ಕ್ರಿಕೆಟ್: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯ; ಭಾರತಕ್ಕೆ ಅಲ್ಪ ಹಿನ್ನಡೆ

7
ಹನುಮವಿಹಾರಿ–ಜಡೇಜ ಅರ್ಧಶತಕ

ಕ್ರಿಕೆಟ್: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯ; ಭಾರತಕ್ಕೆ ಅಲ್ಪ ಹಿನ್ನಡೆ

Published:
Updated:

ಲಂಡನ್: ಪದಾರ್ಪಣೆಯ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಹನುಮವಿಹಾರಿ ಮತ್ತು  ಕೆಳಕ್ರಮಾಂಕದಲ್ಲಿ ಆಮೋಘ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜ ಆವರು ಇಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಭಾರತ ತಂಡವು ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಹಿನ್ನಡೆ ಅನುಭವಿಸುವುದನ್ನು ತಪ್ಪಿಸಿದರು.

ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 332 ರನ್‌ಗಳಿಗೆ ಉತ್ತರವಾಗಿ ಭಾರತ ತಂಡವು 95 ಓವರ್‌ಗಳಲ್ಲಿ 292 ರನ್‌ ಗಳಿಸಿತು. 40 ರನ್‌ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್ ತಂಡವು ಪತ್ರಿಕೆಯು ಮುದ್ರಣಕ್ಕೆ ಹೋಗುವ ವೇಳೆಗೆ 24.3 ಓವರ್‌ಗಳಲ್ಲಿ 1 ವಿಕೆಟ್‌ಗೆ 55 ರನ್‌ ಗಳಿಸಿತ್ತು.

ಶನಿವಾರ ದಿನದಾಟದ ಅಂತ್ಯಕ್ಕೆ ಭಾರತ ತಂಡವು 6 ವಿಕೆಟ್‌ಗಳಿಗೆ 160 ರನ್‌ ಗಳಿಸಿತ್ತು.  ಭಾನುವಾರ ಬೆಳಿಗ್ಗೆ ಆಟ ಮುಂದುವರಿಸಿದ ಹನುಮವಿಹಾರಿ (56; 124ಎಸೆತ, 7ಬೌಂಡರಿ, 1ಸಿಕ್ಸರ್) ಅವರು ತಾಳ್ಮೆಯಿಂದ ಆಡಿದರು. ಅವರೊಂದಿಗೆ ಕ್ರೀಸ್‌ನಲ್ಲಿದ್ದ ರವೀಂದ್ರ ಜಡೇಜ (ಔಟಾಗದೆ 86; 156ಎ, 11ಬೌಂಡರಿ, 1ಸಿಕ್ಸರ್) ದಿಟ್ಟತನದಿಂದ ಬ್ಯಾಟ್ ಬೀಸಿದರು.  ಇವರಿಬ್ಬರೂ ಏಳನೇ ವಿಕೆಟ್‌ ಜೊತೆಯಾಟದಲ್ಲಿ 77 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಮುನ್ನಡೆ ಗಳಿಸುವ ಭರವಸೆ ಮೂಡಿತ್ತು. ಆದರೆ, ಹನುಮವಿಹಾರಿ ಅವರನ್ನು ಮೊಯಿನ್ ಅಲಿ ಔಟ್ ಮಾಡಿದರು. ನಂತರ ಜಡೇಜ ಒಬ್ಬರೇ ಏಕಾಂಗಿ ಹೋರಾಟ ಮಾಡಿದರು. ಉಳಿದ 
ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ಜೇಮ್ಸ್‌ ಆ್ಯಂಡರ್ಸನ್‌ಗೆ ದಂಡ: ಅಂಪೈರ್‌ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಇಂಗ್ಲೆಂಡ್‌ ತಂಡದ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಅವರಿಗೆ ಪಂದ್ಯದ ಸಂಭಾವನೆಯ ಶೇ 15ರಷ್ಟು ದಂಡ ವಿಧಿಸಲಾಗಿದೆ. 

ಭಾರತದ ಮೊದಲ ಇನಿಂಗ್ಸ್‌ನ 29ನೇ ಓವರ್‌ನಲ್ಲಿ ನಡೆದ ಘಟನೆ ಈ ಬೆಳವಣಿಗೆಗೆ ಕಾರಣವಾಗಿದೆ. ಆ ಓವರ್‌ನಲ್ಲಿ ಆ್ಯಂಡರ್ಸನ್‌ ಅವರು ಎಸೆದ ಚೆಂಡಿನ ಗತಿ ಅಂದಾಜಿಸುವಲ್ಲಿ ವಿರಾಟ್‌ ಕೊಹ್ಲಿ ವಿಫಲರಾದರು. ಚೆಂಡು ಅವರ ಪ್ಯಾಡ್‌ಗೆ ಬಡಿಯಿತು. ಆ್ಯಂಡರ್ಸನ್‌, ಎಲ್‌ಬಿಡಬ್ಲ್ಯು ನಿರ್ಧಾರಕ್ಕಾಗಿ ಅಂಪೈರ್‌ ಕುಮಾರ್‌ ಧರ್ಮಸೇನಾ ಅವರಿಗೆ ಮನವಿ ಮಾಡಿದರು. ಕುಮಾರ್‌, ನಾಟ್‌ಔಟ್‌ ಎಂದು ಸುಮ್ಮನಾದರು. ಕೂಡಲೇ ಅಸಮಾಧಾನ ವ್ಯಕ್ತಪಡಿಸಿದ ಜೇಮ್ಸ್‌ ಧರ್ಮಸೇನಾ ಅವರೊಂದಿಗೆ ವಾದಿಸಿದರು. 

‘ಆ್ಯಂಡರ್ಸನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ನಿಯಮ 2.1.5 ಉಲ್ಲಂಘನೆ ಮಾಡಿದ್ದಾರೆ’ ಎಂದು ಪಂದ್ಯದ ರೆಫರಿ ಆ್ಯಂಡಿ ಪೈಕ್ರಾಫ್ಟ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !