ಕೆಪಿಎಲ್‌: ಫೈನಲ್‌ ಕನಸಲ್ಲಿ ಬ್ಲಾಸ್ಟರ್ಸ್‌

7
ಕೆಪಿಎಲ್‌: ಮೊದಲ ಸೆಮಿಫೈನಲ್‌ ಇಂದು, ಪ್ರಬಲ ಪೈಪೋಟಿ ನಿರೀಕ್ಷೆ

ಕೆಪಿಎಲ್‌: ಫೈನಲ್‌ ಕನಸಲ್ಲಿ ಬ್ಲಾಸ್ಟರ್ಸ್‌

Published:
Updated:
Deccan Herald

ಮೈಸೂರು: ಲೀಗ್‌ ಹಂತದಲ್ಲಿ ಅಜೇಯ ಸಾಧನೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಒಂದೆಡೆಯಾದರೆ, ತವರು ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿಯಲಿರುವ ಮೈಸೂರು ವಾರಿಯರ್ಸ್‌ ಮತ್ತೊಂದೆಡೆ.

ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮಂಗಳವಾರ ಇವೆರಡು ತಂಡಗಳು ಎದುರಾಗಲಿದ್ದು, ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷಿಸಲಾಗಿದೆ.

ಭಾನುವಾರ ನಡೆದಿದ್ದ ಕೊನೆಯ ಲೀಗ್‌ ಪಂದ್ಯದಲ್ಲಿ ಇವೆರಡು ತಂಡಗಳು ಎದುರಾಗಿದ್ದಾಗ, ಬ್ಲಾಸ್ಟರ್ಸ್‌ ಎರಡು ರನ್‌ಗಳ ರೋಚಕ ಗೆಲುವು ಪಡೆದಿತ್ತು. ಬೆಂಗಳೂರಿನ ತಂಡ ನೀಡಿದ್ದ 149 ರನ್‌ಗಳ ಗುರಿ ಬೆನ್ನಟ್ಟಲು ವಾರಿಯರ್ಸ್‌ ವಿಫಲವಾಗಿತ್ತು.

‘ಎಲ್ಲ ಆಟಗಾರರು ಅದ್ಭುತ ಫಾರ್ಮ್‌ನಲ್ಲಿರುವ ಕಾರಣ ಅಂತಿಮ ಇಲೆವೆನ್‌ ಆಯ್ಕೆ ಕಷ್ಟವಾಗುತ್ತಿದೆ. ಸೆಮಿಫೈನಲ್‌ಗೆ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವೆವು. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಫೈನಲ್ ತಲುಪುವುದು ಕಷ್ಟವಲ್ಲ’ ಎಂದು ಬ್ಲಾಸ್ಟರ್ಸ್‌ ತಂಡದ ನಾಯಕ ರಾಬಿನ್‌ ಉತ್ತಪ್ಪ ಅವರು ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದರು.

ರಾಬಿನ್‌ ಅಲ್ಲದೆ, ಕಳೆದ ಪಂದ್ಯದಲ್ಲಿ ಮಿಂಚಿದ್ದ ಪವನ್‌ ದೇಶಪಾಂಡೆ ಅವರು ಈ ತಂಡದ ಬ್ಯಾಟಿಂಗ್‌ ವಿಭಾಗದ ಬಲ ಎನಿಸಿಕೊಂಡಿದ್ದಾರೆ. ಶ್ರೇಯಸ್‌ ಗೋಪಾಲ್‌, ಅಭಿಷೇಕ್‌ ಭಟ್‌ ಮತ್ತು ಆನಂದ್‌ ದೊಡ್ಡಮನಿ ಅವರು ಬೌಲಿಂಗ್‌ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ.

ಮುಯ್ಯಿ ತೀರಿಸುವ ತವಕ: ಜೆ.ಸುಚಿತ್‌ ನೇತೃತ್ವದ ವಾರಿಯರ್ಸ್‌ ತಂಡ ಕಳೆದ ಪಂದ್ಯದಲ್ಲಿ ಎದುರಾದ ಸೋಲಿಗೆ ಮುಯ್ಯಿ ತೀರಿಸಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಲಿದೆ. ಭಾನುವಾರ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡು ಸಂಘಟಿತ ಹೋರಾಟ ನಡೆಸುವ ಸವಾಲು ವಾರಿಯರ್ಸ್‌ ಮುಂದಿದೆ.

ಟೈಗರ್ಸ್‌– ಬುಲ್ಸ್‌ ಸೆಣಸು: ಬುಧವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ಮತ್ತು ಬಿಜಾಪುರ ಬುಲ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.

ಆರ್‌.ವಿನಯಕುಮಾರ್‌ ನೇತೃತ್ವದ ಟೈಗರ್ಸ್‌ ತಂಡ ಲೀಗ್‌ ಹಂತದಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನ ಪಡೆದುಕೊಂಡಿತ್ತು. ಭರತ್‌ ಚಿಪ್ಲಿ ನಾಯಕತ್ವದ ಬುಲ್ಸ್‌ ಮೂರು ಗೆಲುವು ಸಾಧಿಸಿತ್ತು. ಈ ತಂಡದ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿದ್ದವು.

ಇಂದಿನ ಸೆಮಿಫೈನಲ್‌ 
ಬೆಂಗಳೂರು ಬ್ಲಾಸ್ಟರ್ಸ್‌– ಮೈಸೂರು ವಾರಿಯರ್ಸ್‌
ಆರಂಭ: ಸಂಜೆ 6.40
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 2
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !