ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಕರ್ನಾಟಕಕ್ಕೆ ಗೆಲುವು ತಂದಿತ್ತ ವೇಗಿಗಳು

Published 29 ಜನವರಿ 2024, 16:11 IST
Last Updated 29 ಜನವರಿ 2024, 16:11 IST
ಅಕ್ಷರ ಗಾತ್ರ

ತ್ರಿಪುರ: ಮಧ್ಯಮ ವೇಗದ ಬೌಲರ್‌ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ ಅಗರ್ತಲಾದಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್‌  ಪಂದ್ಯದ ನಾಲ್ಕನೇ ದಿನವಾದ ಸೋಮವಾರ ತ್ರಿಪುರಾ ತಂಡವನ್ನು 29 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು.

ಕರ್ನಾಟಕ ಈ ಗೆಲುವಿನಿಂದ ಆರು ಪಾಯಿಂಟ್ಸ್ ಪಡೆದಿದ್ದು ‘ಸಿ’ ಗುಂಪಿನಲ್ಲಿ 15 ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನದಲ್ಲಿ ಉಳಿದುಕೊಂಡಿದೆ. ತಮಿಳುನಾಡು ಸಹ ಇಷ್ಟೇ ಪಾಯಿಂಟ್ಸ್ ಪಡೆದರೂ, ರನ್‌ ಕೋಷ್ಟಕದ ಆಧಾರದಲ್ಲಿ ಮೊದಲ ಸ್ಥಾನದಲ್ಲಿದೆ.

ವಿದ್ವತ್‌ ಕಾವೇರಪ್ಪ, ವೈಶಾಖ ವಿಜಯಕುಮಾರ್ ಮತ್ತು ವಾಸುಕಿ ಕೌಶಿಕ್ ಅವರು ಮತ್ತೊಮ್ಮೆ ಕರ್ನಾಟಕದ ಜಯದಲ್ಲಿ ಪ್ರಮುಖ ಪಾತ್ರ  ವಹಿಸಿದರು. ಮೂವರು ಎಂಟು ವಿಕೆಟ್‌ಗಳನ್ನು ಹಂಚಿಕೊಂಡರು. ಕರ್ನಾಟಕ ತಂಡವನ್ನು ಭಾನುವಾರ ಎರಡನೇ ಇನಿಂಗ್ಸ್‌ನಲ್ಲಿ 151 ರನ್‌ಗಳಿಗೆ ಉರುಳಿಸಿದ ನಂತರ ಆತಿಥೇಯರ ಮುಂದೆ ಗೆಲುವಿಗೆ 193 ರನ್‌ಗಳ ಸಾಧಾರಣ ಗುರಿಯಿತ್ತು. ಆದರೆ ಅಂತಿಮ ದಿನ ತ್ರಿಪುರಾ ತಂಡ 55.2 ಓವರುಗಳಲ್ಲಿ 163 ರನ್ನಿಗೆ ಕುಸಿಯಿತು.

ವಿದ್ವತ್ ಕಾವೇರಪ್ಪ 22 ಓವರುಗಳಲ್ಲಿ 44 ರನ್ನಿಗೆ 4 ವಿಕೆಟ್ ಪಡೆದು ಪರಿಣಾಮಕಾರಿಯೆನಿಸಿದರು. ಕೌಶಿಕ್ ಒಂದು ವಿಕೆಟ್‌ ಮಾತ್ರ ಪಡೆದರೂ, 17 ಓವರುಗಳಲ್ಲಿ ಬರೇ 41 ರನ್‌ಗಳನ್ನಷ್ಟೇ ನೀಡಿದರು. ವಿಜಯಕುಮಾರ್‌ 62 ರನ್ನಿಗೆ ಮೂರು ವಿಕೆಟ್‌ (ಇಕಾನಮಿ: 4.32) ಪಡೆದರು.

ಭಾನುವಾರ ಅಜೇಯರಾಗಿ ಉಳಿದಿದ್ದ ಮಧ್ಯಮ ಕ್ರಮಾಂಕದ ಆಟಗಾರ ಸುದೀಪ್ ಚಟರ್ಜಿ 26 ರನ್‌ಗಳೊಡನೆ ಆಟ ಮುಂದುವರಿಸಿ ಏಕಾಂಗಿಯಾಗಿ ಪ್ರತಿರೋಧ ತೋರಿ 10 ಬೌಂಡರಿಗಳಿದ್ದ 82 ರನ್ ಗಳಿಸಿದರು. ಚಟರ್ಜಿ ಮತ್ತು ಕನ್ನಡಿಗ ಗಣೇಶ್ ಸತೀಶ್ (ಭಾನುವಾರ ಔಟಾಗದೇ 3) ನಾಲ್ಕನೇ ವಿಕೆಟ್‌ಗೆ 39 ರನ್‌ ಸೇರಿಸಿ ತಂಡದ ಆಸೆಗೆ ಬಲತುಂಬಿದ್ದರು. ಮೊತ್ತ 89 ಆಗಿದ್ದಾಗ ಗಣೇಶ್, ವಿದ್ವತ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಜೊತೆಯಾಟ ಮುರಿಯಿತು.

ಸುದೀಪ್ ಒಂದೆಡೆ ರನ್‌ ಗಳಿಸುತ್ತ ಹೋದರೂ, ಇನ್ನೊಂದೆಡೆ ವೈಶಾಖ ವಿಜಯಕುಮಾರ್ ಮತ್ತು ವಿದ್ವತ್ ಅವರ ದಾಳಿಗೆ ತ್ರಿಪುರಾ ತಂಡ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು. ಸಮರ್ಥ್ ಅವರಿಂದ ರನೌಟ್‌ ಆದ ಸುದೀಪ್ ಕೊನೆಯವರಾಗಿ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT