ಅಣ್ಣಂದಿರ ನೆರಳಿನಾಚೆ ಬಂದು ಹೊಳೆದ ಪ್ರತಿಭೆ

7

ಅಣ್ಣಂದಿರ ನೆರಳಿನಾಚೆ ಬಂದು ಹೊಳೆದ ಪ್ರತಿಭೆ

Published:
Updated:
Deccan Herald

ಮೂವರು ಮಕ್ಕಳಲ್ಲಿ ಕೊನೆಯವನು ಪೀಚು. ಅಪ್ಪನ ಗಮನ ಸೆಳೆಯಲು ಯಾವಾಗಲೂ ಪರದಾಡುತ್ತಲೇ ಇದ್ದ. ಅಪ್ಪ ಕೆವಿನ್ ಕುರ್ರನ್ ಜಿಂಬಾಬ್ವೆ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್ ಆಟಗಾರ. ಹೀಗಾಗಿ ಮಕ್ಕಳ ರಕ್ತದಲ್ಲೂ ಅದೇ ಆಟ. ಚಿಕ್ಕಂದಿನಿಂದಲೂ ಮೊದಲೆರಡು ಮಕ್ಕಳಾದ ಟಾಮ್, ಬೆನ್ ಕಡೆಗೇ ಕೆವಿನ್ ಗಮನ. ಅದರಲ್ಲೂ ಟಾಮ್ ಮುಂದೆ ದೊಡ್ಡ ಕ್ರಿಕೆಟಿಗ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅವರು ಬಂಧು-ಮಿತ್ರರಲ್ಲಿ ಹೇಳಿಕೊಂಡು ಬೀಗುತ್ತಿದ್ದರು. 

ಅದೊಂದು ದಿನ ಜಿಂಬಾಬ್ವೆಯಲ್ಲೇ ಕೆವಿನ್ ಬೆಳಿಗ್ಗೆ ಜಾಗಿಂಗ್ ಗೆ ಹೊರಟರು. ಎದೆನೋವು ಕಾಣಿಸಿಕೊಂಡು, ಹೃದಯಾಘಾತದಿಂದ ಮೃತಪಟ್ಟರು. ಆಗ ಕೊನೆಯ ಮಗ ಸ್ಯಾಮ್ ವಯಸ್ಸು ಇನ್ನೂ ಹನ್ನೆರಡು. ಅವನ ಅಣ್ಣಂದಿರಿಗೆ ಅಪ್ಪ ಮೊಗೆದುಕೊಟ್ಟ ಪ್ರೀತಿ ಸಿಕ್ಕಿತ್ತು. ಸ್ಯಾಮ್‌ಗೆ ಅದು ನಿರೀಕ್ಷಿಸಿದಷ್ಟು ಸಿಕ್ಕಿರಲಿಲ್ಲ. ಅಪ್ಪ ಮೆಚ್ಚುವಂತೆ ಕ್ರಿಕೆಟ್ ಆಡಿಯೇ ತೀರಬೇಕು ಎಂಬ ಸಂಕಲ್ಪ ಅವನಲ್ಲಿ ಇತ್ತಷ್ಟೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ಪರವಾಗಿ ಆಷಸ್ ಸರಣಿಯಲ್ಲಿ ಆಡುವ ಅವಕಾಶ ಮೊದಲು ಸಿಕ್ಕಿದ್ದು ಬೌಲರ್ ಟಾಮ್‌ಗೆ. ಬೆನ್ ಕೂಡ ಕೌಂಟಿ ಕ್ರಿಕೆಟ್ ನಲ್ಲಿ ತನ್ನ ಪ್ರತಿಭಾ ಪ್ರದರ್ಶನ ಮಾಡಿದ್ದವನೇ. ಟಾಮ್ ಆರಡಿ ಒಂದಿಂಚು ಎತ್ತರದ ಹುಡುಗ. ಸ್ಯಾಮ್ ಐದಡಿ ಹತ್ತು ಇಂಚು. ಸಣಕಲು ದೇಹ ಬೇರೆ. ಇಬ್ಬರೂ ಸರ್ರೆ ಕೌಂಟಿ ತಂಡವನ್ನು ಪ್ರತಿನಿಧಿಸಿದರು. ಸ್ಯಾಮ್ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ ಆಡಿದ್ದು 17ನೇ ವಯಸ್ಸಿನಲ್ಲಿ. ಅಣ್ಣನ ಜತೆಗೆ ಓಪನಿಂಗ್ ಬೌಲಿಂಗ್ ದಾಳಿ ಹಂಚಿಕೊಂಡಿದ್ದು ವಿಶೇಷ. ಕೆಂಟ್ ತಂಡದ ಎದುರಿನ ಆ ಪಂದ್ಯದಲ್ಲಿ ತಾನು ಮಾಡಿದ ಮೊದಲ ಓವರ್ ನ ಐದನೇ ಎಸೆತದಲ್ಲೇ ವಿಕೆಟ್ ಕಿತ್ತದ್ದು ಸ್ಯಾಮ್. ಇಡೀ ಪಂದ್ಯದಲ್ಲಿ ಎಂಟು ವಿಕೆಟ್ ಕಿತ್ತು, ತಣ್ಣಗಿನ ನಗೆ ನಕ್ಕವನು.

ದೇಸಿ ಕ್ರಿಕೆಟ್ ನಲ್ಲಿ ಒಮ್ಮೆ ಸ್ಯಾಮ್ ಜೋ ರೂಟ್ ಅವರನ್ನೇ ಎಲ್ ಬಿಡಬ್ಲ್ಯು ಔಟ್ ಮಾಡಿದ. ಆಗ ಸ್ಯಾಮ್ ಎಡಗೈ ಬೌಲಿಂಗ್ ನ ಕರಾಮತ್ತನ್ನು ಜೋ ರೂಟ್ ಗುರುತಿಸಿದರು. ಐದಡಿ ಹತ್ತು ಇಂಚೆನ್ನುವುದು ಸ್ಯಾಮ್ ಗೆ ಸಮಸ್ಯೆ ಆಗಲೇ ಇಲ್ಲ.

ಭಾರತ ಈ ಸಲ ಇಂಗ್ಲೆಂಡ್ ಪ್ರವಾಸ ಮಾಡಿದಾಗ ಆಂಡರ್ ಸನ್, ಸ್ಟುವರ್ಟ್ ಬ್ರಾಡ್, ಮೊಯಿನ್ ಅಲಿ ಮೂವರೂ ದಿಗ್ಗಜರ ಬೌಲಿಂಗ್ ದಾಳಿಯ ಅರಿವು ಇತ್ತು. ಆದರೆ, ಇಪ್ಪತ್ತರ ಹರೆಯದ ಸ್ಯಾಮ್ ಕುರ್ರನ್ ಚೆಂಡಿನ ಸ್ವಿಂಗ್ ಮರ್ಮ ಗೊತ್ತಿರಲಿಲ್ಲ. ಎರಡನೇ ದಿನದಾಟದಲ್ಲಿ ಎಂಟು ಎಸೆತಗಳ ಅಂತರದಲ್ಲಿ ಮುರಳಿ ವಿಜಯ್, ಶಿಖರ್ ಧವನ್ ಹಾಗೂ ಕೆ.ಎಲ್. ರಾಹುಲ್ ವಿಕೆಟ್ ಕಿತ್ತಾಗ ಈ ಹುಡುಗನ ಮೊನಚು ಎಂಥದೆಂದು ರುಜುವಾತಾಯಿತು. 

ಕುರ್ರನ್ ಕೂಡ ಅಪ್ಪನಂತೆ ಆಲ್ ರೌಂಡರ್. ನಿರ್ಭಿಡೆಯಿಂದ ಬ್ಯಾಟಿಂಗ್ ಕೂಡ ಮಾಡಬಲ್ಲ. ಆ ಶಕ್ತಿಯಿಂದಲೇ ಇಂಗ್ಲೆಂಡ್ ಎರಡು ಪಂದ್ಯಗಳನ್ನು ಗೆಲ್ಲಲು ಅವನು ಕೊಟ್ಟ ಕಾಣ್ಕೆ ದೊಡ್ಡದು. ಬಹುಶಃ ಈಗ ಕೆವಿನ್ ಬದುಕಿದ್ದಿದ್ದರೆ ಅವರು ಜೀವನವಿಡೀ ಉಪೇಕ್ಷಿಸಿದ್ದ ಸಣ್ಣ ಮಗನನ್ನು ಈಗ ಮನದುಂಬಿ ಮುದ್ದಿಸುತ್ತಿದ್ದರೇನೋ?

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !