ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಗೆ ಅನುಗುಣವಾಗಿ ಆಡಿದ್ದೇನೆ: ರಾಹುಲ್‌

ಕಿಂಗ್ಸ್‌ ಇಲೆವನ್‌ ಪಂಜಾಬ್‌ ಆಟಗಾರ ಹೇಳಿಕೆ
Last Updated 30 ಏಪ್ರಿಲ್ 2019, 16:04 IST
ಅಕ್ಷರ ಗಾತ್ರ

ಹೈದರಾಬಾದ್‌: ‘ಕ್ರಿಸ್‌ ಗೇಲ್‌ ಅಥವಾ ನನ್ನ ಪೈಕಿ ಒಬ್ಬರು ಕನಿಷ್ಠ 15ರಿಂದ 16 ಓವರ್‌ಗಳವರೆಗೂ ಕ್ರೀಸ್‌ನಲ್ಲಿ ಇರಬೇಕೆಂಬುದು ತಂಡದ ಯೋಜನೆಯಾಗಿತ್ತು. ಅದಕ್ಕನುಗುಣವಾಗಿಯೇ ಆಡಿದ್ದೇನೆ’ ಎಂದು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್.ರಾಹುಲ್‌, ನಿಧಾನಗತಿಯ ಆಟವನ್ನು ಸಮರ್ಥಿಸಿಕೊಂಡಿದ್ದಾರೆ.

ಸನ್‌ರೈಸರ್ಸ್‌ ಎದುರಿನ ಸೋಮವಾರದ ಹೋರಾಟದಲ್ಲಿ ಕಿಂಗ್ಸ್‌ ಇಲೆವನ್‌ 213ರನ್‌ಗಳ ಗುರಿ ಬೆನ್ನಟ್ಟಿತ್ತು. ಈ ಹಣಾಹಣಿಯಲ್ಲಿ 19ನೇ ಓವರ್‌ವರೆಗೂ ಕ್ರೀಸ್‌ನಲ್ಲಿದ್ದ ರಾಹುಲ್‌ 56 ಎಸೆತಗಳಲ್ಲಿ 79ರನ್‌ ಗಳಿಸಿದ್ದರು. ತಂಡವು 45ರನ್‌ಗಳಿಂದ ಸೋತಿತ್ತು.

ತಂಡವು ಗೆಲ್ಲಲು, ಓವರ್‌ಗೆ 15ಕ್ಕಿಂತಲೂ ಹೆಚ್ಚು ರನ್‌ಗಳು ಗಳಿಸಬೇಕಿದ್ದ ಸಮಯದಲ್ಲಿ ರಾಹುಲ್‌ ನಿಧಾನಗತಿಯ ಬ್ಯಾಟಿಂಗ್‌ ಮಾಡಿದ್ದರು. 36 ಎಸೆತಗಳಲ್ಲಿ 39ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಕುರಿತು ಟೀಕೆ‌ಗಳು ವ್ಯಕ್ತವಾಗಿದ್ದವು.

‘ಎಲ್ಲಾ ಪಂದ್ಯಗಳಲ್ಲೂ ತಂಡಕ್ಕೆ ಸ್ಫೋಟಕ ಆರಂಭ ನೀಡಲು ಆಗುವುದಿಲ್ಲ. 20 ಎಸೆತಗಳಲ್ಲಿ ಅರ್ಧಶತಕ ಬಾರಿಸುವುದೂ ಅಸಾಧ್ಯ. ಕೆಲವೊಮ್ಮೆ ಲಯ ಕಂಡುಕೊಳ್ಳಲು ತುಸು ಸಮಯ ಬೇಕಾಗುತ್ತದೆ. ಹೀಗಾಗಿ ತಾಳ್ಮೆಯಿಂದ ಆಡಬೇಕಾಗುತ್ತದೆ’ ಎಂದು ರಾಹುಲ್‌ ತಿಳಿಸಿದ್ದಾರೆ.

‘ದೊಡ್ಡ ಗುರಿ ಬೆನ್ನಟ್ಟುವಾಗ ಉತ್ತಮ ಜೊತೆಯಾಟಗಳು ಮೂಡಿಬರಬೇಕು. ಆಗ ಗೆಲುವಿನ ಹಾದಿ ಸುಗಮವಾಗುತ್ತದೆ. ಸನ್‌ರೈಸರ್ಸ್‌ ವಿರುದ್ಧ ನಾವು ದೊಡ್ಡ ಜೊತೆಯಾಟಗಳನ್ನು ಆಡಲು ವಿಫಲರಾದೆವು. ಹೀಗಾಗಿ ಗೆಲುವು ಕೈಜಾರಿತು’ ಎಂದರು.

ಮುಜೀಬ್‌ ಉರ್‌ ರಹಮಾನ್ ಸೋಮವಾರದ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 66ರನ್‌ ನೀಡಿದ್ದರು. ಮುಜೀಬ್‌ ಅವರನ್ನು ರಾಹುಲ್‌ ಸಮರ್ಥಿಸಿಕೊಂಡರು.

‘ಹೆಚ್ಚು ದಂಡನೆಗೆ ಒಳಗಾದಾಗ ಬೌಲರ್‌ಗೆ ಬೇಸರವಾಗುವುದು ಸಹಜ. ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಇದು ಸಾಮಾನ್ಯ. ಮುಜೀಬ್‌ ಉತ್ತಮ ಬೌಲರ್‌. ಅವರು ಕಲಿಯುವುದು ಸಾಕಷ್ಟಿದೆ. ಮೊದಲ ಬಾರಿಗೆ ಅಷ್ಟೊಂದು ರನ್‌ ಬಿಟ್ಟುಕೊಟ್ಟಿದ್ದಾರೆ. ಅವರು ಹಿಂದೆ ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದನ್ನು ಮರೆಯಬಾರದು. ಮುಂದಿನ ಪಂದ್ಯದಲ್ಲಿ ಖಂಡಿತವಾಗಿಯೂ ಪುಟಿದೇಳುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT