ಸೋಮವಾರ, ಸೆಪ್ಟೆಂಬರ್ 23, 2019
22 °C

ಕ್ರಿಕೆಟ್‌: ಮುನ್ನಡೆಯತ್ತ ನ್ಯೂಜಿಲೆಂಡ್‌ ಹೆಜ್ಜೆ

Published:
Updated:
Prajavani

ಕೊಲಂಬೊ: ಸಾರಾ ಓವಲ್‌ ಮೈದಾನದಲ್ಲಿ ಶನಿವಾರ ಶತಕ ಸಿಡಿಸಿದ ಟಾಮ್‌ ಲಥಾಮ್‌ (ಬ್ಯಾಟಿಂಗ್‌ 111; 184ಎ, 10ಬೌಂ) ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮುನ್ನಡೆಯತ್ತ ಕೊಂಡೊಯ್ದಿದ್ದಾರೆ.

6 ವಿಕೆಟ್‌ಗೆ 144ರನ್‌ಗಳಿಂದ ಶನಿವಾರ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ ಶ್ರೀಲಂಕಾ 90.2 ಓವರ್‌ಗಳಲ್ಲಿ 244 ರನ್‌ ದಾಖಲಿಸಿತು. ಪ್ರಥಮ ಇನಿಂಗ್ಸ್‌ ಶುರುಮಾಡಿರುವ ಕೇನ್‌ ವಿಲಿಯಮ್ಸನ್‌ ಸಾರಥ್ಯದ ನ್ಯೂಜಿಲೆಂಡ್‌ ಮೂರನೇ ದಿನದಾಟದ ಅಂತ್ಯಕ್ಕೆ 62 ಓವರ್‌ಗಳಲ್ಲಿ 4 ವಿಕೆಟ್‌ಗೆ 196ರನ್‌ ಪೇರಿಸಿದೆ. ಮುನ್ನಡೆಗಾಗಿ ಪ್ರವಾಸಿ ತಂಡ ಇನ್ನು 48ರನ್‌ ಕಲೆಹಾಕಬೇಕು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಧನಂಜಯ ಡಿಸಿಲ್ವಾ (109; 148ಎ, 16ಬೌಂ, 2ಸಿ) ದಿನದ ಮೊದಲ ಅವಧಿಯಲ್ಲಿ ನ್ಯೂಜಿಲೆಂಡ್‌ ಬೌಲರ್‌ಗಳನ್ನು ಕಾಡಿದರು. ಟೆಸ್ಟ್‌ ಮಾದರಿಯಲ್ಲಿ ಐದನೇ ಶತಕ ಸಿಡಿಸಿ ತಂಡ ಉತ್ತಮ ಮೊತ್ತ ಕಲೆಹಾಕಲು ನೆರವಾದರು.

ಆರಂಭಿಕ ಸಂಕಷ್ಟ: ಇನಿಂಗ್ಸ್‌ ಆರಂಭಿಸಿದ ಕಿವೀಸ್‌ ತಂಡಕ್ಕೆ ನಾಲ್ಕನೇ ಓವರ್‌ನಲ್ಲಿ ಆಘಾತ ಎದುರಾಯಿತು. ದಿಲ್ರುವಾನ ಪೆರೇರಾ ಹಾಕಿದ ಮೊದಲ ಎಸೆತದಲ್ಲಿ ಜೀತ್‌ ರಾವಲ್‌ (0) ಧನಂಜಯ ಡಿಸಿಲ್ವಾಗೆ ಕ್ಯಾಚ್‌ ನೀಡಿದರು.

ನಾಯಕ ವಿಲಿಯಮ್ಸನ್‌ (20) ಮತ್ತು ಅನುಭವಿ ಆಟಗಾರ ರಾಸ್‌ ಟೇಲರ್‌ (23) ಕೂಡ ವಿಕೆಟ್‌ ನೀಡಲು ಅವಸರಿಸಿದರು!

ಪ್ರಮುಖರು ಬೇಗನೆ ಪೆವಿಲಿಯನ್‌ ಸೇರಿದರೂ ಲಥಾಮ್‌ ಎದೆಗುಂದಲಿಲ್ಲ. ಲಂಕಾ ಬೌಲರ್‌ಗಳ ಎಸೆತಗಳನ್ನು ಎಚ್ಚರಿಕೆಯಿಂದಲೇ ಎದುರಿಸಿದ ಅವರು ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ರನ್‌ ಗಳಿಕೆಯ ವೇಗ ಹೆಚ್ಚಿಸಲು ಪ್ರಯತ್ನಿಸಿದರು. ಟೆಸ್ಟ್‌ ಮಾದರಿಯಲ್ಲಿ 10ನೇ ಶತಕ ಸಿಡಿಸಿ ಸಂಭ್ರಮಿಸಿದರು. ಇದು, ಶ್ರೀಲಂಕಾ ಎದುರು ಅವರು ಗಳಿಸಿದ ನಾಲ್ಕನೇ ಶತಕ.

ಲಥಾಮ್‌ಗೆ ವಿಕೆಟ್‌ ಕೀಪರ್‌ ಬಿ.ಜೆ.ವಾಟ್ಲಿಂಗ್‌ (ಬ್ಯಾಟಿಂಗ್‌ 25; 62ಎ, 2ಬೌಂ) ಉತ್ತಮ ಬೆಂಬಲ ನೀಡಿದರು. ಈ ಜೋಡಿ ಮುರಿಯದ ಐದನೇ ವಿಕೆಟ್‌ಗೆ 70ರನ್‌ ಸೇರಿಸಿತು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ; ಮೊದಲ ಇನಿಂಗ್ಸ್‌: 90.2 ಓವರ್‌ಗಳಲ್ಲಿ 244 (ಧನಂಜಯ ಡಿಸಿಲ್ವಾ 109, ದಿಲ್ರುವಾನ ಪೆರೇರಾ 13, ಸುರಂಗ ಲಕ್ಮಲ್‌ 10; ಟ್ರೆಂಟ್‌ ಬೌಲ್ಟ್‌ 75ಕ್ಕೆ3, ಟಿಮ್‌ ಸೌಥಿ 63ಕ್ಕೆ4, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 35ಕ್ಕೆ1, ವಿಲಿಯಮ್‌ ಸೋಮರ್‌ವಿಲ್‌ 20ಕ್ಕೆ1, ಅಜಾಜ್‌ ಪಟೇಲ್‌ 48ಕ್ಕೆ1).

ನ್ಯೂಜಿಲೆಂಡ್‌: ಪ್ರಥಮ ಇನಿಂಗ್ಸ್‌; 62 ಓವರ್‌ಗಳಲ್ಲಿ 4 ವಿಕೆಟ್‌ಗೆ 196 (ಟಾಮ್‌ ಲಥಾಮ್‌ ಬ್ಯಾಟಿಂಗ್‌ 111, ಕೇನ್‌ ವಿಲಿಯಮ್ಸನ್‌ 20, ರಾಸ್‌ ಟೇಲರ್‌ 23, ಹೆನ್ರಿ ನಿಕೋಲ್ಸ್‌ 15, ಬಿ.ಜೆ.ವಾಟ್ಲಿಂಗ್‌ ಬ್ಯಾಟಿಂಗ್‌ 25; ದಿಲ್ರುವಾನ ಪೆರೇರಾ 76ಕ್ಕೆ2, ಲಾಹಿರು ಕುಮಾರ 44ಕ್ಕೆ1, ಲಸಿತ್‌ ಎಂಬುಲ್ದೆನಿಯಾ 58ಕ್ಕೆ1).

Post Comments (+)