ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ಗೆ ರಾಹುಲ್, ಜಡೇಜ ಅಲಭ್ಯ

Published 29 ಜನವರಿ 2024, 14:12 IST
Last Updated 29 ಜನವರಿ 2024, 14:12 IST
ಅಕ್ಷರ ಗಾತ್ರ

ಹೈದರಾಬಾದ್: ಇಂಗ್ಲೆಂಡ್ ಕೈಲಿ ಮೊದಲ ಕ್ರಿಕೆಟ್ ಟೆಸ್ಟ್‌ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿದ ಭಾರತ ತಂಡ, ಎರಡನೇ ಟೆಸ್ಟ್‌ ಆರಂಭಕ್ಕೆ ಮೊದಲೇ ದೊಡ್ಡ ಹೊಡೆತ ಕಂಡಿದೆ.

ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಬ್ಯಾಟರ್ ಕೆ.ಎಲ್‌.ರಾಹುಲ್ ಅವರು ಗಾಯಾಳಾಗಿ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಸೋಮವಾರ ಪ್ರಕಟಿಸಲಾಗಿದೆ.

ಜಡೇಜ ಅವರು ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾನುವಾರ ಒಂದು ರನ್‌ಗೆ ವೇಗವಾಗಿ ಓಡುವ ಭರದಲ್ಲಿ ಕಾಲಿನ ಸ್ನಾಯುಸೆಳೆತಕ್ಕೆ (ಹ್ಯಾಮ್‌ಸ್ಟ್ರಿಂಗ್‌) ಒಳಗಾಗಿದ್ದಾರೆ.

ರಾಹುಲ್ ಅವರಿಗೆ ಬಲ ತೊಡೆಯ ಸ್ನಾಯು (ಕ್ವಾಡ್ರಿಸೆಪ್ಸ್‌) ನೋವು ಬಾಧಿಸುತ್ತಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಐಪಿಎಲ್‌ ವೇಳೆ ಫೀಲ್ಡಿಂಗ್ ಸಂದರ್ಭದಲ್ಲಿ ಅವರು ಇದೇ ನೋವನ್ನು ಅನುಭವಿಸಿದ್ದರು ಎಂಬುದು ಚಿಂತೆಗೆ ಕಾರಣವಾಗಿದೆ. ನಂತರ ನಾಲ್ಕು ತಿಂಗಳು ಅವರು ಆಡಿಲಿರಲಿಲ್ಲ.

‘ರವೀಂದ್ರ ಜಡೇಜ ಮತ್ತು ಕೆ.ಎಲ್‌.ರಾಹುಲ್ ಅವರು ಫೆಬ್ರುವರಿ 2ರಂದು ವಿಶಾಖಪಟ್ಟಣದಲ್ಲಿ ಆರಂಭವಾಗುವ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಡುವುದಿಲ್ಲ’ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಸಿಸಿಐ ವೈದ್ಯಕೀಯ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದೂ ತಿಳಿಸಿದೆ.

ಆಯ್ಕೆ ಸಮಿತಿಯು ಮುಂಬೈನ ಬ್ಯಾಟರ್‌ ಸರ್ಫರಾಜ್ ಖಾನ್, ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.

ದೇಶಿಯ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಿದ ಸರ್ಫರಾಜ್ ಖಾನ್ ಅವರಿಗೆ ಇದು ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ‘ಎ’ ಸರಣಿಯಲ್ಲೂ ಅವರು ಯಶಸ್ಸು ಕಂಡಿದ್ದರು.

ವಿರಾಟ್‌ ಕೊಹ್ಲಿ ಐದು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ಅಲಭ್ಯರಿರುವುದಾಗಿ ಈ ಹಿಂದೆಯೇ ತಿಳಿಸಿದ್ದರು. ಈಗ ಜಡೇಜ ಮತ್ತು ರಾಹುಲ್ ಗಾಯಾಳಾಗಿರುವುದು ತಂಡಕ್ಕೆ ಕಳವಳ ಮೂಡಿಸಿದೆ. 2013ರ ನಂತರ ಟೆಸ್ಟ್‌ನಲ್ಲಿ ನಾಲ್ಕನೇ ಸೋಲು ಅನುಭವಿಸಿದ್ದೂ ತಂಡದ ಚಿಂತೆಗೆ ಕಾರಣವಾಗಿದೆ.

ಮೊದಲ ಟೆಸ್ಟ್‌ನಲ್ಲಿ ರಾಹುಲ್ ಮತ್ತು ಜಡೇಜ ಉಪಯುಕ್ತ ಕೊಡುಗೆ ನೀಡಿದ್ದರು. ಜಡೇಜ ಐದು ವಿಕೆಟ್‌ಗಳನ್ನು ಪಡೆದಿದ್ದರಲ್ಲದೇ ಮೊದಲ ಇನಿಂಗ್ಸ್‌ನಲ್ಲಿ 87 ರನ್ ಬಾರಿಸಿದ್ದರು. ರಾಹುಲ್ 86 ರನ್ ಗಳಿಸಿದ್ದರು.

ಜಡೇಜ ಅವರ ಬದಲಿಗೆ ನಾಲ್ಕು ಟೆಸ್ಟ್‌ಗಳನ್ನು ಆಡಿರುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಗಾಯದಿಂದ ಚೇತರಿಸಿ ತಂಡಕ್ಕೆ ಪುನರಾಗಮನ ಮಾಡಿದ ನಂತರ ರಾಹುಲ್ ಟೆಸ್ಟ್‌ ಹಾಗೂ ಏಕದಿನ ಮಾದರಿಗಳಲ್ಲಿ ಉತ್ತಮ ಲಯದಲ್ಲಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿಕೆಟ್‌ ಕೀಪಿಂಗ್ ಕೂಡ ಮಾಡಿದ್ದು ಅವರ ಕಾರ್ಯಭಾರ ಹೆಚ್ಚಿಸಿತ್ತು.

ಸರ್ಫರಾಜ್ ತಂಡಕ್ಕೆ ಅರ್ಹವಾಗಿ ಸೇರ್ಪಡೆ ಆಗಿದ್ದರೂ, ಈ ಮೊದಲೇ 15ರ ಬಳಗದಲ್ಲಿರುವ ರಜತ್‌ ಪಾಟೀದಾರ್ ಪದಾರ್ಪಣೆ ಮಾಡುವ ಸಾಧ್ಯತೆ ಅಧಿಕವಾಗಿದೆ. ಸುಂದರ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಕಾರಣ, ಇಂಗ್ಲೆಂಡ್ ಲಯನ್ಸ್‌ ವಿರುದ್ಧ ಗುರುವಾರ ಆರಂಭವಾಗುವ ಮೂರನೇ ಹಾಗೂ ಅಂತಿಮ  ‘ಟೆಸ್ಟ್‌’ ಪಂದ್ಯಕ್ಕೆ ಅವರ ಬದಲು ಸಾರಾಂಶ್‌ ಜೈನ್ ಅವಕಾಶ ಪಡೆದಿದ್ದಾರೆ.

‘ಆವೇಶ್ ಖಾನ್‌ (ವೇಗದ ಬೌಲರ್) ಅವರು ಮಧ್ಯ ಪ್ರದೇಶ ರಣಜಿ ತಂಡದಲ್ಲಿ ಆಡಲಿದ್ದಾರೆ. ಅಗತ್ಯ ಬಿದ್ದರೆ ಅವರು ಟೆಸ್ಟ್‌ ತಂಡಕ್ಕೆ ಸೇರ್ಪಡೆ ಆಗುವರು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2ನೇ ಟೆಸ್ಟ್‌ಗೆ ಪರಿಷ್ಕೃತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆ.ಎಸ್‌. ಭರತ್ (ವಿಕೆಟ್ ಕೀಪರ್), ಧ್ರುವ್ ಜುರೇಲ್ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್‌ಪ್ರೀತ್ ಬೂಮ್ರಾ (ಉಪ ನಾಯಕ), ರಜತ್ ಪಾಟೀದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಮತ್ತು ಸೌರಭ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT