ಸೋಮವಾರ, ಏಪ್ರಿಲ್ 19, 2021
32 °C
‘ಮಾಗಿದ ವೈನ್‌’ಗೆ ಹೋಲಿಕೆ

ಹರಭಜನ್‌ಸಿಂಗ್, ಇಮ್ರಾನ್‌ ತಾಹಿರ್‌ಗೆ ಧೋನಿ ಶ್ಲಾಘನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ಸಾಬೀತು ಮಾಡಿದ ಅನುಭವಿ ಸ್ಪಿನ್ನರ್‌ಗಳಾದ ಇಮ್ರಾನ್‌ ತಾಹಿರ್ ಮತ್ತು ಹರಭಜನ್ ಸಿಂಗ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ‘ಮಾಗಿದ ವೈನ್’ಗೆ ಹೋಲಿಸಿದ್ದಾರೆ.

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಜಯ ಗಳಿಸಿದ ಖುಷಿ ಹಂಚಿಕೊಂಡ ಧೋನಿ, ಯಾವುದೇ ಪಂದ್ಯವಿರಲಿ, ಹರಭಜನ್‌ ಉತ್ತಮ ಸಾಮರ್ಥ್ಯ ತೋರುತ್ತಾರೆ. ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ಕೈಗೆ ಚೆಂಡು ನೀಡಿದರೆ ತಾಹಿರ್ ಕೈ ಹಿಡಿಯುತ್ತಾರೆ ಎಂದರು.

‘ತಾಹಿರ್‌, ತಮಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಆದ್ದರಿಂದ ಅವರು ತಂಡದಲ್ಲಿದ್ದರೆ ಹೆಚ್ಚು ಭರವಸೆ ಇರುತ್ತದೆ. ಗೂಗ್ಲಿ ಮತ್ತು ಫ್ಲಿಪರ್ ಎಸೆತಗಳೂ ಅವರ ಬತ್ತಳಿಕೆಯಲ್ಲಿ ಇರುವುದು ವಿಶೇಷ. ಉತ್ತಮವಾಗಿ ಬ್ಯಾಟ್ ಮಾಡುವ ಸಾಮರ್ಥ್ಯವೂ ಅವರಲ್ಲಿದೆ’ ಎಂದು ಧೋನಿ ಹೇಳಿದರು.

ತಂಡದ ಬೌಲಿಂಗ್ ವಿಭಾಗ ಉತ್ತಮವಾಗಿದೆ. ಆದರೆ, ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಕೋಲ್ಕತ್ತ ನೈಟ್‌ ರೈಡರ್ಸ್ ಎದುರು ಏಳು ವಿಕೆಟ್‌ಗಳಿಂದ ಗೆದ್ದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನೈಟ್‌ ರೈಡರ್ಸ್‌ ಒಂಬತ್ತು ವಿಕೆಟ್‌ಗಳಿಗೆ 108 ರನ್‌ ಗಳಿಸಿತ್ತು. ಸೂಪರ್ ಕಿಂಗ್ಸ್‌ 17.2 ಓವರ್‌ಗಳಲ್ಲಿ ಗುರಿ ಮುಟ್ಟಿತ್ತು. 38 ವರ್ಷದ ಹರಭಜನ್‌ ಸಿಂಗ್‌ ಪಂದ್ಯದಲ್ಲಿ 15ಕ್ಕೆ 2, 40 ವರ್ಷದ ತಾಹಿರ್ 21ಕ್ಕೆ2 ಕಬಳಿಸಿದ್ದರು.

ಪಿಚ್ ಬಗ್ಗೆ ಅಸಮಾಧಾನ

ತವರಿನಲ್ಲಿ ಈವರೆಗೆ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದರೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇಲ್ಲಿನ ಪಿಚ್‌ ಬಗ್ಗೆ ಅಸಮಾಧಾನವನ್ನು ಮುಂದುವರಿಸಿದ್ದಾರೆ. ಟೂರ್ನಿಯ ಉದ್ಘಾಟನಾ ಪಂದ್ಯದಂತೆಯೇ ಮಂಗಳವಾರದ ಪಂದ್ಯದಲ್ಲೂ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಸೂಪರ್‌ ಕಿಂಗ್ಸ್‌ 18ನೇ ಓವರ್‌ನಲ್ಲಿ ಜಯಿಸಿತ್ತು.

‘ಇಂಥ ಪಿಚ್‌ಗಳಲ್ಲಿ ಆಡುವುದಾದರೂ ಯಾಕೆ ಎಂಬ ಪ್ರಶ್ನೆ ನಿರಂತರವಾಗಿ ಕಾಡುತ್ತಿದೆ. ಬ್ಯಾಟ್ಸ್‌ಮನ್‌ಗಳು ಇಲ್ಲಿ ರನ್ ಗಳಿಸಲು ಪರದಾಡಬೇಕಾಗಿದೆ. ಹೀಗಾಗಿ ಹೆಚ್ಚು ಮೊತ್ತ ಪೇರಿಸಲು ಆಗುತ್ತಿಲ್ಲ. ಡ್ವೇನ್‌ ಬ್ರಾವೊ ಔಟಾದ ನಂತರ ಸಮರ್ಪಕ ಜೊತೆಯಾಟ ಆಡಲು ನಮ್ಮ ತಂಡಕ್ಕೂ ಕಷ್ಟವಾಯಿತು’ ಎಂದು ಧೋನಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು