ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ವಿರುದ್ಧದ ಸರಣಿ: ಧರ್ಮಶಾಲಾಗೆ ಮರಳಿದ ಬೂಮ್ರಾ, ರಾಹುಲ್‌ ಅಲಭ್ಯ

ಶಸ್ತ್ರಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ ಕೆ.ಎಲ್ ರಾಹುಲ್
Published 29 ಫೆಬ್ರುವರಿ 2024, 14:34 IST
Last Updated 29 ಫೆಬ್ರುವರಿ 2024, 14:34 IST
ಅಕ್ಷರ ಗಾತ್ರ

ನವದೆಹಲಿ: ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ ಅವರು ಧರ್ಮಶಾಲಾದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಮತ್ತು ಐದನೇ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ತಂಡಕ್ಕೆ ಮರಳಿದ್ದಾರೆ. 

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ  ತಂಡವನ್ನು ಪ್ರಕಟಿಸಿದೆ. 

ಕನ್ನಡಿಗ ರಾಹುಲ್ ಅವರು ತೊಡೆಯ ಸ್ನಾಯುವಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಪಡೆಯಲು ಲಂಡನ್‌ಗೆ ತೆರಳಿದ್ದಾರೆ. ಕಳೆದ ತಿಂಗಳು ಇಂಗ್ಲೆಂಡ್ ಎದುರು ಸರಣಿ ಆರಂಭವಾಗುವ ಮುನ್ನ ಫಿಟ್‌ನೆಸ್ ಪರೀಕ್ಷೆಗೊಳಗಾಗಿದ್ದ ರಾಹುಲ್  ಸಂಪೂರ್ಣ ಚೇತರಿಸಿಕೊಂಡಿರಲಿಲ್ಲ. ಅದ್ದರಿಂದ ಅವರನ್ನು ಆಯ್ಕೆಗೆ  ಪರಿಗಣಿಸಿರಲಿಲ್ಲ. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಪಂದ್ಯಕ್ಕೂ ಮುನ್ನ ಅವರು ಶೇ 90ರಷ್ಟು ಫಿಟ್ ಆಗಿದ್ದರು. 

‘ರಾಹುಲ್ ಅವರು ಧರ್ಮಶಾಲಾ ಟೆಸ್ಟ್‌ನಲ್ಲಿ ಆಡುವುದಿಲ್ಲ. ಅವರ ಶಸ್ತ್ರಚಿಕಿತ್ಸೆ ಮಾಡುತ್ತಿರುವ ಲಂಡನ್‌ನ ವೈದ್ಯರೊಂದಿಗೆ ನಮ್ಮ ಮಂಡಳಿಯ ವೈದ್ಯಕೀಯ ತಂಡವು ನಿರಂತರ ಸಂಪರ್ಕದಲ್ಲಿದೆ. ರಾಹುಲ್ ಅವರ ಆರೋಗ್ಯ ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. 

ಬೂಮ್ರಾ ಅವರು ನಾಲ್ಕನೇ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಕಾರ್ಯಬಾಹುಳ್ಯ ನಿರ್ವಹಣೆ ನಿಯಮದ ಅನುಸಾರ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.  ಮಾರ್ಚ್ 7ರಂದು ಆರಂಭವಾಗುವ ಟೆಸ್ಟ್ ಪಂದ್ಯದಲ್ಲಿ ಅವರು ಆಡುವು ಖಚಿತವಾಗಿದೆ. 

ರಾಹುಲ್ ಅನುಪಸ್ಥಿತಿಯಿಂದಾಗಿ ರಜತ್ ಪಾಟೀದಾರ್ ಅವರು ತಂಡದಲ್ಲಿ ಮುಂದುವರಿಯುವುದು ಬಹುತೇಕ ಖಚಿತವಾಗಿದೆ.  ಆದರೆ ಅವರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುವುದು ಖಚಿತವಿಲ್ಲ. 

ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ರಾಷ್ಟ್ರೀಯ ತಂಡದಿಂದ ತಮ್ಮ ತವರು ತಂಡ ತಮಿಳುನಾಡಿಗೆ ಮರಳಿದ್ದಾರೆ. ರಣಜಿ ಟ್ರೋಫಿ  ಸೆಮಿಫೈನಲ್‌ನಲ್ಲಿ ಅವರು ಅಡಲಿದ್ದಾರೆ.

‘ಇದೇ 2ರಿಂದ ತಮಿಳುನಾಡು ತಂಡವು ಮುಂಬೈ ವಿರುದ್ಧ ಆಡಲಿರುವ ರಣಜಿ ಸೆಮಿಫೈನಲ್‌ನಲ್ಲಿ ಆಡುವರು. ಆ ಪಂದ್ಯ ಮುಗಿದ ಮೇಲೆ ಧರ್ಮಶಾಲಾಕ್ಕೆ ಬಂದು ರಾಷ್ಟ್ರೀಯ ತಂಡ ಸೇರಿಕೊಳ್ಳುವರು’ ಎಂದು ಬಿಸಿಸಿಐ ತಿಳಿಸಿದೆ. 

ತಂಡ: ರೋಹಿತ್ ಶರ್ಮಾ (ನಾಯಕ), ಜಸ್‌ಪ್ರೀತ್ ಬೂಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ ಜುರೇಲ್ (ವಿಕೆಟ್‌ಕೀಪರ್), ಕೆ.ಎಸ್. ಭರತ್ (ವಿಕೆಟ್‌ಕೀಪರ್), ದೇವದತ್ತ ಪಡಿಕ್ಕಲ್, ಆರ್. ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT