ಗುರುವಾರ , ಮೇ 19, 2022
24 °C

IPL 2021: ದೊಡ್ಡ ಮೊತ್ತಕ್ಕೆ ಹರಾಜಾದಾಗ ಕೃಷ್ಣಪ್ಪ ಗೌತಮ್ ಸಂಭ್ರಮ ಹೇಗಿತ್ತು?

ಪಿಟಿಐ Updated:

ಅಕ್ಷರ ಗಾತ್ರ : | |

Krishnappa Gowtham

ಅಹಮದಾಬಾದ್: ಐಪಿಎಲ್‌ ಹರಾಜಿನಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ₹9.25 ಕೋಟಿಗೆ ಖರೀದಿಸಿದಾಗ ಅವರ ತಂದೆ, ತಾಯಿ ಹಾಗೂ ಪತ್ನಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹರಾಜಿನ ವೇಳೆ ಗೌತಮ್ ಅವರಲ್ಲಿದ್ದ ತಳಮಳವೂ ಅಷ್ಟಿಷ್ಟಲ್ಲ. ಈ ಕುರಿತು ಅವರೇ ಮುಕ್ತವಾಗಿ ಮಾತನಾಡಿದ್ದಾರೆ.

ಹರಾಜಿನ ಬಗ್ಗೆ ಪ್ರತಿಕ್ರಿಯಿಸಿರುವ ಗೌತಮ್, ‘ಅದೊಂದು ಅದ್ಭುತ ಕ್ಷಣವಾಗಿತ್ತು. ಟಿವಿಯಲ್ಲಿ ಹರಾಜು ಪ್ರಕ್ರಿಯೆ ನೋಡುತ್ತಿದ್ದ ನಾನು ಉದ್ವೇಗಕ್ಕೊಳಗಾಗಿದ್ದೆ’ ಎಂದು ‘ಇಎಸ್‌ಪಿಎನ್ ‌ಕ್ರಿಕ್‌ಇನ್ಫೊ’ಗೆ ತಿಳಿಸಿದ್ದಾರೆ.

ಓದಿ: 

ಗೌತಮ್ ಅವರು ಸದ್ಯ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಲಿರುವ ಟೀಮ್ ಇಂಡಿಯಾ ಜತೆ ನೆಟ್ ಬೌಲರ್ ಆಗಿ ಅಹಮದಾಬಾದ್‌ನಲ್ಲಿದ್ದಾರೆ.

‘ನಾವು ಆಗತಾನೇ ಅಹಮದಾಬಾದ್ ತಲುಪಿದ್ದೆವು. ಟಿವಿ ಆನ್‌ ಮಾಡಿದಾಗ ನನ್ನ ಹೆಸರು ಬಂತು. ಪ್ರತಿ ಕ್ಷಣ ಭಾವನೆಗಳು ಬದಲಾಗುತ್ತಿದ್ದವು. ಅಷ್ಟರಲ್ಲಿ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರು ಬಾಗಿಲು ತಟ್ಟಿದರು. ಒಳಬಂದು ಅಪ್ಪುಗೆ ಮೂಲಕ ಅಭಿನಂದನೆ ಸಲ್ಲಿಸಿದರು. ದೊಡ್ಡ ಸತ್ಕಾರ (ಟ್ರೀಟ್) ನೀಡಬೇಕೆಂದು ಕೇಳಿದರು’

ಗೌತಮ್ ಅವರಿಗೆ ₹20 ಲಕ್ಷ ಮೂಲ ಬೆಲೆ ನಿಗದಿಪಡಿಸಲಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ತಡವಾಗಿ ಬಿಡ್ ಸಲ್ಲಿಸುವ ಮುನ್ನವೇ ಅವರ ಖರೀದಿಗೆ ಕೋಲ್ಕತ್ತಾ ನೈಟ್‌ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ತೀವ್ರ ಪೈ‍ಪೋಟಿ ನಡೆದಿತ್ತು.

2018ರಿಂದ ಐಪಿಎಲ್‌ನ ಮೂರು ಆವೃತ್ತಿಗಳಲ್ಲಿ ಆಡಿರುವ ಗೌತಮ್ 24 ಪಂದ್ಯಗಳಲ್ಲಿ ಆಡಿದ್ದಾರೆ. 186 ರನ್ ಗಳಿಸಿದ್ದು, 13 ವಿಕೆಟ್ ಪಡೆದಿದ್ದಾರೆ.

ನೋಡಿ: 

2018 ಹಾಗೂ 2019ರ ಅವಧಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ 15 ಹಾಗೂ 7 ಪಂದ್ಯ ಆಡಿದ್ದಾರೆ. ಬಳಿಕ 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 2 ಪಂದ್ಯ ಆಡಿದ್ದಾರೆ.

ಶುಭ ಸುದ್ದಿ ಕೇಳುತ್ತಿದ್ದಂತೆ ಬೆಂಗಳೂರಿನಲ್ಲಿರುವ, ಗೌತಮ್ ಅವರ ತಂದೆ–ತಾಯಿ ಹಾಗೂ ಪತ್ನಿಯ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತಂತೆ.

ಇದನ್ನು ಬಹಿರಂಗಪಡಿಸಿದ ಗೌತಮ್, ‘ನನಗಾಗಿ ನನ್ನ ತಂದೆ–ತಾಯಿಯೂ ಸಂಭ್ರಮಪಟ್ಟರು’ ಎಂದಿದ್ದಾರೆ.

‘ಭಾವನೆಗಳನ್ನು ವ್ಯಕ್ತಪಡಿಸುವುದು ಕಷ್ಟ. ಅದರಲ್ಲಿ ಮುಳುಗಿಹೋದೆ. ನಾನು ಹರಾಜಿನ ಭಾಗವಾಗಿರುವುದು ಇದೇ ಮೊದಲಲ್ಲ. ಆದರೆ ಪ್ರತಿ ಬಾರಿ ಹರಾಜಿನ ವೇಳೆ ನಮ್ಮ ಹೆಸರು ಬಂದಾಗ, ನಮ್ಮಲ್ಲಾಗುವ ತಳಮಳ ಊಹಿಸಲಾಗದ್ದು’ ಎಂದು ಗೌತಮ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು