ಬುಧವಾರ, ಜುಲೈ 6, 2022
22 °C
ವಿಕೆಟ್ ಕೀಪರ್ ಬ್ಯಾಟರ್ ಹೇಳಿಕೆಯಿಂದ ನೋವಾಗಿಲ್ಲ ಎಂದು ಹೇಳಿದ ‘ಗೋಡೆ’

ವೃದ್ಧಿಮಾನ್‌ ಸ್ಪಷ್ಟತೆಗೆ ಅರ್ಹರು: ದ್ರಾವಿಡ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಹಾ ಭಾರತ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಮತ್ತು ಅವರ ಸಾಧನೆಯ ಬಗ್ಗೆ ಗೌರವವಿದೆ ಎಂದು ಹೇಳಿರುವ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ವೃದ್ಧಿಮಾನ್ ಸಹಾ ಸ್ಪಷ್ಟತೆಗೆ ಅರ್ಹರಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ದಕ್ಷಿಣ ಆಫ್ರಿಕಾ ‍ಪ್ರವಾಸದ ನಂತರ ನಡೆದ ಮಾತುಕತೆಯ ನಡುವೆ ಕ್ರಿಕೆಟ್‌ನಿಂದ  ನಿವೃತ್ತಿ ಪಡೆಯುವಂತೆ ದ್ರಾವಿಡ್ ತಮಗೆ ಸೂಚಿಸಿದ್ದರು ಎಂದು ಹೇಳಿ ಸಹಾ ಭಾನುವಾರ ವಿವಾದ ಸೃಷ್ಟಿಸಿದ್ದರು. ವೆಸ್ಟ್ ಇಂಡೀಸ್ ಎದುರಿನ ಟ್ವೆಂಟಿ20 ಸರಣಿಯ ಕೊನೆಯ ಪಂದ್ಯದ ನಂತರ ಈ ಕುರಿತ ಪ್ರಶ್ನೆಗೆ ದ್ರಾವಿಡ್ ಉತ್ತರಿಸಿದರು.

‘ಸಹಾ ಹೇಳಿಕೆಯಿಂದ ನನಗೆ ಬೇಸರವಾಗಲಿಲ್ಲ. ತಂಡದಿಂದ ಸ್ಥಾನ ಕಳೆದುಕೊಂಡಾಗ ಬೇಸರವಾಗುವುದು ಸಹಜ. ವೃದ್ಧಿಮಾನ್ ಸಹಾ ಕೂಡ ಅದೇ ಭಾವನೆಯಲ್ಲಿ ಮಾತನಾಡಿದ್ದಾರೆ. ಬೇಸರ ತೋಡಿಕೊಳ್ಳಲು ಅವರಿಗೆ ಅವಕಾಶವಿದೆ’ ಎಂದು ದ್ರಾವಿಡ್ ಹೇಳಿದರು.   

ಸತತ ಫಾರ್ಮ್ ಕಳೆದುಕೊಂಡಿರುವ ವೃದ್ಧಿಮಾನ್‌ ಸಹಾ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಈಚೆಗೆ ತೆರೆ ಬಿದ್ದಂತಾಗಿದೆ. ಈ ಹಿನ್ನೆಲೆಯಲ್ಲಿ ಅವರು ದ್ರಾವಿಡ್ ಜೊತೆಗಿನ ಸಂಭಾಷಣೆಯ ವಿಷಯವನ್ನು ಬಹಿರಂಗ ಮಾಡಿದ್ದರು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ದ್ರಾವಿಡ್ ‘ಸಹಾ ಸದ್ಯ ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದನ್ನು ನೆನಪಿಸುವುದಷ್ಟೇ ನನ್ನ ಮಾತಿನ ಉದ್ದೇಶವಾಗಿತ್ತು. ಅದಕ್ಕೆ ಸಂರ್ಬಂಧಿಸಿ ಹೇಳಿಕೆ ನೀಡಲು ಅವರು ಅರ್ಹರು. ಆಟಗಾರರಿಗೆ ಇಷ್ಟವಿರಲಿ, ಇಲ್ಲದಿರಲಿ ಇಂಥ ಸಂಭಾಷಣೆಗಳನ್ನು ನಿರಂತರವಾಗಿ ನಡೆಸಲು ಇಚ್ಛಿಸುತ್ತೇನೆ‘ ಎಂದಿದ್ದಾರೆ.   

37 ವರ್ಷದ ಸಹಾ ಭಾರತಕ್ಕಾಗಿ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಶ್ರೀಲಂಕಾ ಎದುರಿನ ಸರಣಿಗೆ ಪ್ರಕಟಿಸಿರುವ ತಂಡದಿಂದ ಅವರನ್ನು ಕೈಬಿಡಲಾಗಿದೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಅಡದೇ ಇರಲು ಅವರೇ ನಿರ್ಧರಿಸಿದ್ದಾರೆ.  

‘ವಿಕೆಟ್ ಕೀಪರ್ ರಿಷಭ್ ಪಂತ್ ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಎಲ್ಲ ಮಾದರಿಯಲ್ಲೂ ಅತ್ಯುತ್ತಮ ವಿಕೆಟ್ ಕೀಪರ್ ಎಂದೆನಿಸಿಕೊಂಡಿದ್ದಾರೆ. ಆದ್ದರಿಂದ ವೃದ್ಧಿಮಾನ್‌ಗೆ ಅವಕಾಶಗಳು ಸಿಗುವುದು ಕಷ್ಟ ಎಂಬುದು ಸ್ಪಷ್ಟ. ಇದೇ ವೇಳೆ ಕೋನಾ ಭರತ್‌ ಕೂಡ ಭರವಸೆ ಮೂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ನಾನು ಸಲಹೆ ನೀಡಿದ್ದೆ‘ ಎಂದು ರಾಹುಲ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು