ಶನಿವಾರ, ಜುಲೈ 31, 2021
28 °C
ಮೊಹಮ್ಮದ್ ಸಿರಾಜ್, ಕೆ. ಗೌತಮ್ ಮಿಂಚು

ಚತುಷ್ಕೋನ ಕ್ರಿಕೆಟ್ ಸರಣಿ: ಅಂಬಟಿ ಆಟಕ್ಕೆ ಒಲಿದ ಜಯ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಎರಡು ತಿಂಗಳು ಹಿಂದಿನ ಮಾತು. ಅಂಬಟಿ ರಾಯುಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಯೋ ಯೋ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದರು. ಅದರೊಂದಿಗೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡದಲ್ಲಿ ಸ್ಥಾನವನ್ನೂ ಕಳೆದುಕೊಂಡಿದ್ದರು.

ಆದರೆ, ಗುರುವಾರ ಅದೇ ಮೈದಾನದಲ್ಲಿ ಅದೇ ಅಂಬಟಿ ರಾಯುಡು ತಮ್ಮ ಭುಜಬಲ ಪರಾಕ್ರಮ ಮೆರೆದರು. ಇಲ್ಲಿ ಆರಂಭವಾದ ಚತುಷ್ಕೋನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಅವರ ಅಜೇಯ ಅರ್ಧಶತಕದ ಬಲದಿಂದ ಭಾರತ ‘ಎ’ ತಂಡವು 5 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ‘ಎ’ ವಿರುದ್ಧ ಜಯಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿ ಕೊಂಡ ಆಸ್ಟ್ರೇಲಿಯಾ ‘ಎ’ ತಂಡವು ಮೊಹಮ್ಮದ್ ಸಿರಾಜ್ (88ಕ್ಕೆ4) ಮತ್ತು ಕೃಷ್ಣಪ್ಪ ಗೌತಮ್ (31ಕ್ಕೆ3) ಅವರ ಉತ್ತಮ ಬೌಲಿಂಗ್ ಎದುರು 31.4 ಓವರ್‌ಗಳಲ್ಲಿ ಆಲೌಟ್ ಆಯಿತು.

ಬೌಲರ್‌ ಸ್ನೇಹಿಯಾಗಿದ್ದ ಪಿಚ್‌ನಲ್ಲಿ ಆತಿಥೇಯರ ಇನಿಂಗ್ಸ್‌ ಆರಂಭವೂ ಚೆನ್ನಾಗಿರಲಿಲ್ಲ. ಅಲ್ಪಮೊತ್ತದ ಗುರಿ ಬೆನ್ನತ್ತಿದ ‘ಎ’ ತಂಡವು 7 ಓವರ್‌ಗಳಲ್ಲಿ 23 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಜಯ್ ರಿಚರ್ಡ್ಸನ್‌ (14ಕ್ಕೆ3) ಚುರುಕಿನ ದಾಳಿ ನಡೆಸಿದರು. ಆರ್. ಸಮರ್ಥ್, ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಕಬಳಿಸಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ ನಾಲ್ಕು ರನ್‌ ಗಳಿಸಿ ಆಷ್ಟನ್ ಅಗರ್ ಎಸೆತದಲ್ಲಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಅಂಬಟಿ ರಾಯುಡು (ಔಟಾಗದೆ 62; 107ಎಸೆತ, 5ಬೌಂಡರಿ, 1ಸಿಕ್ಸರ್ )ಮತ್ತು ಕೃಣಾಲ್ ಪಾಂಡ್ಯ (49; 66ಎಸೆತ, 4ಬೌಂಡರಿ) ಅವರು 5 ವಿಕೆಟ್‌ಗಳಿಗೆ 109 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ಗೆಲ್ಲಲು ಸಾಧ್ಯವಾಯಿತು.

 ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ ‘ಎ’: 31.4 ಓವರ್‌ಗಳಲ್ಲಿ1 51 (ಡಾರ್ಚಿ ಶಾರ್ಟ್ 16, ಟ್ರಾವಿಸ್ ಹೆಡ್ 28, ಆಷ್ಟನ್ ಆಗರ್ 34, ನೇಸರ್ 16, ಮೊಹಮ್ಮದ್ ಸಿರಾಜ್, 88ಕ್ಕೆ4, ದೀಪಕ್ ಚಹಾರ್ 33ಕ್ಕೆ1, ಕೆ. ಗೌತಮ್ 31ಕ್ಕೆ3, ಕೃಣಾಲ್ ಪಾಂಡ್ಯ 3ಕ್ಕೆ1). ಭಾರತ ‘ಎ’: 38.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 152 (ಅಂಬಟಿ ರಾಯುಡು 62, ಕೃಣಾಲ್ ಪಾಂಡ್ಯ 49, ಜಯ್ ರಿಚರ್ಡ್ಸನ್ 27ಕ್ಕೆ3, ಆಷ್ಟನ್ ಅಗರ್ 37ಕ್ಕೆ1, ಡಾರ್ಚಿ ಶಾರ್ಟ್ 3ಕ್ಕೆ1) ಫಲಿತಾಂಶ: ಭಾರತ ಎ ತಂಡಕ್ಕೆ 5 ವಿಕೆಟ್‌ಗಳ ಜಯ .

ಮುಂದಿನ ಪಂದ್ಯಗಳು: ಆಗಸ್ಟ್‌ 25

ಭಾರತ ಎ – ಭಾರತ ಬಿ (ಆಲೂರು)

ಆಸ್ಟ್ರೇಲಿಯಾ ಎ – ದಕ್ಷಿಣ ಆಫ್ರಿಕಾ ಎ (ಚಿನ್ನಸ್ವಾಮಿ ಕ್ರೀಡಾಂಗಣ).

ಮನೀಷ್ ಭರ್ಜರಿ ಬ್ಯಾಟಿಂಗ್: ‘ಬಿ’ ತಂಡಕ್ಕೆ ಜಯ

ಆಲೂರು: ನಾಯಕ ಮನೀಷ್ ಪಾಂಡೆ (ಔಟಾಗದೆ 95, 105 ಎಸೆತ, 9ಬೌಂಡರಿ, 1ಸಿಕ್ಸರ್)  ಬ್ಯಾಟಿಂಗ್‌ ಬಲದಿಂದ ಭಾರತ ಬಿ ತಂಡವು ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ 30 ರನ್‌ ಗಳಿಂದ ಗೆದ್ದಿತು.

ಟಾಸ್ ಗೆದ್ದ ಭಾರತ ಬಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕದ ಆಟಗಾರ ಪ್ರಸಿದ್ಧಕೃಷ್ಣ ಅವರು ಆರಂಭದಲ್ಲಿಯೇ ಆಘಾತ ನೀಡಿದರು.

ಮಧ್ಯಮವೇಗಿ ಪ್ರಸಿದ್ಧ (49ಕ್ಕೆ4) ದಕ್ಷಿಣ ಆಫ್ರಿಕಾ ತಂಡವು 57 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಫರ್ಹಾನ್ ಬೆಹ್ರಾದಿನ್ (43; 57ಎಸೆತ, 4ಬೌಂಡರಿ) ಮತ್ತು ಸೆನುರನ್ ಮುತುಸಾಮಿ (55;73ಎಸೆತ, 6ಬೌಂಡರಿ, 1ಸಿಕ್ಸರ್) ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ 94 ರನ್‌ಗಳನ್ನು ಪೇರಿಸಿದರು.  ಇದರಿಂದಾಗಿ ತಂಡವು 200 ರನ್‌ಗಳ ಗಡಿ ದಾಟಿತು. 231 ರನ್‌ಗಳಿಗೆ ಆಲೌಟ್ ಆಯಿತು.

ಗುರಿ ಬೆನ್ನತ್ತಿದ ಭಾರತ ಬಿ ತಂಡವು ಆರಂಭದಲ್ಲಿ ಮುಗ್ಗರಿಸಿತು. 22 ರನ್‌ಗಳಾಗುಷ್ಟರಲ್ಲಿ ಎರಡು ವಿಕೆಟ್‌ಗಳು ಪತನವಾದವು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಶುಭಮನ್ ಗಿಲ್ ಮತ್ತು ಮನೀಷ್ ಪಾಂಡೆ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 88 ರನ್‌ ಗಳಿಸಿದರು. ಗಿಲ್ ಔಟಾದ ನಂತರ ಕ್ರೀಸ್‌ಗೆ ಬಂದ ಕೇದಾರ್ ಜಾಧವ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅವರು ಔಟಾದ ನಂತರ ಬಂದ ಇಶಾನ್ ಕಿಶನ್ ಅವರು ಪಾಂಡೆಯೊಂದಿಗೆ 57 ರನ್‌ಗಳನ್ನು ಸೇರಿಸಿದರು.

ತಂಡದ ಮೊತ್ತವು 4 ವಿಕೆಟ್‌ಗಳಿಗೆ 114 ರನ್‌ಗಳಾಗಿದ್ದ ಸಂದರ್ಭದಲ್ಲಿ ಮಳೆ ಸುರಿಯಿತು. ಇದರಿಂದಾಗಿ ಕೆಲಕಾಲ ಆಟ ಸ್ಥಗಿತವಾಯಿತು.ಡಕ್ವರ್ಥ್ ಲೂಯಿಸ್‌ ನಿಯಮದ ಭಾರತ ’ಬಿ’ ತಂಡಕ್ಕೆ 220 ರನ್‌ಗಳ ಗೆಲುವಿನ ಗುರಿಯನ್ನು ನಿಗದಿಪಡಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು