರೀಲಂಕಾ 2ನೇ ಟ್ವೆಂಟಿ–20 ಹಣಾಹಣಿ: ಹೋಳ್ಕರ್‌ನಲ್ಲಿ ಹರಿಯುವುದೇ ರನ್ ಹೊಳೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಂದೋರ್: ಗುವಾಹಟಿಯಲ್ಲಿ ಮಳೆಯಿಂದ ಪಂದ್ಯ ರದ್ದಾದ ಕಾರಣ ನಿರಾಸೆಗೆ ಒಳಗಾಗಿದ್ದ ಭಾರತ ಮತ್ತು ಶ್ರೀಲಂಕಾ ತಂಡಗಳು ಟ್ವೆಂಟಿ–20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಜಯದ ಕನಸು ಹೊತ್ತು ಮಂಗಳವಾರ ಕಣಕ್ಕೆ ಇಳಿಯಲಿವೆ. 

ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಹೋಳ್ಕರ್ ಅಂಗಣದಲ್ಲಿ ನಡೆಯಲಿರುವ ಪಂದ್ಯ ಸ್ಥಳೀಯ ಪ್ರೇಕ್ಷಕರಿಗೂ ಮಹತ್ವದ್ದು. ಇಲ್ಲಿ ಈ ವರೆಗೆ ಏಕೈಕ ಟ್ವೆಂಟಿ–20 ಪಂದ್ಯ ನಡೆದಿದೆ; ಅದು ಕೂಡ 2017ರಲ್ಲಿ. ಆಗಲೂ ಇಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಸೆಣಸಿದ್ದವು.

ಆ ಪಂದ್ಯದಲ್ಲಿ ರನ್ ಹೊಳೆ ಹರಿಸಿದ್ದ ಭಾರತ (5 ವಿಕೆಟ್‌ಗಳಿಗೆ 260) 88 ರನ್‌ಗಳಿಂದ ಗೆಲುವು ಸಾಧಿಸಿತ್ತು. ರೋಹಿತ್ ಶರ್ಮಾ ನಾಯಕತ್ವದ ಆತಿಥೇಯರು ಬೌಲಿಂಗ್‌ನಲ್ಲೂ ಮಿಂಚಿ ಎದುರಾಳಿಗಳನ್ನು 172 ರನ್‌ಗಳಿಗೆ ಆಲೌಟ್ ಮಾಡಿದ್ದರು.

ಮಳೆಗೆ ಕೊಚ್ಚಿ ಹೋದ ಗುವಾಹಟಿ ಪಂದ್ಯಕ್ಕಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಲು ಮುಂದಾಗಿದ್ದರು. ಇಂದೋರ್‌ನಲ್ಲೂ ಇದೇ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್‌ ಕಣಕ್ಕೆ ಇಳಿಯುವ ಸಾಧ್ಯತೆ ಇದ್ದು ಯಜುವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜ ಬೆಂಚ್ ಕಾಯಬೇಕಾದೀತು. ಬ್ಯಾಟ್ಸ್‌ಮನ್‌ಗಳ ಪೈಕಿ ಮನೀಷ್ ಪಾಂಡೆ ಮತ್ತು ಸಂಜು ಸ್ಯಾಮ್ಸನ್‌ಗೆ ಮತ್ತೊಮ್ಮೆ ಅವಕಾಶ ಕೈ ತಪ್ಪುವ ಸಾಧ್ಯತೆಗಳಿವೆ. ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಗೆ ಪ್ರಯೋಗಗಳನ್ನು ಮಾಡಲು ತಂಡ ಮುಂದಾಗಿದ್ದರೂ ಈ ಇಬ್ಬರು ಬ್ಯಾಟ್ಸ್‌ಮನ್‌ಗಳಿಗೆ ಸತತವಾಗಿ ಅವಕಾಶ ಕೈತಪ್ಪುತ್ತಿರುವುದು ಅಚ್ಚರಿ ಮೂಡಿಸಿದೆ.

ಜಸ್‌ಪ್ರೀತ್ ಬೂಮ್ರಾ ಮೇಲೆ ಕಣ್ಣು: ಗಾಯದಿಂದ ಚೇತರಿಸಿಕೊಂಡು ಕಣಕ್ಕೆ ಇಳಿಯಲು ಸಜ್ಜಾಗಿರುವ ವೇಗಿ ಜಸ್‌ಪ್ರೀತ್ ಬೂಮ್ರಾಗೆ ಸಾಮರ್ಥ್ಯ ಸಾಬೀತು ಮಾಡಲು ಗುವಾಹಟಿಯಲ್ಲಿ ಮಳೆ ಅಡ್ಡಿಪಡಿಸಿತ್ತು. ಇಂದೋರ್‌ನಲ್ಲಿ ಮಳೆಯ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿರುವುದರಿಂದ ಬೂಮ್ರಾ ಬಿರುಗಾಳಿ ದಾಳಿಗೆ ಸಜ್ಜಾಗಿದ್ದಾರೆ.

ಮ್ಯಾಥ್ಯೂಸ್‌ಗೆ ಸಿಗುವುದೇ ಅವಕಾಶ?: ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್‌ ಏಂಜೆಲೊ ಮ್ಯಾಥ್ಯೂಸ್‌ ಅವರನ್ನು ಗುವಾಹಟಿ ಪಂದ್ಯದಲ್ಲಿ ಆಡಿಸದೇ ಇರಲು ಶ್ರೀಲಂಕಾ ನಾಯಕ ನಿರ್ಧರಿಸಿದ್ದರು. ಆ ತಂಡ ಕೂಡ ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿತ್ತು. ಇಲ್ಲೂ ಅದೇ ತಂತ್ರಕ್ಕೆ ಮೊರೆ ಹೋದರೆ ಮ್ಯಾಥ್ಯೂಸ್ ಆಡುವುದು ಅನುಮಾನ.

ಒಂದು ದಶಕದ ಅವಧಿಯಲ್ಲಿ ಶ್ರೀಲಂಕಾ ಯಾವುದೇ ಮಾದರಿಯಲ್ಲಿ ಭಾರತದ ವಿರುದ್ಧ ಸರಣಿಯನ್ನು ಗೆದ್ದುಕೊಂಡಿಲ್ಲ. ಯುವ ಆಟಗಾರರನ್ನೇ ನೆಚ್ಚಿಕೊಂಡಿರುವ ತಂಡ ಇತ್ತೀಚೆಗೆ ನಿರೀಕ್ಷೆಗೆ ತಕ್ಕ ಸಾಧನೆ ಮಾಡುತ್ತಿಲ್ಲ. ಹೀಗಾಗಿ ಬಲಿಷ್ಠ ಭಾರತಕ್ಕೆ ಸುಲಭ ತುತ್ತಾಗುವುದೇ ಎಂದು ಕಾದುನೋಡಬೇಕಿದೆ.

ಧವನ್‌ಗೆ ‘ಶಿಖರ’ದಷ್ಟು ನಿರೀಕ್ಷೆ

ಗುವಾಹಟಿ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಹೆಚ್ಚು ನಷ್ಟವಾಗಿರುವುದು ಭಾರತ ತಂಡದ ಶಿಖರ್ ಧವನ್‌ಗೆ. ಇತ್ತೀಚೆಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗದ ಶಿಖರ್, ಸಾಮರ್ಥ್ಯ ಸಾಬೀತು ಮಾಡುವ ಅವಕಾಶವೊಂದನ್ನು ಗುವಾಹಟಿಯಲ್ಲಿ ಕಳೆದುಕೊಂಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನ ಭದ್ರಪಡಿಸಿಕೊಳ್ಳುವುದಕ್ಕಾಗಿ ಕೆ.ಎಲ್‌.ರಾಹುಲ್ ಅವರನ್ನು ಹಿಂದಿಕ್ಕಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುವ ಶಿಖರ್ ಮೇಲೆ ಈಗ ಒತ್ತಡ ಹೆಚ್ಚಾಗಿದೆ.

34 ವರ್ಷದ ಧವನ್‌ಗೆ ಹೋಲಿಸಿದರೆ 27 ವರ್ಷದ ರಾಹುಲ್ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದ್ದರಿಂದ ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಳಿಸಬೇಕಾದರೆ ಉಳಿದ ಎರಡು ಪಂದ್ಯಗಳಲ್ಲಿ ಚೆನ್ನಾಗಿ ಆಡಬೇಕಾದ ಅಗತ್ಯವಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಅವರು ಕಳೆದ ವರ್ಷ 12 ಪಂದ್ಯಗಳಿಂದ ಕೇವಲ 272 ರನ್ ಕಲೆ ಹಾಕಿದ್ದರು. ಆದರೆ ರಾಹುಲ್ ಲಭಿಸಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು