ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024: ಬೆಂಗಳೂರಿಗೆ ‘ರಾಯಲ್ಸ್’ ಚಾಲೆಂಜ್

ಜೈಪುರದಲ್ಲಿ ಆರ್‌ಸಿಬಿಗೆ ರಾಜಸ್ಥಾನ ತಂಡದ ಸವಾಲು; ರಿಯಾನ್, ವಿರಾಟ್ ಬ್ಯಾಟಿಂಗ್ ಪೈಪೋಟಿ
Published 6 ಏಪ್ರಿಲ್ 2024, 0:14 IST
Last Updated 6 ಏಪ್ರಿಲ್ 2024, 0:14 IST
ಅಕ್ಷರ ಗಾತ್ರ

ಜೈಪುರ: ಗೆಲುವಿಗಾಗಿ ಹಪಹಪಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ‘ಯಥಾಪ್ರಕಾರ’ ತನ್ನ ಹಳೆಯ ದೌರ್ಬಲ್ಯಗಳೊಂದಿಗೆ ಶನಿವಾರ ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿಯಲಿದೆ. 

ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಗೆದ್ದು ಆತ್ವವಿಶ್ವಾಸದ ಆಗಸದಲ್ಲಿರುವ ರಾಜಸ್ಥಾನ ತಂಡವು ತವರಿನಂಗಳದಲ್ಲಿ ಮೇಲುಗೈ ಸಾಧಿಸುವ ಛಲದಲ್ಲಿದೆ. ಆದರೆ ಫಫ್ ಡುಪ್ಲೆಸಿ ಬಳಗವು ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿದೆ. 

ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ ಉಳಿದವರಿಂದ ಸ್ಥಿರ ಪ್ರದರ್ಶನವಿಲ್ಲ. ಅದರಲ್ಲೂ ಆರ್‌ಸಿಬಿಯು ಬ್ಯಾಟಿಂಗ್‌ನಲ್ಲಿ  ವಿರಾಟ್ ಬಿಟ್ಟರೆ ಡುಪ್ಲೆಸಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ.  ವಿರಾಟ್ ಒಬ್ಬರೇ ಆರೇಂಜ್ ಕ್ಯಾಪ್ ಧರಿಸುವಷ್ಟು ರನ್ ಕಲೆಹಾಕಿದ್ದಾರೆ. ಫಫ್ ಲಯ ಕಂಡುಕೊಂಡಿಲ್ಲ. ಮ್ಯಾಕ್ಸ್‌ವೆಲ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ.  ದಿನೇಶ್ ಕೊನೆಯ ಹಂತದಲ್ಲಿ ಒಂದಿಷ್ಟು ರನ್‌ ಗಳಿಸುತ್ತಿರುವುದು ಸಮಾಧಾನಕರ. ಅದರೆ ಯುವ ಪ್ರತಿಭೆ ರಜತ್ ಪಾಟೀದಾರ್, ಅನುಜ್ ರಾವತ್ ಅವರು ನಿರಾಶೆ ಮೂಡಿಸುತ್ತಿದ್ದಾರೆ.

ರಾಯಲ್ಸ್ ತಂಡದಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ನಾಂದ್ರೆ ಬರ್ಗರ್, ಟ್ರೆಂಟ್ ಬೌಲ್ಟ್, ಡೆತ್ ಓವರ್‌ ಪರಿಣತ ಆವೇಶ್ ಖಾನ್ ಅವರನ್ನು ಎದುರಿಸಿ ನಿಲ್ಲಬೇಕಾದ ಸವಾಲು ಬೆಂಗಳೂರು ಬ್ಯಾಟರ್‌ಗಳ ಮುಂದಿದೆ. 

ತಂಡದ ಬೌಲಿಂಗ್‌ ವಿಭಾಗವಂತೂ ಮೊದಲಿನಿಂದಲೂ ದುರ್ಬಲವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಬೌಲರ್‌ಗಳ ಪ್ರದರ್ಶನ ಹೇಳಿಕೊಳ್ಳುವಂತೆ ಇರಲಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದ ಸ್ಥಳೀಯ ವೈಶಾಖ ವಿಜಯಕುಮಾರ್ ಅವರಿಗೆ ಒಂದೇ ಪಂದ್ಯದಲ್ಲಿ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರು ಚೆನ್ನಾಗಿ ಬೌಲಿಂಗ್ ಮಾಡಿದ್ದರು. ಆದರೆ ನಂತರದ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಿಲ್ಲ. 

ಮೊದಲ ಮೂರು ಪಂದ್ಯಗಳಲ್ಲಿ ವಿಫಲರಾದ ಅಲ್ಜರಿ ಜೋಸೆಫ್ ಅವರನ್ನು ಕಳೆದ ಪಂದ್ಯದಲ್ಲಿ ಬದಲಿಸಿ ರೀಸ್ ಟಾಪ್ಲಿಯನ್ನು ಆಡಿಸಲಾಯಿತು. ಆದರೆ  ಪ್ರಯೋಜನವಾಗಲಿಲ್ಲ. ಅನುಭವಿ ಸಿರಾಜ್, ಯಶ್ ದಯಾಳ್ ಕೂಡ ಪರಿಣಾಮ ಬೀರುತ್ತಿಲ್ಲ. ಸ್ಪಿನ್ ವಿಭಾಗದಲ್ಲಿ ಮ್ಯಾಕ್ಸ್‌ವೆಲ್ ಒಬ್ಬರೇ ಪರವಾಗಿಲ್ಲ. 

ಆದರೆ ರಾಜಸ್ಥಾನ ತಂಡದ ಬ್ಯಾಟಿಂಗ್ ವಿಭಾಗ ಬಲಾಢ್ಯವಾಗಿದೆ. ಅದರಲ್ಲೂ ಅಸ್ಸಾಂ ಹುಡುಗ ರಿಯಾನ್ ಪರಾಗ್ ಅವರನ್ನು ಕಟ್ಟಿಹಾಕುವುದೇ ದೊಡ್ಡ ಸವಾಲು. ನಾಲ್ಕನೇ ಕ್ರಮಾಂಕದಲ್ಲಿ ಬಂದು ಪಂದ್ಯ ಗೆಲ್ಲಿಸಿಕೊಡಬಲ್ಲ ಚತುರ ಬ್ಯಾಟರ್ ರಿಯಾನ್. ಕಳೆದೆರಡೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಅವರ ಸತತ ವೈಫಲ್ಯವನ್ನು ರಿಯಾನ್ ಸರಿದೂಗಿಸಿದ್ದಾರೆ. ನಾಯಕ ಸಂಜು ಸ್ಯಾಮ್ಸನ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಿಂಚಿದ್ದರು.  ಆಲ್‌ರೌಂಡರ್ ಆರ್. ಅಶ್ವಿನ್, ಶುಭಂ ದುಬೆ ಅವರು ಲಯಕ್ಕೆ ಮರಳಿದರೆ ತಂಡದ ಬಲ ಹೆಚ್ಚುವುದು ಖಚಿತ. 

ಆದರೆ ಹೋದ ಆವೃತ್ತಿಯಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾದಾಗಲೂ ಆರ್‌ಸಿಬಿಯೇ ಗೆದ್ದಿತ್ತು. 

ಪಿಚ್ ಹೇಗಿದೆ?

ಸವಾಯಿ ಮಾನಸಿಂಗ್ ಕ್ರೀಡಾಂಗಣದ ಪಿಚ್ ರನ್‌ ಗಳಿಕೆಗೆ ಸೂಕ್ತವಾಗಿದೆ. ಈ ಟೂರ್ನಿಯಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು 180 ರನ್‌ಗಳಿಗಿಂತ ಹೆಚ್ಚಿನ ಮೊತ್ತ ಗಳಿಸಿವೆ. ಆದ್ದರಿಂದ ಟಾಸ್ ಗೆದ್ದ ತಂಡವು ತೆಗೆದುಕೊಳ್ಳುವ ನಿರ್ಧಾರವೂ ಇಲ್ಲಿ ಮಹತ್ವದ್ದಾಗಲಿದೆ.

ಬಲಾಬಲ

ಪಂದ್ಯ;30

ಆರ್‌ಸಿಬಿ ಜಯ;15

ರಾಜಸ್ಥಾನ ಜಯ;12

ಫಲಿತಾಂಶವಿಲ್ಲ;3

ಬ್ಯಾಟಿಂಗ್ ಬಲಾಬಲ (ಈ ಟೂರ್ನಿ)

ವಿರಾಟ್ ಕೊಹ್ಲಿ(ಆರ್‌ಸಿಬಿ)

ಪಂದ್ಯ;4

ರನ್;203

ಶ್ರೇಷ್ಠ;83

ಅರ್ಧಶತಕ;2

ಸ್ಟ್ರೈಕ್‌ರೇಟ್; 140.97

ರಿಯಾನ್ ಪರಾಗ್ (ಆರ್‌ಆರ್‌)

ಪಂದ್ಯ;3

ರನ್;181

ಶ್ರೇಷ್ಠ;84

ಅರ್ಧಶತಕ; 2

ಸ್ಟ್ರೈಕ್‌ರೇಟ್; 160.18

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಟಿವಿ, ಜಿಯೊ ಸಿನಿಮಾ ಆ್ಯಪ್

ಕ್ಯಾಚಿಂಗ್ ಅಭ್ಯಾಸದಲ್ಲಿ ವಿರಾಟ್ ಕೊಹ್ಲಿ

ಕ್ಯಾಚಿಂಗ್ ಅಭ್ಯಾಸದಲ್ಲಿ ವಿರಾಟ್ ಕೊಹ್ಲಿ 

–ಪಿಟಿಐ ಚಿತ್ರ

ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಜಯಿಸಿರುವ ಆರ್‌ಸಿಬಿ ಆಡಿದ ಎಲ್ಲ ಮೂರು ಪಂದ್ಯಗಳಲ್ಲಿ ಗೆದ್ದಿರುವ ರಾಜಸ್ಥಾನ ರಾಯಲ್ಸ್ ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿರುವ ರಿಯಾನ್ ಪರಾಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT