ಕರುಣ್‌ಗೆ ಕಾರಣಗಳನ್ನು ಹೇಳಿದ್ದೇನೆ: ಎಂ.ಎಸ್‌.ಕೆ.ಪ್ರಸಾದ್‌

7
ಕರ್ನಾಟಕದ ಆಟಗಾರನಿಗೆ ಅವಕಾಶ ನೀಡದ್ದನ್ನು ಸಮರ್ಥಿಸಿಕೊಂಡ ಪ್ರಸಾದ್‌

ಕರುಣ್‌ಗೆ ಕಾರಣಗಳನ್ನು ಹೇಳಿದ್ದೇನೆ: ಎಂ.ಎಸ್‌.ಕೆ.ಪ್ರಸಾದ್‌

Published:
Updated:
Deccan Herald

ನವದೆಹಲಿ: ‘ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಪ್ರಕಟಿಸಲಾಗಿದ್ದ ಭಾರತ ತಂಡದಿಂದ ಕರುಣ್‌ ನಾಯರ್‌ ಅವರನ್ನು ಕೈಬಿಟ್ಟಿದ್ದಕ್ಕೆ ಕಾರಣಗಳೇನು ಎಂಬುದನ್ನು ಅವರಿಗೇ ತಿಳಿಸಿದ್ದೇವೆ. ಇದಕ್ಕೆ ವಿವಾದದ ಸ್ವರೂಪ ನೀಡುವುದು ಬೇಡ’ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ತಿಳಿಸಿದ್ದಾರೆ.

ಕರುಣ್‌ ನಾಯರ್‌ ಅವರು ಇಂಗ್ಲೆಂಡ್‌ ಎದುರಿನ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಆಡುವ ಬಳಗದಲ್ಲಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ವಿಂಡೀಸ್‌ ಎದುರಿನ ಸರಣಿಯಿಂದ ತಮ್ಮನ್ನು ಕೈಬಿಟ್ಟಿರುವುದರ ಬಗ್ಗೆ ಸ್ವತಃ ಕರುಣ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಆಡಳಿತ ಮಂಡಳಿ ಮತ್ತು ಆಯ್ಕೆ ಸಮಿತಿಯವರು ನನ್ನ ಜೊತೆ ಮಾತನಾಡದೆಯೇ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು.

‘ವಿಂಡೀಸ್ ಎದುರಿನ ಸರಣಿಗೆ ತಂಡ ಪ್ರಕಟಿಸಿದ ಬಳಿಕ ನಾನೇ ಖುದ್ದಾಗಿ ಕರುಣ್‌ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಈ ವೇಳೆ ತಂಡದಿಂದ ಕೈಬಿಟ್ಟಿರುವುದಕ್ಕೆ ಕಾರಣಗಳೇನು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ನಾವು ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಆಟಗಾರರು ಮತ್ತು ಆಯ್ಕೆ ಸಮಿತಿ ನಡುವೆ ಇದುವರೆಗೂ ಸಂವಹನದ ಕೊರತೆಯಾಗಿಲ್ಲ. ಮುಂದೆಯೂ ಆಗುವುದಿಲ್ಲ’ ಎಂದು ಪ್ರಸಾದ್‌ ಹೇಳಿದ್ದಾರೆ.

‘ಇಂಗ್ಲೆಂಡ್‌ ಪ್ರವಾಸದ ವೇಳೆ ಆಯ್ಕೆ ಸಮಿತಿ ಸದಸ್ಯ ದೇವಾಂಗ್‌ ಗಾಂಧಿ ಅವರು ಕರುಣ್‌ ಜೊತೆ ಮಾತನಾಡಿದ್ದರು. ಆಡುವ ಬಳಗದಲ್ಲಿ ಸ್ಥಾನ ಸಿಗದ್ದಕ್ಕೆ ಬೇಸರ ಮಾಡಿಕೊಳ್ಳಬೇಡ. ಮುಂದೆ ಅವಕಾಶ ಸಿಗುತ್ತದೆ ಆಗ ಉತ್ತಮವಾಗಿ ಆಡು ಎಂದು ತಿಳಿ ಹೇಳಿದ್ದರು. ಆ ಮೂಲಕ ಕರ್ನಾಟಕದ ಆಟಗಾರನನ್ನು ಹುರಿದುಂಬಿಸುವ ಕೆಲಸ ಮಾಡಿದ್ದರು’ ಎಂದಿದ್ದಾರೆ.

‘ಯಾವುದೋ ಒಂದು ಸರಣಿಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ ಎಂದ ಮಾತ್ರಕ್ಕೆ ಆಟಗಾರನ ಕ್ರೀಡಾ ಬದುಕೇ ಅಂತ್ಯವಾಗಿಬಿಡುವುದಿಲ್ಲ. ಆ ರೀತಿ ಯಾರೂ ಭಾವಿಸಲೂ ಬಾರದು. ರಣಜಿ ಟ್ರೋಫಿ ಮತ್ತು ಇತರೆ ದೇಶಿಯ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ ಮತ್ತೆ ಅವಕಾಶದ ಬಾಗಿಲು ತೆರೆಯುತ್ತದೆ. ಹೀಗಾಗಿ ದೇಶಿಯ ಟೂರ್ನಿಗಳತ್ತ ಹೆಚ್ಚು ಗಮನ ಹರಿಸುವಂತೆ ಅವರಿಗೆ ಸಲಹೆ ನೀಡಿದ್ದೇವೆ’ ಎಂದೂ ಪ್ರಸಾದ್‌ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 1

  Frustrated
 • 11

  Angry

Comments:

0 comments

Write the first review for this !