ಸೋಮವಾರ, ಮಾರ್ಚ್ 8, 2021
31 °C
ಭಾರತದ ಎದುರಿನ ಐದನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ: ಇಶಾಂತ್‌ ಶರ್ಮಾಗೆ ಮೂರು, ಜಸ್‌ಪ್ರೀತ್ ಬೂಮ್ರಾಗೆ ಎರಡು ವಿಕೆಟ್‌

ವಿದಾಯದ ಪಂದ್ಯದಲ್ಲಿ ಕುಕ್‌ ಮಿಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌: ವಿದಾಯದ ಪಂದ್ಯ ಆಡು ತ್ತಿರುವ ಅಲಸ್ಟೇರ್‌ ಕುಕ್, ಶುಕ್ರವಾರ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ತಮ್ಮ ಅಮೋಘ ಬ್ಯಾಟಿಂಗ್‌ ಮೂಲಕ ಅಭಿಮಾನಿಗಳನ್ನು ಮುದಗೊಳಿಸಿದರು.

ಕುಕ್‌ (71; 190ಎ, 8ಬೌಂ) ಅರ್ಧಶತಕ ಗಳಿಸಿದರೂ ಇಂಗ್ಲೆಂಡ್‌ ತಂಡ ಭಾರತದ ಎದುರಿನ ಐದನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಮೊದಲ ದಿನ ಉತ್ತಮ ಮೊತ್ತ ಗಳಿಸಲು ವಿಫಲವಾಗಿದೆ.

ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡಕ್ಕೆ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 7 ವಿಕೆ ಟ್‌ಗಳಿಗೆ 198 ರನ್‌ ಗಳಿಸಲಷ್ಟೇ ಸಾಧ್ಯವಾಗಿದೆ.

ಅರ್ಧಶತಕದ ಜೊತೆಯಾಟ: ಬ್ಯಾಟಿಂಗ್‌ ಆರಂಭಿಸಿದ ಆತಿಥೇಯರಿಗೆ ಕುಕ್‌ ಮತ್ತು ಕೀಟನ್‌ ಜೆನಿಂಗ್ಸ್‌ (23; 75ಎ, 2ಬೌಂ) ಭದ್ರ ಅಡಿಪಾಯ ಹಾಕಿಕೊಟ್ಟರು. ಭಾರತದ ಬೌಲರ್‌ಗಳನ್ನು ಕಾಡಿದ ಈ ಜೋಡಿ ಮೊದಲ ವಿಕೆಟ್‌ಗೆ 60ರನ್‌ ಸೇರಿಸಿತು.

24ನೇ ಓವರ್‌ ಬೌಲ್‌ ಮಾಡಿದ ರವೀಂದ್ರ ಜಡೇಜ ಮೊದಲ ಎಸೆತದಲ್ಲಿ ಜೆನಿಂಗ್ಸ್‌ ವಿಕೆಟ್‌ ಉರುಳಿಸಿದರು. ಜೆನಿಂಗ್ಸ್‌ ಬ್ಯಾಟಿನ ಅಂಚಿಗೆ ತಾಗಿದ ಚೆಂಡು ಸ್ಲಿಪ್‌ನಲ್ಲಿದ್ದ ರಾಹುಲ್‌ ಕೈಸೇರು ತ್ತಿದ್ದಂತೆ ಭಾರತದ ಪಾಳಯದಲ್ಲಿ ಸಂಭ್ರಮ ಗರಿಗೆದರಿತು.

ನಂತರ ಕುಕ್‌ ಮತ್ತು ಮೊಯಿನ್‌ ಅಲಿ (50; 170ಎ, 4ಬೌಂ) ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಹೀಗಾಗಿ ತಂಡ 46ನೇ ಓವರ್‌ನಲ್ಲಿ 100ರ ಗಡಿ ಮುಟ್ಟಿತು.

ತಾವೆದುರಿಸಿದ 139ನೇ ಎಸೆತದಲ್ಲಿ ಎರಡು ರನ್‌ ಗಳಿಸಿದ ಕುಕ್‌ ಅರ್ಧಶತಕ ಪೂರೈಸಿದರು. ಆಗ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಎದ್ದುನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

64ನೇ ಓವರ್‌ನಲ್ಲಿ ಕುಕ್‌, ಜಸ್‌ಪ್ರೀತ್‌ ಬೂಮ್ರಾಗೆ ವಿಕೆಟ್‌ ನೀಡಿದರು. ಇದರೊಂದಿಗೆ 73ರನ್‌ಗಳ ಎರಡನೇ ವಿಕೆಟ್‌ ಜೊತೆಯಾಟಕ್ಕೆ ತೆರೆ ಬಿತ್ತು.

ಸೊನ್ನೆ ಸುತ್ತಿದ ರೂಟ್‌, ಬೇಸ್ಟೊ: ಕುಕ್‌ ಔಟಾದ ನಂತರ ಇಂಗ್ಲೆಂಡ್‌ ತಂಡ ಕುಸಿತ ಕಂಡಿತು.

ನಾಯಕ ಜೋ ರೂಟ್‌ ಮತ್ತು ವಿಕೆಟ್‌ ಕೀಪರ್‌ ಜಾನಿ ಬೇಸ್ಟೊ ಸೊನ್ನೆ ಸುತ್ತಿದರು. ಇವರನ್ನು ಕ್ರಮವಾಗಿ ಬೂಮ್ರಾ ಮತ್ತು ಇಶಾಂತ್‌ ಶರ್ಮಾ ಪೆವಿಲಿಯನ್‌ಗೆ ಅಟ್ಟಿದರು. 134ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್‌ಗೆ ಮೊಯಿನ್‌ ಆಸರೆಯಾದರು. ಅವರು ಬೆನ್‌ ಸ್ಟೋಕ್ಸ್‌ (11; 40ಎ, 2ಬೌಂ) ಜೊತೆ ಐದನೇ ವಿಕೆಟ್‌ಗೆ 37ರನ್‌ ಗಳಿಸಿದರು. ಸ್ಟೋಕ್‌ ಪೆವಿಲಿಯನ್‌ ಸೇರಿದ ಬಳಿಕ ಜೋಸ್‌ ಬಟ್ಲರ್‌ (ಬ್ಯಾಟಿಂಗ್‌ 11; 31ಎ, 1ಬೌಂ) ಎಚ್ಚರಿಕೆಯ ಆಟ ಆಡಿ ತಂಡದ ಮೊತ್ತ ಹೆಚ್ಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು