ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಟಿ20 ಕ್ರಿಕೆಟ್ ಸರಣಿ | ಭಾರತ–ಇಂಗ್ಲೆಂಡ್‌ ಪೈಪೋಟಿ

Published 5 ಡಿಸೆಂಬರ್ 2023, 23:30 IST
Last Updated 5 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಮುಂಬೈ: ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗಳಲ್ಲಿ ಭಾರತ ಮಹಿಳಾ ತಂಡದ ಪ್ರದರ್ಶನ ನಿರಾಶಾದಾಯಕವಾಗಿದೆ. ಆದರೆ ಇತ್ತೀಚಿನ ವಿವಿಧ ಟೂರ್ನಿಗಳಲ್ಲಿ ಭಾರತದ ಆಟಗಾರ್ತಿಯರು ಸುಧಾರಿತ ಪ್ರದರ್ಶನ ನೀಡಿದ್ದಾರೆ. ಆ ಆತ್ಮವಿಶ್ವಾಸದಿಂದ ಬುಧವಾರ ಇಂಗ್ಲೆಂಡ್‌ ವಿರುದ್ಧ ಆರಂಭವಾಗುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಕಣಕ್ಕಿಳಿಯಲಿದೆ.

ಈ ವರ್ಷ ಚುಟುಕು ಕ್ರಿಕೆಟ್‌ ಸರಣಿಯಲ್ಲಿ ಹರ್ಮನ್‌ಪ್ರೀತ್ ಕೌರ್‌ ಬಳಗ ಯಶಸ್ಸು ಕಂಡಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಕೊರಳಿಗೆ ಹಾಕಿಕೊಂಡಿದೆ. ಬಾಂಗ್ಲಾದೇಶ ತಂಡವನ್ನು ಅದರ ತವರಿನಲ್ಲಿ 2–1 ರಿಂದ ಸೋಲಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ (ವೆಸ್ಟ್‌ ಇಂಡೀಸ್ ಇನ್ನೊಂದು ತಂಡ) ಫೈನಲ್ ತಲುಪಿದೆ. ಇನ್ನೊಂದೆಡೆ ವಿಶ್ವದ ಎರಡನೇ ಕ್ರಮಾಂಕದ ಇಂಗ್ಲೆಂಡ್‌ ತವರಿನಲ್ಲಿ ಶ್ರಿಲಂಕಾ ಎದುರಿನ ಸರಣಿಯಲ್ಲಿ 1–2 ರಲ್ಲಿ ಅನಿರೀಕ್ಷಿತ ಸೋಲನ್ನು ಕಂಡಿದೆ.

ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ತಂಡ ತವರಿನಲ್ಲಿ ಇಂಗ್ಲೆಂಡ್‌ ಎದುರು ಉತ್ತಮ ದಾಖಲೆ ಹೊಂದಿಲ್ಲ. ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಆಡಿರುವ 9 ಪಂದ್ಯಗಳಲ್ಲಿ ಭಾರತ ಗೆದ್ದಿರುವುದು ಎರಡು ಮಾತ್ರ. ಕೊನೆಯ ಬಾರಿ ಜಯಗಳಿಸಿದ್ದು 2018ರಷ್ಟು (ಮಾರ್ಚ್‌) ಹಿಂದೆ.

ಒಟ್ಟಾರೆ ಈ ತಂಡಗಳು 27 ಬಾರಿ ಮುಖಾಮುಖಿ ಆಗಿದ್ದು, ಭಾರತ ಏಳು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಸಾಲದ್ದಕ್ಕೆ ಭಾರತ ಲಖನೌದಲ್ಲಿ ದಕ್ಷಿಣ ಆಫ್ರಿಕಾ ಎದುರು (2021ರ ಮಾರ್ಚ್‌) ಗೆದ್ದ ನಂತರ ತವರಿನಲ್ಲಿ ಒಂದೂ ಟಿ–20 ಪಂದ್ಯ ಗೆದ್ದಿಲ್ಲ. ಈಗ ಇದನ್ನೆಲ್ಲಾ ಮರೆತು ಸುಧಾರಿತ ಪ್ರದರ್ಶನ ನೀಡುವ ಅವಕಾಶ ಭಾರತಕ್ಕೆ ಒದಗಿದೆ.

ಆತಿಥೇಯ ಬೌಲರ್‌ಗಳ ಪೈಕಿ ದೀಪ್ತಿ ಶರ್ಮಾ 16 ಪಂದ್ಯಗಳಿಂದ 19 ವಿಕೆಟ್‌ಗಳನ್ನು ಪಡೆದಿದ್ದು, ಯಶಸ್ವಿ ಬೌಲರ್ ಎನಿಸಿದ್ದಾರೆ. ಆದರೆ ಬ್ಯಾಟರ್‌ಗಳ ಪ್ರದರ್ಶನ ಚೆನ್ನಾಗಿಯೇ ಇದೆ. ಹರ್ಮನ್‌ಪ್ರೀತ್‌, ಜೆಮಿಮಾ ರೋಡ್ರಿಗಸ್‌, ಉಪನಾಯಕಿ ಸ್ಮೃತಿ ಮಂಧಾನಾ ವಿವಿಧ ಟೂರ್ನಿ, ಲೀಗ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ ಮೂರು ಹೊಸಮುಖಗಳಿಗೆ ಅವಕಾಶ ನೀಡಿದೆ. ಕರ್ನಾಟಕದ ಆಫ್‌ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ, ಎಡಗೈ ಸ್ಪಿನ್ನರ್‌ಗಳಾದ ಮನ್ನತ್‌ ಕಶ್ಯಪ್ (ಪಂಜಾಬ್‌) ಮತ್ತು ಸೈಕಾ ಇಶಾಖ್ (ಬಂಗಾಳ) ಈ ಮೂವರು.

ಶ್ರೇಯಾಂಕಾ ಅವರು ಡಬ್ಲ್ಯುಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಮಹಿಳಾ ಕೆರಿಬಿಯನ್‌ ಲೀಗ್‌ನಲ್ಲಿ ಆಡಿದ ಭಾರತದ ಮೊದಲ ಆಟಗಾರ್ತಿ ಎನಿಸಿರುವ ಶ್ರೇಯಾಂಕಾ ಅಲ್ಲಿ ಐದು ಪಂದ್ಯಗಳಿಂದ 9 ವಿಕೆಟ್‌ ಕಬಳಿಸಿದ್ದಾರೆ.

ಇಂಗ್ಲೆಂಡ್ ಪರ ಅನುಭವಿ ಆಲ್‌ರೌಂಡರ್‌ ನಾಟ್ ಶಿವರ್ ಬ್ರಂಟ್ಸ್ ಅವರು ಯಾವುದೇ ತಂಡಕ್ಕೆ ತಲೆನೋವಾಗಬಲ್ಲ ಆಟಗಾರ್ತಿ. ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.  ಡಬ್ಲ್ಯುಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ 332 ರನ್ ಜೊತೆಗೆ 10 ವಿಕೆಟ್‌ ಗಳಿಸಿದ್ದಾರೆ.

ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ರಾತ್ರಿ 7 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT