ಬುಧವಾರ, ಜೂಲೈ 8, 2020
27 °C
ಐಸಿಸಿ ಟೆಲಿ ಕಾನ್ಫರೆನ್ಸ್‌ ಸಭೆ ಇಂದು: ಕ್ರಿಕೆಟ್ ವೇಳಾಪಟ್ಟಿ ಪರಿಷ್ಕರಣೆ ಕುರಿತು ಚರ್ಚೆ ಸಾಧ್ಯತೆ

2022ಕ್ಕೆ ಟಿ20 ವಿಶ್ವಕಪ್; ಅಕ್ಟೋಬರ್‌ನಲ್ಲಿ ಐಪಿಎಲ್‌ಗೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗುರುವಾರ ನಡೆಯಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಈ ವರ್ಷದ ಟಿ20 ವಿಶ್ವಕಪ್ ಟೂರ್ನಿಯು ಎರಡು ವರ್ಷ ಮುಂದೂಡುವ ಸಾಧ್ಯತೆ ಇದೆ. ಇದರಿಂದಾಗಿ ಇದೇ ಅಕ್ಟೋಬರ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸುವ ಅವಕಾಶ ಭಾರತಕ್ಕೆ ಸಿಗಬಹುದು.

ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯು ಟೆಲಿ ಕಾನ್ಫರೆನ್ಸ್‌ ಮೂಲಕ ನಡೆಸಲಾಗುತ್ತಿದೆ.

ಕೊರೊನಾ ವೈರಸ್‌ ಸೋಂಕಿನಿಂದಾಗಿ ವಿಶ್ವದ ಬಹಳಷ್ಟು ದೇಶಗಳಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಇದರಿಂದಾಗಿ ಕಳೆದ ಎರಡೂವರೆ ತಿಂಗಳುಗಳಿಂದ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸದ್ಯದ ವೇಳಾಪಟ್ಟಿಯಂತೆ ಅಕ್ಟೋಬರ್‌–ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಬೇಕು. ಆದರೆ ವಿಮಾನಯಾನ ಸ್ಥಗಿತವಾಗಿದ್ದು, ಸೋಂಕು ಕೂಡ ಉಲ್ಬಣಿಸುತ್ತಿರುವುದರಿಂದ ಟೂರ್ನಿ ಮುಂದೂಡುವ ಸಾಧ್ಯತೆಗಳೇ ಹೆಚ್ಚಾಗಿವೆ. ಐಪಿಎಲ್ ಮತ್ತು ದ್ವಿಪಕ್ಷೀಯ ಸರಣಿಗಳ  ಆಯೋಜನೆಗೆ ಹೆಚ್ಚು ಒತ್ತು ಕೊಡುವ ಬಗ್ಗೆಯೂ ಚರ್ಚೆ ನಡೆಯಬಹುದು.

‘ಸಭೆಯಲ್ಲಿ ವಿಶ್ವಕಪ್ ಮುಂದೂಡುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ಅದನ್ನು ಅಧಿಕೃತವಾಗಿ ಘೋಷಿಸುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ಪರಿಸ್ಥಿತಿಯಲ್ಲಿ ವಿಶ್ವಕಪ್ ಟೂರ್ನಿ ನಡೆಸುವ ಸಾಧ್ಯತೆಗಳು ಕ್ಷೀಣವಾಗಿವೆ. ಮುಂದೂಡಿಕೆಯಾದರೆ ಆದ್ದರಿಂದ ಕ್ರಿಕೆಟ್ ಆಸ್ಟ್ರೇಲಿಯಾ ಅಥವಾ ಇನ್ನಿತರ ಪ್ರಮುಖ ಮಂಡಳಿಗಳು ಹೆಚ್ಚು ತಲೆ ಕೆಡಿಸಿಕೊಳ್ಳಲಿಕ್ಕಿಲ್ಲ’ ಎಂದು ಐಸಿಸಿ ಸದಸ್ಯರೊಬ್ಬರು ತಿಳಿಸಿದ್ದಾರೆ.

‘ಆದರೆ, ಇಲ್ಲಿ ಕೆಲವು ಪ್ರಶ್ನೆಗಳೂ ಉಳಿಯುತ್ತವೆ. ಐಪಿಎಲ್ ಮತ್ತು ಟಿ20 ವಿಶ್ವಕಪ್ ಎರಡಕ್ಕೂ ಸ್ಟಾರ್ ಸ್ಪೋರ್ಟ್ಸ್‌ ಅಧಿಕೃತ ಪ್ರಸಾರ ಸಂಸ್ಥೆಯಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಐಪಿಎಲ್ ಮತ್ತು ಮುಂದಿನ ವರ್ಷದ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಫೆಬ್ರುವರಿ–ಮಾರ್ಚ್‌ನಲ್ಲಿ ನಡೆಸಿದರೆ ಪ್ರಾಯೋಜಕತ್ವದ ತೊಂದರೆಯಾಗುವುದಿಲ್ಲವೇ ಎಂಬುದು ಪ್ರಮುಖ ಸವಾಲು. ಏಕೆಂದರೆ ಮುಂದಿನ ವರ್ಷದ  ಏಪ್ರಿಲ್‌ನಲ್ಲಿ ಐಪಿಎಲ್ ಕೂಡ ಇರುತ್ತದೆ’ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ನವೆಂಬರ್‌ ಅಂತ್ಯದಲ್ಲಿ ಐದು ಪಂದ್ಯಗಳ ಸರಣಿ ಆಡಲು ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಹೋಗುವುದು ಬಹುತೇಕ ಖಚಿತ. ಇಂಗ್ಲೆಂಡ್ ತಂಡವು ಭಾರತ ಪ್ರವಾಸ ಮಾಡುವ ಸಾಧ್ಯತೆಯೂ ಇದೆ. ದಕ್ಷಿಣ ಆಫ್ರಿಕಾ  ಎದುರಿನ ಟಿ20 ಸರಣಿಯ ಬಗ್ಗೆಯ ಅಲ್ಲಿಯ ಕ್ರಿಕೆಟ್ ಮಂಡಳಿಯು ನಿರ್ಧರಿಸಬೇಕು’ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಚೆಂಡಿನ ಹೊಳಪು ಕಾಪಾಡಿಕೊಳ್ಳಲು ಎಂಜಲು ಬಳಕೆಯ ನಿಷೇಧದ ಕುರಿತು ಕೂಡ ಈ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು