ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈರತಿ ಸುರೇಶ್‌ ₹416 ಕೋಟಿ ಆಸ್ತಿ ಒಡೆಯ

Last Updated 23 ಏಪ್ರಿಲ್ 2018, 19:01 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬೈರತಿ ಸುರೇಶ್‌ ಅವರ ಕುಟುಂಬ ₹ 416.82 ಕೋಟಿ ಆಸ್ತಿ ಹೊಂದಿದೆ.

ಅಭ್ಯರ್ಥಿಯ ₹14.39 ಕೋಟಿ ಹಾಗೂ ಪತ್ನಿ ₹1.45 ಕೋಟಿ ಚರಾಸ್ತಿ ಹೊಂದಿದ್ದಾರೆ. ಅವರ ಸ್ಥಿರಾಸ್ತಿ ₹384.83 ಕೋಟಿ ಆಗಿದ್ದರೆ, ಪತ್ನಿ ಹೆಸರಿನಲ್ಲಿ ₹16.10 ಕೋಟಿ ಸ್ಥಿರಾಸ್ತಿ ಇದೆ. ಅಭ್ಯರ್ಥಿಯ ಸಾಲ ₹41 ಕೋಟಿ. ಅವರ ಕೈಯಲ್ಲಿ ₹1.80 ಲಕ್ಷ, ಪತ್ನಿ ಬಳಿ ₹3.62 ಲಕ್ಷ ನಗದು ಇದೆ.

ಖೇಣಿ ಆಸ್ತಿ ₹ 42.77 ಕೋಟಿ ಹೆಚ್ಚಳ: ಬೀದರ್‌ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಖೇಣಿ ₹ 198 ಕೋಟಿ ಆಸ್ತಿಯ ಒಡೆಯ. ಹಿಂದಿನ ಚುನಾವಣೆಯಲ್ಲಿ ಘೋಷಿಸಿದ್ದ ಆಸ್ತಿಗೆ ಹೋಲಿಕೆ ಮಾಡಿದರೆ ಅವರ ಆಸ್ತಿಯಲ್ಲಿ ₹42.77 ಕೋಟಿಯಷ್ಟು ಏರಿಕೆಯಾಗಿದೆ. ಅವರ ಬಳಿ ಫೋರ್ಡ್‌, ಫೆರಾರಿ, ಮರ್ಸಿಡಿಸ್ ಬೆಂಜ್, ಜಾಗ್ವಾರ್‌ ಸೇರಿ ಒಟ್ಟು 5 ಐಷಾರಾಮಿ ಕಾರುಗಳು ಹಾಗೂ ₹1.60 ಕೋಟಿ ಮೌಲ್ಯದ ಚಿನ್ನಾಭರಣ ಇದೆ. ಅಫಿಡವಿಟ್‌ನಲ್ಲಿ ಪತ್ನಿ, ಪುತ್ರರ ಬಳಿ ಇರುವ ಚಿನ್ನಾಭರಣಗಳ ವಿವರ ಉಲ್ಲೇಖಿಸಿಲ್ಲ.

ಮಧ್ವರಾಜ್ ಆಸ್ತಿ ₹ 18 ಕೋಟಿ ಇಳಿಕೆ: ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರು ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ ಕಳೆದ ಐದು ವರ್ಷಗಳಲ್ಲಿ ₹18.03 ಕೋಟಿ ಕಡಿಮೆಯಾಗಿದೆ. ಪತ್ನಿ ಸುಪ್ರಿಯಾ ಆಸ್ತಿಯೂ ₹ 6.22 ಕೋಟಿ ಕಡಿಮೆಯಾಗಿದೆ. ಆದರೆ, ಈ ಬಾರಿ ಅವರು ಮಗಳು ಪ್ರತ್ಯಕ್ಷಾ ಕೂಡಾ ಆಸ್ತಿ ಘೋಷಣೆ ಮಾಡಿದ್ದು ಆಕೆ ಚರಾಸ್ತಿ ಮೌಲ್ಯ 1.82 ಕೋಟಿ.

ಶಂಕರ್‌ 270 ಎಕರೆ ಮಾಲೀಕ: ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಲ್‌. ಶಂಕರ್‌ ಕುಟುಂಬದ ಒಡೆತನದಲ್ಲಿ ಒಟ್ಟು ₹ 37.71 ಕೋಟಿ ಆಸ್ತಿ ಇದೆ. ಶಂಕರ್‌ ಅವರ ಹೆಸರಿನಲ್ಲಿ ಕಾಫಿ ತೋಟ, ಕೃಷಿ ಜಮೀನು ಒಟ್ಟು 270 ಎಕರೆ ಇದೆ. ಕಳೆದ ನವೆಂಬರ್‌ನಲ್ಲಿ 58 ಎಕರೆ ಜಮೀನು ಖರೀದಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಒಟ್ಟು ಆಸ್ತಿ ₹ 6.98 ಕೋಟಿ. 2013ರಲ್ಲಿ ಅವರು ಘೋಷಿಸಿದ್ದ ಆಸ್ತಿ ₹ 3.39 ಕೋಟಿ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ₹ 2.31 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ₹ 1.34 ಕೋಟಿ ಆಸ್ತಿ ಇದೆ ಎಂದು 2013ರಲ್ಲಿ ಘೋಷಿಸಿದ್ದರು.

ಶೆಟ್ಟರ್‌ ಬಳಸುವ ವಾಹನ ಸ್ವಂತದ್ದಲ್ಲ!
ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಬಳಿ ಸ್ವಂತ ವಾಹನವಿಲ್ಲ! ಚರಾಸ್ತಿ, ಸ್ಥಿರಾಸ್ತಿ ಸೇರಿದಂತೆ ಒಟ್ಟು ₹11.52 ಕೋಟಿ ಆಸ್ತಿ ಹೊಂದಿದ್ದಾಗಿ ಘೋಷಿಸಿಕೊಂಡಿದ್ದಾರೆ. ₹20.59 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ. ಶೆಟ್ಟರ್‌ ಅವರು ತಮ್ಮ ಪತ್ನಿ, ಇಬ್ಬರು ಪುತ್ರರು ಮತ್ತು ಸಹೋದರನಿಗೆ ಒಟ್ಟು ₹ 1.51 ಕೋಟಿ ಸಾಲ ಕೊಟ್ಟಿದ್ದಾರೆ. ಜೊತೆಗೆ ₹ 2.01 ಕೋಟಿ ಸಾಲಗಾರರೂ ಆಗಿದ್ದಾರೆ.

ಜೆಡಿಎಸ್‌ ಅಭ್ಯರ್ಥಿಗೆ ‘ಕೈ’ ಅಭ್ಯರ್ಥಿ ಸಾಲ!
ಶಿರಸಿ–ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರಿಗೆ ಸಾಲ ನೀಡಿದ್ದಾರೆ.

ಮಧು ಬಂಗಾರಪ್ಪ ಅವರಿಗೆ ₹ 1.39 ಕೋಟಿ ಸಾಲ ನೀಡಿರುವುದಾಗಿ ಭೀಮಣ್ಣ ನಾಯ್ಕ ತಿಳಿಸಿದ್ದಾರೆ. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಭೀಮಣ್ಣ ನಾಯ್ಕ, ಸಂಬಂಧದಲ್ಲಿ ಮಧುಗೆ ಸೋದರ ಮಾವ. ಪತ್ನಿ ಗೀತಾ ಭೀಮಣ್ಣ ಅವರಿಗೆ ₹ 40 ಲಕ್ಷ ಸಾಲ ಸೇರಿದಂತೆ ಅವರು, ಎಂಟು ಜನರಿಗೆ ಒಟ್ಟು ₹ 5.06 ಕೋಟಿ ಸಾಲ ನೀಡಿದ್ದಾರೆ. ಅವರ ಬಳಿ ಏಳು ವಾಹನಗಳಿವೆ.

ಪರಮೇಶ್ವರ್‌ ಎಲ್‌ಐಸಿ ಏಜೆಂಟ್‌!
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಕುಟುಂಬದ ಚರ ಮತ್ತು ಸ್ಥಿರಾಸ್ತಿಯು 5 ವರ್ಷಗಳಲ್ಲಿ ದುಪ್ಪಟ್ಟಾಗಿದೆ. 2013ರಲ್ಲಿ ₹ 6.61 ಕೋಟಿ ಚರ, ಸ್ಥಿರಾಸ್ತಿ ಘೋಷಿಸಿಕೊಂಡಿದ್ದ ಪರಮೇಶ್ವರ್ ಕುಟುಂಬದ ಆಸ್ತಿಯು 2018ರಲ್ಲಿ ₹ 18.38 ಕೋಟಿಯಾಗಿದೆ. ಹಾಗೆಯೇ ₹ 9.31 ಕೋಟಿ ಸಾಲವನ್ನೂ ಹೊಂದಿದ್ದಾರೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಜಂಟಿ ನಿರ್ದೇಶಕ, ಎಲ್‌ಐಸಿ ಏಜೆಂಟ್, ಕೃಷಿ ಸಲಹೆಗಾರರೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT