ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಎಲ್‌ ಟೂರ್ನಿಯಲ್ಲಿ ಆಡಿದ ಮೊದಲ ಭಾರತೀಯ ಪ್ರವೀಣ್‌ ತಾಂಬೆ

Last Updated 27 ಆಗಸ್ಟ್ 2020, 5:11 IST
ಅಕ್ಷರ ಗಾತ್ರ

ನವದೆಹಲಿ : ಲೆಗ್‌ ಸ್ಪಿನ್ನರ್‌, 48 ವರ್ಷದ ಪ್ರವೀಣ್ ತಾಂಬೆ ಅವರು ಬುಧವಾರ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಟ್ರಿನ್‌ಬ್ಯಾಗೊ ಪರ ಮೊದಲ ಪಂದ್ಯದಲ್ಲಿ ಅವರು ಸೇಂಟ್‌ ಲೂಸಿಯಾ ಜೌಕ್ಸ್‌ ವಿರುದ್ಧ ಕಣಕ್ಕಿಳಿದಿದ್ದರು.

ತಾಂಬೆ ಅವರು ಸಿಪಿಎಲ್‌ನಲ್ಲಿ ಆಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಈ ಹಿಂದೆ ಭಾರತ 19 ವರ್ಷದೊಳಗಿನವರ ತಂಡಕ್ಕೆ ಆಡಿದ್ದ 32 ವರ್ಷದ ಸನ್ನಿ ಸೋಹಲ್‌ ಅವರು 2018ರಲ್ಲಿ ಸಿಪಿಎಲ್‌ನ ಬಾರ್ಬಡಾಸ್‌ ಟ್ರೈಡೆಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಆ ವೇಳೆ ಅವರು ಅಮೆರಿಕ ರಾಷ್ಟ್ರೀಯ ತಂಡದ ಆಟಗಾರನಾಗಿದ್ದರು.

2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು ತಾಂಬೆ. ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಅವರನ್ನು ಸೇರಿಸಿಕೊಂಡಿತ್ತು. ಆದರೆ ಯುಎಇಯಲ್ಲಿ ನಡೆದ ಟಿ10 ಲೀಗ್‌ನಲ್ಲಿ ಆಡಿದ ಕಾರಣಕ್ಕಾಗಿ ಬಿಸಿಸಿಐ ಅವರನ್ನು ಅನರ್ಹಗೊಳಿಸಿತ್ತು. ಹೀಗಾಗಿ ಸಿಪಿಎಲ್‌ ಟೂರ್ನಿಯ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದರು.

ಬಿಸಿಸಿಐನ ಮಾರ್ಗಸೂಚಿಗಳ ಅನ್ವಯ, ಭಾರತದ ಆಟಗಾರರು ದೇಶಿ ಕ್ರಿಕೆಟ್‌ನಿಂದ ನಿವೃತ್ತಿಯಾಗದೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸುವಂತಿಲ್ಲ. 2018ರಲ್ಲಿ ತಾಂಬೆ ಮಾನ್ಯತೆಯಿಲ್ಲದ ಟಿ10 ಲೀಗ್‌ನಲ್ಲಿ ಆಡಿದ್ದರು.

ಐಪಿಎಲ್‌ನಲ್ಲಿ 33 ಪಂದ್ಯಗಳನ್ನು ಆಡಿರುವ ತಾಂಬೆ 30.5 ಸರಾಸರಿಯಲ್ಲಿ 28 ವಿಕೆಟ್‌ ಗಳಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್, ಗುಜರಾತ್‌ ಲಯನ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳನ್ನು ಅವರು ಪ್ರತಿನಿಧಿಸಿದ್ದಾರೆ.

ತಮ್ಮ 41ನೇ ವಯಸ್ಸಿನಲ್ಲಿ ಅಂದರೆ 2013ರಲ್ಲಿ ಅವರು ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT