ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬ ಆರ್‌ಸಿಬಿ ಆಟಗಾರನಿಗೆ ಕೋವಿಡ್‌ ದೃಢ; ಪಡಿಕ್ಕಲ್ ಗುಣಮುಖ

Last Updated 7 ಏಪ್ರಿಲ್ 2021, 10:34 IST
ಅಕ್ಷರ ಗಾತ್ರ

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಲ್‌ರೌಂಡರ್ ಡ್ಯಾನಿಯಲ್ ಸ್ಯಾಮ್ಸ್ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ಕೋವಿಡ್‌ ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಏತನ್ಮಧ್ಯೆ ಎಡಗೈ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಆರ್‌ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ.

ಆರ್‌ಸಿಬಿ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, 28ರ ಹರೆಯದ ಆಲ್‌ರೌಂಡರ್ ಡ್ಯಾನಿಯಲ್ ಸ್ಯಾಮ್ಸ್ ಏಪ್ರಿಲ್ 3ರಂದು ಭಾರತಕ್ಕೆ ಆಗಮಿಸಿದ್ದರು. ಆಗ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಬಳಿಕ ಏಪ್ರಿಲ್ 7ರಂದು ನಡೆಸಿದ ಎರಡನೇ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಅವರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಪ್ರಸ್ತುತ ವೈದ್ಯಕೀಯ ನಿಗಾದೊಂದಿಗೆಪ್ರತ್ಯೇಕವಾಸದಲ್ಲಿದ್ದಾರೆ ಎಂದು ತಿಳಿಸಿದೆ.

ಆರ್‌ಸಿಬಿ ವೈದ್ಯಕೀಯ ತಂಡವು ಡ್ಯಾನಿಯಲ್ ಸ್ಯಾಮ್ಸ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬಿಸಿಸಿಐ ಮಾರ್ಗಸೂಚಿಗಳಿಗೆ ಅನುಸಾರವಾಗಿ ಅವರ ಆರೋಗ್ಯ ಸ್ಥಿತಿಯನ್ನು ನಿಗಾ ವಹಿಸುತ್ತಿದೆ ಎಂದು ತಿಳಿಸಿದೆ.

ಐಪಿಎಲ್ 2021ನೇ ಆವೃತ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಸ್ಯಾಮ್ಸ್ ಅವರನ್ನು ವಿನಿಮಯ ಮಾಡಿಕೊಳ್ಳಲಾಗಿತ್ತು. ಅಲ್ಲದೆ ದೇವದತ್ ಪಡಿಕ್ಕಲ್ ಬಳಿಕ ಕೊರೊನಾ ಸೋಂಕಿಗೊಳಗಾದ ಆರ್‌ಸಿಬಿಯ ಎರಡನೇ ಆಟಗಾರ ಎಂದೆನಿಸಿದ್ದಾರೆ.

ಇದಕ್ಕೂ ಮೊದಲು ದೇವದತ್ ಪಡಿಕ್ಕಲ್ ಅವರಿಗೂ ಕೋವಿಡ್ ಸೋಂಕು ತಗುಲಿತ್ತು. ಆದರೆ ಶುಭ ಸುದ್ದಿಯೆಂಬಂತೆ ಕೊನೆಯ ಸುತ್ತಿನ ಪರೀಕ್ಷೆಯಲ್ಲಿ ಪಡಿಕ್ಕಲ್‌ ಅವರಿಗೆ ನೆಗೆಟಿವ್ ಫಲಿತಾಂಶ ದಾಖಲಾಗಿದೆ.

20ರ ಹರೆಯದ ಪಡಿಕ್ಕಲ್,ಮಾರ್ಚ್ 22ರಿಂದ ಹೋಮ್ ಕ್ವಾರಂಟೈನ್‌ನಲ್ಲಿದ್ದರು. ಕಳೆದ ವರ್ಷ ಪದಾರ್ಪಣೆಸೀಸನ್‌ನಲ್ಲಿ ಆಡಿದ 15 ಪಂದ್ಯಗಳಲ್ಲಿ 473 ರನ್ ಕಲೆ ಹಾಕಿ ಗಮನ ಸೆಳೆದಿದ್ದರು.

ಬಿಸಿಸಿಐ ಮಾರ್ಗಸೂಚಿಯಂತೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್‌ನೊಂದಿಗೆ ಇಂದು (ಏಪ್ರಿಲ್ 7) ಪಡಿಕ್ಕಲ್, ಆರ್‌ಸಿಬಿ ಶಿಬಿರವನ್ನು ಸೇರಿಕೊಂಡಿದ್ದಾರೆ. ಪಡಿಕ್ಕಲ್ ಆರೋಗ್ಯ ಸ್ಥಿತಿ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆರ್‌ಸಿಬಿ ವೈದ್ಯಕೀಯ ತಂಡವು ನಿರಂತರ ಸಂಪರ್ಕದಲ್ಲಿತ್ತು ಎಂದು ಮಗದೊಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅತ್ತ ಕಳೆದ ವರ್ಷ ಐಪಿಎಲ್‌ನಲ್ಲಿ ಡೆಬ್ಯು ಮಾಡಿರುವ ಸ್ಯಾಮ್ಸ್, ಡೆಲ್ಲಿ ಪರ ಮೂರು ಪಂದ್ಯಗಳನ್ನು ಆಡಿದ್ದರು.

ಒಟ್ಟಿನಲ್ಲಿ ಐಪಿಎಲ್ ಆರಂಭಕ್ಕೂ ಮುನ್ನ ಆಟಗಾರರು ಹಾಗೂ ಮೈದಾನದ ಸಹಾಯಕ ಸಿಬ್ಬಂದಿಗಳಲ್ಲಿ ಕೋವಿಂಡ್ ಸೋಂಕು ತಗುಲಿರುವುದು ಕಳವಳಕ್ಕೆ ಕಾರಣವಾಗಿದೆ.

ಏಪ್ರಿಲ್ 9 ಶುಕ್ರವಾರಂದು ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT