ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಸರಣಿ ಸಮಬಲದ ಛಲ

ಕ್ರಿಕೆಟ್: ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಆತಿಥ್ಯಕ್ಕೆ ಕ್ರೈಸ್ಟ್‌ಚರ್ಚ್ ಸಿದ್ಧ
Last Updated 27 ಫೆಬ್ರುವರಿ 2020, 19:10 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಮತ್ತು ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಎರಡರಲ್ಲೂ ಅಗ್ರಸ್ಥಾನದಲ್ಲಿರುವ ಭಾರತಕ್ಕೆ ಹೋದ ವಾರ ನ್ಯೂಜಿಲೆಂಡ್ ಬಲವಾದ ಪೆಟ್ಟು ಕೊಟ್ಟಿದೆ.

ಅದಕ್ಕೆ ತಿರುಗೇಟು ನೀಡಲು ಈಗ ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಸಿದ್ಧವಾಗಿದೆ. ಶನಿವಾರ ಬೆಳಗಿನ ಜಾವ (ಭಾರತೀಯ ಕಾಲಮಾನ) ಆರಂಭವಾಗಲಿರುವ ಪಂದ್ಯದಲ್ಲಿ ಜಯಿಸಿ ಸರಣಿ ಸಮಬಲ ಮಾಡಿಕೊಳ್ಳುವ ಛಲದಲ್ಲಿದೆ. ಆದರೆ ಆತಿಥೇಯ ತಂಡವು ಈ ಪಂದ್ಯ ಡ್ರಾ ಮಾಡಿಕೊಂಡರೂ ಸರಣಿ ಗೆಲುವಿನ ಸಂಭ್ರಮ ಆಚರಿಸಬಹುದು.

ವೆಲ್ಲಿಂಗ್ಟನ್‌ನ ಬೌನ್ಸಿ ಪಿಚ್‌ನಲ್ಲಿ ಉಭಯ ತಂಡಗಳ ವೇಗದ ಬೌಲರ್‌ ಗಳು ಪಾರಮ್ಯ ಮೆರೆದಿದ್ದರು. ಅದ ರಲ್ಲೂ ಭಾರತದ ಅನುಭವಿ ವೇಗಿ ಇಶಾಂತ್ ಶರ್ಮಾ ಐದು ವಿಕೆಟ್ ಗಳಿಸಿ ಗಮನ ಸೆಳೆದಿದ್ದರು. ಆತಿಥೇಯ ತಂಡದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್‌ ಗೆಲುವಿಗೆ ಕಾರಣ
ರಾಗಿದ್ದರು.

ಆತಿಥೇಯ ಬಳಗದಲ್ಲಿ ಪದಾರ್ಪಣೆ ಮಾಡಿದ್ದ ‘ಲಂಬೂಜಿ’ ಕೈಲ್ ಜೆಮಿಸನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ್ದರು. ತಂಡದ ನಾಯಕ ಕೇನ್ ವಿಲಿಯಮ್ಸನ್ 89 ರನ್‌ಗಳನ್ನು ಹೊಡೆದು ತಂಡಕ್ಕೆ ಮಹತ್ವದ ಮುನ್ನಡೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಆದರೆ, ಭಾರತ ತಂಡದಲ್ಲಿ ಮಯಂಕ್ ಅಗರವಾಲ್ ಅವರನ್ನು ಬಿಟ್ಟರೆ ಉಳಿದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಅದರಲ್ಲೂ ಟೆಸ್ಟ್‌ ಪರಿಣತ ಚೇತೇಶ್ವರ್ ಪೂಜಾರ ಮತ್ತು ‘ರನ್‌ ಯಂತ್ರ’ ವಿರಾಟ್ ಕೊಹ್ಲಿ ಅವರ ವೈಫಲ್ಯವು ತಂಡದ ಹಿನ್ನಡೆಗೆ ಕಾರಣವಾಗಿತ್ತು.

ಪೃಥ್ವಿ ಶಾ ತಮಗೆ ಲಭಿಸಿದ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಎಡವಿದರು. ಗುರುವಾರ ಅವರು ಕಾಲುನೋವು ಮತ್ತು ಊತದ ಪರಿಣಾಮ ಅಭ್ಯಾಸ ಮಾಡಲಿಲ್ಲ. ಆದ್ದರಿಂದ ಅವರು ಎರಡನೇ ಪಂದ್ಯದಲ್ಲಿ ಆಡುವ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಒಂದೊಮ್ಮೆ ಅವರು ಕಣಕ್ಕಿಳಿಯದಿದ್ದರೆ ಶುಭಮನ್ ಗಿಲ್‌ ಪದಾರ್ಪಣೆ ಮಾಡಬಹುದು.

ಮಧ್ಯಮಕ್ರಮಾಂಕದಲ್ಲಿ ಹನುಮ ವಿಹಾರಿ, ರಿಷಭ್ ಪಂತ್ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಅಜಿಂಕ್ಯ ರಹಾನೆ ಪರವಾಗಿಲ್ಲ. ಆದರೆ ದೊಡ್ಡ ಇನಿಂಗ್ಸ್‌ ಕಟ್ಟುವ ಹೊಣೆಯನ್ನು ಅವರು ನಿಭಾಯಿಸಿದರೆ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗುತ್ತದೆ.

‘ಕಿವೀಸ್ ಬೌಲರ್‌ಗಳು ಉತ್ತಮ ಲೈನ್ ಮತ್ತು ಲೆಂಗ್ತ್‌ನಲ್ಲಿ ಎಸೆತಗಳನ್ನು ಪ್ರಯೋಗಿಸಿದ್ದರು. ಕ್ರೀಸ್‌ನ ಎರಡೂ ಆ್ಯಂಗಲ್ ಮತ್ತು ಮಧ್ಯಕ್ಕೆ ಚೆಂಡನ್ನು ಹೆಚ್ಚು ಚಾಣಾಕ್ಷತೆಯಿಂದ ಹಾಕಿದ್ದರು. ಅಲ್ಲದೇ ಶಾರ್ಟ್‌ ಪಿಚ್ ಎಸೆತಗಳಲ್ಲಿಯೂ ವಿಭಿನ್ನ ಆ್ಯಂಗಲ್‌ಗಳನ್ನು ಪ್ರಯೋಗಿಸಿದ್ದರು. ಅದನ್ನು ತಾಳ್ಮೆಯಿಂದ ಎದುರಿಸಬೇಕು’ ಎಂದು ಅಜಿಂಕ್ಯ ರಹಾನೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಆದರೆ ಪ್ರಮುಖ ಬೌಲರ್‌ ಜಸ್‌ಪ್ರೀತ್ ಬೂಮ್ರಾ ಇನ್ನೂ ಲಯಕ್ಕೆ ಮರಳದಿರುವುದು ತಂಡದ ಒತ್ತಡ ಹೆಚ್ಚಿಸಿದೆ. ಪಂದ್ಯ ನಡೆಯಲಿರುವ ಹೇಗ್ಲಿ ಓವಲ್‌ನ ಪಿಚ್‌ ವೇಗಿಗಳಿಗೆ ಹೆಚ್ಚು ನೆರವು ನೀಡುವ ಲಕ್ಷಣಗಳಿವೆ. ಆದ್ದರಿಂದ ನಾಲ್ಕನೇ ಮಧ್ಯಮವೇಗಿಯಾಗಿ ನವದೀಪ್ ಸೈನಿಯನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಅಲ್ಲದೇ ಆಫ್‌ಸ್ಪಿನ್ನರ್ ಆರ್. ಆಶ್ವಿನ್‌ಗೂ ವಿಶ್ರಾಂತಿ ಕೊಟ್ಟು ರವೀಂದ್ರ ಜಡೇಜ ಆಡಬಹುದು.

ಪಂದ್ಯ ಆರಂಭ: ಬೆಳಿಗ್ಗೆ 4 (ಶನಿವಾರ), ನೇರಪ್ರಸಾರ: ಸ್ಟಾರ್‌ ಸ್ಫೊರ್ಟ್ಸ್‌ ನೆಟ್‌ವರ್ಕ್.

ನಾನು ಪಿಚ್‌ ಅನ್ನು ನೋಡಲು ಹೋಗುವುದಿಲ್ಲ. ವೆಲ್ಲಿಂಗ್ಟನ್‌ನಲ್ಲಿ ನಾವು ನಿರೀಕ್ಷಿಸಿದ್ದ ರೀತಿಯ ಪಿಚ್ ಇತ್ತು. ಇಲ್ಲಿಯೂ ಹಾಗೇ ಆಗಬಹುದು.
ಅಜಿಂಕ್ಯ ರಹಾನೆ ಭಾರತ ತಂಡದ ಉಪನಾಯಕ

ಕೊಹ್ಲಿ ತಿರುಗೇಟು ನೀಡಲು ಕಾತರಿಸುತ್ತಿರಬಹುದು. ಆದರೆ ಅವರನ್ನು ನಿಯಂತ್ರಿಸಲು ಸೂಕ್ತ ಯೋಜನೆಯೊಂದಿಗೆ ಕಣಕ್ಕಿಳಿಯಲಿದ್ದೇವೆ.
ಟಾಮ್ ಲಥಾಮ್
ನ್ಯೂಜಿಲೆಂಡ್ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT