ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ರಾಹುಲ್‌–ಪಾಂಡ್ಯಗೆ ನೋಟಿಸ್‌

ಬುಧವಾರ, ಏಪ್ರಿಲ್ 24, 2019
31 °C
‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ

ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ರಾಹುಲ್‌–ಪಾಂಡ್ಯಗೆ ನೋಟಿಸ್‌

Published:
Updated:
Prajavani

ನವದೆಹಲಿ: ‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗರಾದ ಕೆ.ಎಲ್‌.ರಾಹುಲ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರಿಗೆ ಸೋಮವಾರ ನೋಟಿಸ್‌ ನೀಡಲಾಗಿದೆ.

ಸುಪ್ರೀಂಕೋರ್ಟ್‌ನಿಂದ ಬಿಸಿಸಿಐಗೆ ನೇಮಕವಾಗಿರುವ ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಅವರು ಉಭಯ ಕ್ರಿಕೆಟಿಗರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಬಾಲಿವುಡ್ ನಿರ್ದೇಶಕ ಕರಣ್‌ ಜೋಹರ್ ನಡೆಸಿಕೊಡುವ ಸೆಲೆಬ್ರಿಟಿ ಚಾಟ್ ಕಾರ್ಯಕ್ರಮದಲ್ಲಿ ರಾಹುಲ್ ಮತ್ತು ಹಾರ್ದಿಕ್ ಭಾಗವಹಿಸಿದ್ದರು. ಅದರಲ್ಲಿ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸಂಬಂಧ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಇಬ್ಬರಿಗೂ ಶೋಕಾಸ್‌ ನೋಟಿಸ್ ನೀಡಿತ್ತು. ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಇಬ್ಬರನ್ನೂ ತಾತ್ಕಾಲಿಕವಾಗಿ ಅಮಾನತು ಮಾಡಿತ್ತು. ಉಭಯ ಆಟಗಾರರು ಬಹಿರಂಗ ಕ್ಷಮೆಯಾಚಿಸಿದ ನಂತರ ಅಮಾನತು ರದ್ದು ಮಾಡಿತ್ತು.

‘ತಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದರ ಬಗ್ಗೆ ವಿವರಣೆ ನೀಡುವಂತೆ ಹೋದ ವಾರವೇ ರಾಹುಲ್‌ ಮತ್ತು ಹಾರ್ದಿಕ್‌ಗೆ ನೋಟಿಸ್‌ ಜಾರಿ ಮಾಡಿದ್ದೇನೆ’ ಎಂದು ನಿವೃತ್ತ ನ್ಯಾಯಮೂರ್ತಿ ಜೈನ್‌ ತಿಳಿಸಿದ್ದಾರೆ.

ಹಾರ್ದಿಕ್‌ ಮತ್ತು ರಾಹುಲ್‌ ಈ ಬಾರಿಯ ಐಪಿಎಲ್‌ನಲ್ಲಿ ಕ್ರಮವಾಗಿ ಮುಂಬೈ ಇಂಡಿಯನ್ಸ್‌ ಮತ್ತು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡಗಳಲ್ಲಿ ಆಡುತ್ತಿದ್ದಾರೆ. ಉಭಯ ತಂಡಗಳು ಏಪ್ರಿಲ್‌ 10 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ಆಡಲಿವೆ. ಅಂದು ಉಭಯ ಆಟಗಾರರೂ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

‘ಪ್ರಕರಣಕ್ಕೆ ಶೀಘ್ರವೇ ಅಂತ್ಯ ಹಾಡಬೇಕು ಅಂದುಕೊಂಡಿದ್ದೇನೆ. ಇದಕ್ಕಾಗಿ ಇಬ್ಬರ ಹೇಳಿಕೆಗಳನ್ನೂ ಪಡೆಯಬೇಕಿದೆ. ಯಾವಾಗ ವಿಚಾರಣೆಗೆ ಹಾಜರಾಗಬೇಕು ಎಂಬುದನ್ನು ಅವರೇ ನಿರ್ಧರಿಸಲಿ’ ಎಂದು ಜೈನ್‌ ಹೇಳಿದ್ದಾರೆ.

ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ, ಐಪಿಎಲ್‌ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಲಹೆಗಾರರಾಗಿಯೂ ನೇಮಕಗೊಂಡಿದ್ದಾರೆ. ಇದು ಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಡಲಿದ್ದು ಈ ಕುರಿತು ತನಿಖೆ ನಡೆಸಬೇಕೆಂಬ ಕೂಗೂ ಕೇಳಿಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜೈನ್‌ ‘ಸೋಮವಾರ ಸಾಕಷ್ಟು ಅರ್ಜಿಗಳು ಬಂದಿವೆ. ಈ ಪೈಕಿ ಗಂಗೂಲಿ ಬಗ್ಗೆ ವಿಚಾರಣೆ ನಡೆಸುವಂತೆ ಒತ್ತಾಯಿಸಿ ಯಾರಾದರು ದೂರು ನೀಡಿದ್ದರೆ ಅದನ್ನು ಪರಿಶೀಲಿಸಲಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !